ಗಾಳಿ-ಮಳೆಗೆ ನೆಲಕ್ಕೊರಗಿದ ಬಾಳೆ ಬೆಳೆ

KannadaprabhaNewsNetwork |  
Published : Mar 19, 2026, 02:00 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಬಿರುಗಾಳಿ ಮತ್ತು ಮಳೆಗೆ ಧ್ವಂಸವಾಗಿರುವ ಪ್ರಭು ರೆಡ್ಡಿಯವರ ಬಾಳೆ ತೋಟ. | Kannada Prabha

ಸಾರಾಂಶ

ತೋಟದಲ್ಲಿದ್ದ ೨೪೦೦ ಬಾಳೆ ಗಿಡಗಳು ಬಾಳೆ ಗೊನೆಗಳಿಂದ ನಳನಳಿಸುತ್ತಿದ್ದವು. 15 ದಿನ ಮಳೆ ತಡವಾಗಿದ್ದರೆ ಕಟಾವು ಮಾಡಿ ಮಾರುಕಟ್ಟೆಯತ್ತ ತೆರಳಲು ಸಿದ್ಧವಾಗಿದ್ದವು.

ಹಗರಿಬೊಮ್ಮನಹಳ್ಳಿ: ಮಂಗಳವಾರ ರಾತ್ರಿಯಿಡೀ ಬೀಸಿದ ಗಾಳಿ, ಸುರಿದ ಮಳೆಗೆ ತಾಲೂಕಿನ ತಂಬ್ರಹಳ್ಳಿ ಹೋಬಳಿಯ ಉದ್ದಕ್ಕೂ ಬಾಳೆ, ಮೆಕ್ಕೆಜೋಳ, ರಾಗಿ ಬೆಳೆಗಳು ನೆಲಕ್ಕೊರಗಿ ಭರಪೂರ ಲಾಭದ ನಿರೀಕ್ಷೆಯಲ್ಲಿದ್ದ ರೈತರ ಕನಸುಗಳನ್ನು ಹೊಸಕಿ ಹಾಕಿದೆ.ಮಂಗಳವಾರ ಗಾಳಿಯ ರುದ್ರ ತಾಂಡವಕ್ಕೆ ಗ್ರಾಮದ ರೈತ ಪ್ರಭುರೆಡ್ಡಿ ಅವರ ಎರಡು ಎಕರೆ ಬಾಳೆ ತೋಟ ಪೂರ್ತಿಯಾಗಿ ಧ್ವಂಸವಾಗಿದೆ. ತೋಟದಲ್ಲಿದ್ದ ೨೪೦೦ ಬಾಳೆ ಗಿಡಗಳು ಬಾಳೆ ಗೊನೆಗಳಿಂದ ನಳನಳಿಸುತ್ತಿದ್ದವು. 15 ದಿನ ಮಳೆ ತಡವಾಗಿದ್ದರೆ ಕಟಾವು ಮಾಡಿ ಮಾರುಕಟ್ಟೆಯತ್ತ ತೆರಳಲು ಸಿದ್ಧವಾಗಿದ್ದವು.

ಸೋಮವಾರ ತೋಟದಲ್ಲಿ ಮಾಗಿದ್ದ ಆಯ್ದ ಗೊನೆಗಳ ಒಂದೂವರೆ ಟನ್ ಏಲಕ್ಕಿ ಬಾಳೆ ಕಟಾವು ಮಾಡಿ ಪಟ್ಟಣದಲ್ಲಿ ₹೫೮ ಸಾವಿರಕ್ಕೆ ಮಾರಾಟ ಮಾಡಿ ಬಂದಿದ್ದ ರೈತ ಪ್ರಭು, ಇಡೀ ತೋಟದ ಬಾಳೆಗೊನೆಗಳ ಮಾರಾಟದಿಂದ ನಿವ್ವಳ ₹೮ ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದರು.

ಕಳೆದ ವರ್ಷ ತೋಟಗಾರಿಕೆ ಇಲಾಖೆ ಒದಗಿಸಿದ್ದ ೨೪೦೦ ಸಸಿಗಳನ್ನು ತಮ್ಮ ಎರಡು ಎಕರೆ ತೋಟದಲ್ಲಿ ₹೧ ಲಕ್ಷ ವೆಚ್ಚದಲ್ಲಿ ನಾಟಿ ಮಾಡಿ ಬಾಳೆ ಕೃಷಿ ಕೈಗೊಂಡು ಐದು ಲಕ್ಷ ರು. ನಿವ್ವಳ ಲಾಭ ಪಡೆದಿದ್ದರು. ಹಿಂದಿನ ವರ್ಷದ ಲಾಭದ ಹಿನ್ನೆಲೆಯಲ್ಲಿ ಈ ಬಾರಿಯೂ ಹೆಚ್ಚು ಲಾಭದ ನಿರೀಕ್ಷೆಯಿಂದಲೇ ಸುವ್ಯವಸ್ಥಿತವಾಗಿ ಬಾಳೆ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಅವರ ಪತ್ನಿ ಅಶ್ವಿನಿ ಕೂಡ ಹಗಲಿರುಳು ಹೆಗಲು ನೀಡಿ ಭರಪೂರ ಬಾಳೆ ಬೆಳೆಗೆ ಶ್ರಮಿಸಿದ್ದರು. ಆದರೆ, ಬೀಸಿದ ರಭಸದ ಗಾಳಿಗೆ ಬಾಳೆ ಗಿಡಗಳು ಬುಡ ಸಮೇತ ನೆಲಕ್ಕುರಳಿವೆ. ಬಾಳೆ ಗೊನೆಗಳು ಮಣ್ಣು ಪಾಲಾಗಿವೆ ಎಂದು ಅವರು ಗದ್ಗದಿತರಾದರು.

ಇಡೀ ತೋಟದ ಎಲ್ಲ ಬಾಳೆ ಗಿಡಗಳು ಕಾಡಾನೆಯೊಂದು ನುಗ್ಗಿ ತೋಟವನ್ನು ಧ್ವಂಸ ಮಾಡಿದೆ ಎನಿಸುವಷ್ಟು ಬಾಳೆ ತೋಟ ಹಾಳಾಗಿದೆ. ಲಾಭದ ಲೆಕ್ಕಾಚಾರ ತಲೆಕೆಳಗಾಗಿ ರೈತ ನಷ್ಟದ ಅಂದಾಜು ಮಾಡಬೇಕಾಗಿ ಬಂದಿರುವುದು ದುರ್ದೈವ.

ಪಕ್ಕದ ಬನ್ನಿಗೋಳು ಗ್ರಾಮದ ಮೈನಳ್ಳಿ ನಿಂಗಾರೆಡ್ಡಿ ಕೃಷ್ಣಪ್ಪ ಅವರ ಕಥೆಯೂ ಭಿನ್ನವಾಗಿಲ್ಲ. ಮುಂಗಾರು ಹಂಗಾಮಿನಲ್ಲಿ ೫ ಎಕರೆ ಈರುಳ್ಳಿ ಬೆಳೆದು ವಿಪರೀತ ಮಳೆಯಿಂದಾಗಿ ಇಳುವರಿ ಲಭಿಸದೇ ಬೆಲೆ ಕುಸಿತದಿಂದ ಹೈರಾಣಾಗಿದ್ದರು. ತಮ್ಮ ೨.೫ ಎಕರೆ ಪ್ರದೇಶದಲ್ಲಿ ೩೦೦೦ ಏಲಕ್ಕಿ ಬಾಳೆಕೃಷಿ ಕೈಗೊಂಡಿದ್ದರು. ಎಲ್ಲ ಬಾಳೆಗಿಡಗಳು ನೆಲಕ್ಕೊರಗಿ ತೀವ್ರ ನಷ್ಟ ಅನುಭವಿಸಿದ್ದಾರೆ.

ಅದೇ ಗ್ರಾಮದ ವೆಂಕಾರೆಡ್ಡಿಯವರ ೫ ಎಕರೆ ಮೆಕ್ಕೆಜೋಳದ ಬೆಳೆ ಮತ್ತು ರಾಗಿ ಬೆಳೆ ಕೂಡ ಗಾಳಿಯಿಂದಾಗಿ ನೆಲಕ್ಕೊರಗಿ ಕಟಾವು ಮಾಡಲು ಸಾಧ್ಯವಾಗದಷ್ಟು ಹಾಳಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ.

ತಂಬ್ರಹಳ್ಳಿ ಹೋಬಳಿಯಲ್ಲಿ ಮಂಗಳವಾರ ರಾತ್ರಿ ೮.೬ ಮಿ.ಮೀ. ಮಳೆಯಾಗಿದೆ. ಹೋಬಳಿ ವ್ಯಾಪ್ತಿಯ ವ್ಯಾಪ್ತಿಯ ನಾನಾ ಹಳ್ಳಿಗಳಲ್ಲಿ ಮುಂಗಾರು ಪೂರ್ವ ಮಳೆ ಹಾಗೂ ಬಿರುಗಾಳಿಗೆ ನಷ್ಟ ಅನುಭವಿಸಿರುವ ರೈತರ ಹೊಲಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ರೈತರ ನೆರವಿಗೆ ಧಾವಿಸಬೇಕು. ಅಕಾಲಿಕ ಪ್ರಕೃತಿ ವಿಕೋಪಕ್ಕೆ ಸಿಲುಕಿ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ
ಎಸ್ಸೆಸ್ಲೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಸುಸೂತ್ರ