ಬಳ್ಳಾರಿ: ಹಿಂದೂ ಸಂಪ್ರದಾಯದ ಹೊಸವರ್ಷ ಎಂದೇ ಪರಿಗಣಿಸಲಾಗುವ ಯುಗಾದಿ ಹಬ್ಬಕ್ಕೆ ಗಣಿಜಿಲ್ಲೆ ಸಜ್ಜಾಗಿದ್ದು ಹಬ್ಬದ ಉತ್ಸಾಹ ಕಳೆಗಟ್ಟಿದೆ.
ಯುಗಾದಿ ಹಬ್ಬಕ್ಕೆ ಕಳೆದ ನಾಲ್ಕೈದು ದಿನಗಳಿಂದ ಮನೆಯ ಸ್ವಚ್ಛತಾ ಕಾರ್ಯ ನಡೆದಿದ್ದು, ಮನೆಗಳ ಅಲಂಕಾರ, ಮನೆಗಳ ಮುಂಭಾಗದಲ್ಲಿ ರಂಗೋಲಿ ಹಾಕುವುದು, ಮಾವಿನ ತೊರಣ ಕಟ್ಟಿ ಅಲಂಕರಿಸುವುದು, ಬೇವು-ಬೆಲ್ಲದ ಸಾಂಪ್ರದಾಯಿಕ ಸವಿಯನ್ನು ತಯಾರಿಸುವ ದೃಶ್ಯಗಳು ಕಂಡು ಬಂದವು. ಯುಗಾದಿಗೆ ಹೊಸ ಬಟ್ಟೆಗಳನ್ನು ಧರಿಸುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದ್ದು ನಗರದ ಪ್ರಮುಖ ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬಂತು.
ಟಿವಿ, ವಾಷಿಂಗ್ ಮಿಷನ್, ಲ್ಯಾಪ್‌ಟ್ಯಾಪ್, ಕಂಪ್ಯೂಟರ್ ಸೇರಿದಂತೆ ವಿವಿಧ ಉಪಕರಣಗಳಿಗೆ ಹಬ್ಬಕ್ಕೆ ಭಾರಿ ರಿಯಾಯಿತಿ ಇರುವುದರಿಂದ ಮಹಿಳೆಯರು ಹಾಗೂ ಯುವಕರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.ಮೊಬೈಲ್, ಎಲೆಕ್ಟ್ರಾನಿಕ್ಸ್, ಉಡುಪು, ಗೃಹೋಪಯೋಗಿ ವಸ್ತುಗಳ ಮೇಲೆ ರಿಯಾಯಿತಿಗಳು ಘೋಷಣೆಯಾಗಿರುವುದರಿಂದ ವ್ಯಾಪಾರ ವಹಿವಾಟು ಚುರುಕಾಗಿತ್ತು. ಪಾರಂಪರಿಕ ಮಾರುಕಟ್ಟೆಗಳ ಜೊತೆಗೆ ಇ-ಕಾಮರ್ಸ್ ವೇದಿಕೆಗಳಲ್ಲಿಯೂ ಯುಗಾದಿ ವಿಶೇಷ ಆಫರ್‌ಗಳು ಆರಂಭಗೊಂಡಿವೆ. ಮೊಬೈಲ್, ಎಲೆಕ್ಟ್ರಾನಿಕ್ಸ್, ಉಡುಪು, ಗೃಹೋಪಯೋಗಿ ವಸ್ತುಗಳ ಮೇಲೆ ರಿಯಾಯಿತಿಗಳು ಘೋಷಿಸಲಾಗಿದ್ದು, ಯುವಜನತೆ ಆನ್‌ಲೈನ್ ಖರೀದಿಯತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಯುಗಾದಿ ಹಬ್ಬದಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ನಗರದ ಪ್ರಮುಖ ದೇವಾಲಯಗಳನ್ನು ಬಗೆ ಬಗೆಯ ಪುಷ್ಪ-ಪತ್ರೆಗಳಿಂದ ಅಲಂಕರಿಸಲಾಗಿದೆ. ನಗರದ ಆರಾಧ್ಯದೈವ ಶ್ರೀಕೋಟೆ ಮಲ್ಲೇಶ್ವರಸ್ವಾಮಿ, ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮ, ನೀಲಕಂಠೇಶ್ವರಸ್ವಾಮಿ ದೇವಸ್ಥಾನ, ಪಾರ್ವತಿ ನಗರ ಅನಾದಿಲಿಂಗೇಶ್ವರ, ಕಪ್ಪಗಲ್ ರಸ್ತೆ ಮದ್ದಾನೇಶ್ವರ, ಗ್ರಹಂ ರಸ್ತೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಸೇರಿದಂತೆ ಅನೇಕ ಕಡೆ ವಿಶೇಷ ಪೂಜಾ ಕೈಂಕರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರ ಬೆಳಗಿನ ಜಾವ 5 ಗಂಟೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿ, ಹರಕೆ ತೀರಿಸಲಿದ್ದಾರೆ. ಯುಗಾದಿ ಹಿನ್ನಲೆಯಲ್ಲಿ ಜಿಲ್ಲೆಯ ನಾನಾ ಕಡೆ ಪಂಚಾಗ ಶ್ರವಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಯುಗಾದಿ ಸಂಭ್ರಮ ಕಂಡು ಬಂದಿದೆ.
ಈ ಬಾರಿ ನಗರ ನಿವಾಸಿಗಳ ಮೇಲೆಯೇ ನಮ್ಮ ವ್ಯಾಪಾರ ಅವಲಂಬಿಸಿದೆ. ಗ್ರಾಮೀಣ ಭಾಗದ ಜನರು ವ್ಯಾಪಾರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಗರಕ್ಕೆ ಆಗಮಿಸಿಲ್ಲ. ಮೆಣಸಿನಕಾಯಿ ಮಾರುಕಟ್ಟೆ ಕುಸಿದಿದೆ. ಎರಡನೇ ಬೆಳೆಗೆ ನೀರಿಲ್ಲವಾದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ನಗರದ ಜನರ ಮೇಲೆಯೇ ಯುಗಾದಿಯ ವ್ಯಾಪಾರ ಅವಲಂಬಿಸಿದೆ ಎನ್ನುತ್ತಾರೆ ಬಟ್ಟೆ ವ್ಯಾಪಾರಿ ರಾಹುಲ್ ಜೈನ್.