ಕಾಲುವೆಯಿಂದ ಅಪಾರ ಪ್ರಮಾಣದ ನೀರು ನದಿ ಪಾತ್ರಕ್ಕೆ ಹರಿದು ವ್ಯರ್ಥವಾಗಿದ್ದಲ್ಲದೇ, ರೈತರ ಬೆಳೆ ಹಾಳಾಗಿರುವುದನ್ನು ನೋಡಿ ಮಮ್ಮಲ ಮರಗಿ ಕಾಲುವೆ ಆಧುನೀಕರಣ ಮಾಡದ ಸರ್ಕಾರದ ನಿರ್ಧಾರ ಖಂಡಿಸಿದರು.
ಕೊಪ್ಪಳ: ಕುಡಿವ ನೀರು ಪೂರೈಕೆ ಮಾಡುವ ವೇಳೆಯಲ್ಲಿ ತುಂಗಭದ್ರಾ ಎಡದಂಡೆ ನಾಲೆ ಒಡೆದಿರುವುದು ಅಲ್ಲದೆ, ರೈತರ ಕೋಟ್ಯಂತರ ಹಾನಿಗೆ ಕಾರಣವಾಗಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಉದಾಹರಣೆ, ಕೂಡಲೇ ಸಚಿವ ಶಿವರಾಜ ತಂಗಡಗಿ ನೈತಿಕೆ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಬಿಜೆಪಿ ಆಗ್ರಹಿಸಿದೆ.
ತಾಲೂಕಿನ ಮುನಿರಾಬಾದ ಸಮೀಪದ ಬಸಾಪುರ ಹಾಗೂ ಬಂಡಿ ಹರ್ಲಾಪುರ ಗ್ರಾಮಗಳ ನಡುವಿನ 13ನೇ ಮೈಲಿಯ ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಒಡೆದ ಸ್ಥಳಕ್ಕೆ ಬುಧವಾರ ಬಿಜೆಪಿ ಕೋರ್ ಕಮಿಟಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಕ್ಯಾವಟರ ಸೇರಿದಂತೆ ಅನೇಕ ಬಿಜೆಪಿ ನಾಯಕರು ಭೇಟಿ ನೀಡಿ, ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಕಾಲುವೆಯಿಂದ ಅಪಾರ ಪ್ರಮಾಣದ ನೀರು ನದಿ ಪಾತ್ರಕ್ಕೆ ಹರಿದು ವ್ಯರ್ಥವಾಗಿದ್ದಲ್ಲದೇ, ರೈತರ ಬೆಳೆ ಹಾಳಾಗಿರುವುದನ್ನು ನೋಡಿ ಮಮ್ಮಲ ಮರಗಿ ಕಾಲುವೆ ಆಧುನೀಕರಣ ಮಾಡದ ಸರ್ಕಾರದ ನಿರ್ಧಾರ ಖಂಡಿಸಿದರು.
ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ,ಶಿವರಾಜ್ ತಂಗಡಗಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ. ಸಕಾಲಕ್ಕೆ ಎಚ್ಚೆತ್ತು ಕಾಲುವೆ ಕಾಮಗಾರಿ ಆಧುನೀಕರಣ ಮುಗಿಸಿದ್ದರೆ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ರೈತರೊಂದಿಗೆ ಸೇರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಜಲಾಶಯದಿಂದ ದಿಢೀರ್ ನೀರಿನ ಹರಿವನ್ನು 200 ಕ್ಯೂಸೆಕ್ ದಿಂದ 2000 ಕ್ಯೂಸೆಕ್ ಗೆ ಹೆಚ್ಚಿಸಿದರ ಪರಿಣಾಮ ಈ ಸಮಸ್ಯೆಯಾಗಿದೆ. ಕಳೆದ ಮೂರು ತಿಂಗಳ ಹಿಂದೆಯೇ ಎಡದಂಡೆ ಕಾಲುವೆಯಲ್ಲಿ ರಂದ್ರ ಬಿದ್ದಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸಲು ಆಗ್ರಹಿಸಿದ್ದರು.
ಆದರೆ, ಕಾಳಜಿ ವಹಿಸಬೇಕಾದ ಅಧಿಕಾರಿಗಳು ಕೂಡ ಈ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ತೋರಿಸಿದರ ಪರಿಣಾಮ ಕಾಲುವೆ ಒಡೆದು ನೀರು ವ್ಯರ್ಥವಾಗುತ್ತಿದೆ. ಬೇಸಿಗೆ ಹಿನ್ನೆಲೆಯಲ್ಲಿ ಕೊಪ್ಪಳ ಹಾಗೂ ರಾಯಚೂರು ನಗರ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮತ್ತು ಕೆರೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕಾಲುವೆಗೆ ನೀರು ಹರಿಸಲಾಗುತ್ತಿತ್ತು. ಆದರೆ, ಕಾಲುವೆ ಒಡೆದಿರುವ ಪರಿಣಾಮದಿಂದ ಎರಡು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಕಷ್ಟ ಹೆಚ್ಚಾಗಿದೆ ಹಾಗೂ ಕಾಲುವೆಯಿಂದ ಪೋಲಾಗುತ್ತಿರುವ ನೀರಿನಿಂದ ಅಕ್ಕಪಕ್ಕದ ಬೆಳೆಗಳಿಗೂ ಕೂಡ ನಷ್ಟವಾಗಿದ್ದು, ಇಲ್ಲಿಯ ರೈತರು ಕೂಡ ನಷ್ಟ ಅನುಭವಿಸುವಂತಾಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವ ಕೆಲಸ ಮಾಡಬೇಕಿದೆ ಹಾಗೂ ಈ ಸಮಸ್ಯೆ ಬೇಗ ಸರಿಪಡಿಸಬೇಕೆಂದು ಒತ್ತಾಯಿಸಿದರು.
ಕಳೆದ ವರ್ಷ ತುಂಗಭದ್ರಾ ಡ್ಯಾಮ್ ನ 19ನೇ ಕ್ರೆಸ್ಟ್ ಗೇಟ್ ಮುರಿದು ರೈತರ ಎರಡನೇ ಬೆಳೆಗೆ ನೀರು ಸಿಗದಂತಾಗಿತ್ತು. ಇದೀಗ ಕಾಲುವೆ ಒಡೆದು ನೀರು ವ್ಯರ್ಥವಾಗುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಮೊದಲಿಂದಲೂ ತುಂಗಭದ್ರಾ ಎಂದರೇ ನಿರ್ಲಕ್ಷ ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ಮಹಾಂತೇಶ್ ಪಾಟೀಲ್ ಮೈನಳ್ಳಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಅಮರೇಶ ಮುರುಳಿ, ಪ್ರದೀಪ್ ಹಿಟ್ನಾಳ್, ಪ್ರಭುಗೌಡ ಹುಲಿಗಿ, ಗಣೇಶ ಹೊರತಟ್ನಾಳ್, ವಸಂತ ನಾಯಕ್, ರವಿ ಹೊಸಳ್ಳಿ, ಹನುಮಂತಪ್ಪ ಹುಲಿಗಿ, ಹೈದರ್ ಅಲಿ, ನರಸಿಂಹಲ್ಲು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.