ಸದೃಢ ಭಾರತ ನಿರ್ಮಾಣಕ್ಕೆ ವ್ಯಸನ ಮುಕ್ತ ಸಮಾಜ ಅಗತ್ಯ: ರಾಜ್ಯಪಾಲ

KannadaprabhaNewsNetwork |  
Published : Mar 19, 2026, 02:00 AM IST
ಬಳ್ಳಾರಿಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾಂಗಣ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಮಾದಕ ವ್ಯಸನವು ಕೇವಲ ವ್ಯಕ್ತಿಯ ಸಮಸ್ಯೆಯಲ್ಲ. ಕುಟುಂಬಗಳನ್ನು ವಿಘಟಿಸಿ ಸಮಾಜದಲ್ಲಿ ಅಶಾಂತಿ ಮತ್ತು ಅಪರಾಧಗಳನ್ನು ಹೆಚ್ಚಿಸುವ ರಾಷ್ಟ್ರೀಯ ಸವಾಲಾಗಿದೆ

ಬಳ್ಳಾರಿ: ಸದೃಢ ಭಾರತ ನಿರ್ಮಾಣಕ್ಕಾಗಿ ವ್ಯಸನ ಮುಕ್ತ ಯುವ ಜನಾಂಗ ಇಂದಿನ ಅತ್ಯಗತ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.

ಬಳ್ಳಾರಿ ನಗರದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾಂಗಣ ಮೈದಾನದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾ ಬೋಧಿ ಫೌಂಡೇಷನ್ ಮತ್ತು ನಾರ್ಕೋಟಿಕ್ಸ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

ಮಾದಕ ವ್ಯಸನವು ಕೇವಲ ವ್ಯಕ್ತಿಯ ಸಮಸ್ಯೆಯಲ್ಲ. ಕುಟುಂಬಗಳನ್ನು ವಿಘಟಿಸಿ ಸಮಾಜದಲ್ಲಿ ಅಶಾಂತಿ ಮತ್ತು ಅಪರಾಧಗಳನ್ನು ಹೆಚ್ಚಿಸುವ ರಾಷ್ಟ್ರೀಯ ಸವಾಲಾಗಿದೆ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ವ್ಯಸನದಿಂದ ದೂರವಿರುವುದಷ್ಟೇ ಅಲ್ಲದೆ, ತಮ್ಮ ಸುತ್ತಮುತ್ತಲಿನವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಕ್ಯಾಥೋಲಿಕ್ ಬಿಷಪ್ ಹೆನ್ರಿ ಡಿಸೋಜ, ಕಮ್ಮರಚೇಡು ಕಲ್ಯಾಣಸ್ವಾಮಿ ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ ಮಾತನಾಡಿದರು. ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇನ್‌ಸ್ಪೆಕ್ಟರ್‌ ವಿಕಾಸ್ ಸಿಂಗ್, ದಿಶಾಬೋರ್ಡ್ ಫೌಂಡೇಷನ್ ನಿರ್ದೇಶಕರಾದ ಕೆ.ಶಿವರಾಗಿ ರೆಡ್ಡಿ, ಎಸ್.ಪಿ. ಚಿದಾನಂದ, ಜಾನೆಕುಂಟೆ ಬಸವರಾಜ್ ಇದ್ದರು.

ಸಮಾರಂಭ ಜರುಗಿದ ಬಳಿಕ ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಕೇಂದ್ರದ ಕ್ರೀಡಾಂಗಣ ಮೈದಾನದಿಂದ ಶುರುಗೊಂಡ ವಾಕಥಾನ್ ಕಿತ್ತೂರು ರಾಣಿ ಚನ್ನಮ್ಮ ಶಾಲೆ ಮೈದಾನ ತಲುಪಿ, ಕೊನೆಗೊಂಡಿತು.

ಗ್ಯಾರಂಟಿ ಅಧ್ಯಕ್ಷರನ್ನು ವೇದಿಕೆಯಿಂದ ಕೆಳಗಿಳಿಸಿದ ಸಿಬ್ಬಂದಿ: ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನದಲ್ಲಿ ಭಾಗಿಯಾಗಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ ಪ್ರಸಂಗ ಜರುಗಿತು.

ರಾಜ್ಯಪಾಲರಿರುವ ಕಾರ್ಯಕ್ರಮದಲ್ಲಿ 9 ಜನರು ಇರಲು ಮಾತ್ರ ಅನುಮತಿಸಲಾಗಿದೆ. ಹೀಗಾಗಿ ತಾವು ಕೆಳಗೆ ಇಳಿಯುವಂತೆ ಶಿಷ್ಟಾಚಾರ ನಿಯಮ ಅಧಿಕಾರಿಯೊಬ್ಬರು ಸೂಚಿಸಿದರು. ಇದರಿಂದ ತೀವ್ರ ಬೇಸರಗೊಂಡ ಚಿದಾನಂದಪ್ಪ, ನಮ್ಮನ್ನು ಕರೆದದ್ದು ಏಕೆ? ಕೆಳಗೆ ಇಳಿಯಿರಿ ಎನ್ನುವುದು ಏಕೆ? ನಾವಾಗಿ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ನೀವೇ ಆಹ್ವಾನ ನೀಡಿದ ಬಳಿಕ ಬಂದಿದ್ದೇವೆ. ಈಗ ವೇದಿಕೆಯಿಂದ ಕೆಳಗೆ ಇಳಿಯಿರಿ ಎಂಬುದು ಎಷ್ಟು ಸರಿ? ಎಂದು ಚಿದಾನಂದಪ್ಪ ಕಾರ್ಯಕ್ರಮ ಆಯೋಜಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಗೊಳಿಸಿ ಕೆಳಗಿಳಿಸಿದರು.

ಕಾರ್ಯಕ್ರಮಕ್ಕೆ ಹಾಜರಿರುವಂತೆ ಕೋರಿದ್ದರು. ಮೈಕ್‌ನಲ್ಲಿ ಅನೌನ್ಸ್ ಮಾಡಿದರು. ಹೀಗಾಗಿಯೇ ವೇದಿಕೆ ಮೇಲೆ ಕುಳಿತೆ. ನಾನಾಗಿಯೇ ಹೋಗಿರಲಿಲ್ಲ. ಶಿಷ್ಟಾಚಾರ ನೆಪದಲ್ಲಿ ಕೆಳಗಿಳಿಸಿದ್ದು ಎಷ್ಟು ಸರಿ? ಎಂದು ಕೆ.ಇ.ಚಿದಾನಂದಪ್ಪ ಅವರು ಕನ್ನಡಪ್ರಭ ಜೊತೆ ಬೇಸರ ವ್ಯಕ್ತಪಡಿಸಿದರು.

ವಂದನಾರ್ಪಣೆ ಬಳಿಕವೂ ಭಾಷಣ: ರಾಜ್ಯಪಾಲರು ಭಾಗವಹಿಸಿದ್ದ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ಕಾರ್ಯಕ್ರಮದ ವಂದನಾರ್ಪಣೆ ಬಳಿಕ ಮಹಿಳೆಯೊಬ್ಬರು ದಿಢೀರನೆ ವೇದಿಕೆ ಪ್ರವೇಶಿಸಿ ಭಾಷಣ ಶುರು ಮಾಡಿದರು. ನನಗೂ ಮಾತನಾಡಲು ಅವಕಾಶ ಕೊಡಿ ಎಂದು ವೇದಿಕೆ ಬಳಿಯೇ ಕುಳಿತಿದ್ದ ಮಹಿಳೆ ಸಂಘಟಕರನ್ನು ಕೇಳುತ್ತಿದ್ದರು. ಅವಕಾಶ ಸಿಗದಿದ್ದಾಗ ಕೊನೆಗೆ ವೇದಿಕೆ ಏರಿ ಭಾಷಣ ಮಾಡಿದರು. ರಾಜ್ಯಪಾಲರಿರುವ ಸಮಾರಂಭದಲ್ಲಿ ಈ ಅಚಾತುರ್ಯ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ
ಎಸ್ಸೆಸ್ಲೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಸುಸೂತ್ರ