ಗದಗ: ವಿಪತ್ತುಗಳು ಎದುರಾದಾಗ ತಕ್ಷಣವೇ ಏನೆಲ್ಲ ಮಾಡಬೇಕು, ಆ ಸಂದರ್ಭದಲ್ಲಿ ಆಗಮಿಸುವ ರಕ್ಷಣಾ ತಂಡಗಳು ಹೇಗೆಲ್ಲ ಕಾರ್ಯ ನಿರ್ವಹಿಸುತ್ತವೆ, ಇದರಲ್ಲಿ ಸಾರ್ವಜನಿಕರ ಪಾತ್ರವೇನು ಎನ್ನುವ ಬಗ್ಗೆ ಮನದಟ್ಟು ಮಾಡುವ ಉದ್ದೇಶದಿಂದ ಬುಧವಾರ ಜಿಲ್ಲಾ ಆಸ್ಪತ್ರೆಯ ಬೃಹತ್ ಕಟ್ಟಡದಲ್ಲಿ ಆಯೋಜಿಸಿದ್ದ ವಿಪತ್ತು ನಿರ್ವಹಣಾ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು.ಪ್ರಾತ್ಯಕ್ಷಿಕೆಯ ಪ್ರಮುಖ ಆಕರ್ಷಣೆ ಎಂದರೆ ಕಮಲೇಶ್ ಸಿಂಗ್ ನೇತೃತ್ವದ ಎನ್‌ಡಿಆರ್‌ಎಫ್(ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ) ತಂಡದ ಕಾರ್ಯಚಟುವಟಿಕೆ. ಜಿಲ್ಲಾಸ್ಪತ್ರೆಯ ಒಂದು ಭಾಗದಲ್ಲಿ ಕಟ್ಟಡ ಕುಸಿದಂಥ ಅಣಕು ಪರಿಸ್ಥಿತಿ ನಿರ್ಮಿಸಿ ವಿಶೇಷ ಸಾಧನಗಳನ್ನು ಬಳಸಿ ಅವಶೇಷಗಳೊಳಗಿನ ಜೀವಂತ ವ್ಯಕ್ತಿಗಳನ್ನು ಪತ್ತೆ ಹಚ್ಚುವುದು, ಗಾಯಾಳುಗಳನ್ನು ಸುರಕ್ಷಿತವಾಗಿ ಹೊರತೆಗೆದು ತುರ್ತು ಚಿಕಿತ್ಸೆಗಾಗಿ ಸಾಗಿಸುವ ಕ್ರಮಗಳನ್ನು ಹಂತ- ಹಂತವಾಗಿ ತೋರಿಸಿತು. ಪ್ರತಿ ಹಂತದಲ್ಲೂ ಸಮಯ ನಿರ್ವಹಣೆ ಮತ್ತು ತಂಡದ ಸಂಯೋಜನೆ ಎಷ್ಟು ಮುಖ್ಯ ಎನ್ನುವುದನ್ನು ಜನರಿಗೆ ತಿಳಿಯಪಡಿಸಲಾಯಿತು. ಪ್ರಾತ್ಯಕ್ಷಿಕೆ ನಡೆಯುತ್ತಿದ್ದ ವೇಳೆಯಲ್ಲಿಯೇ ನೋಡಲು ಆಗಮಿಸಿದ್ದ ಸಾವಿರಾರು ಸಂಖ್ಯೆಯ ಜನರಿಗೆ ಪ್ರಮುಖ ಸೂಚನೆಗಳನ್ನು ನೀಡಿ ಜಾಗೃತಿ ಮೂಡಿಸಲಾಯಿತು. ಕಟ್ಟಡ ಕುಸಿದಾಗ ಗಾಬರಿಯಾಗದೇ ಸುರಕ್ಷಿತ ಸ್ಥಳಕ್ಕೆ ಸರಿಯುವುದು. ತಕ್ಷಣ ತುರ್ತು ಸೇವೆಗಳಿಗೂ ಮಾಹಿತಿ ನೀಡುವುದು. ಅವಶೇಷಗಳ ಬಳಿ ಅನಗತ್ಯವಾಗಿ ಗುಂಪಾಗದೆ ರಕ್ಷಣಾ ಕಾರ್ಯಕ್ಕೆ ಸಹಕರಿಸುವುದು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲ ವಿಧಾನಗಳ ಕುರಿತು ವಿವರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರೆಗೌಡ್ರ, ಪ್ರಾಚಾರ್ಯೆ ರೇಖಾ ಸೇನಾವಣೆ, ವಿಪತ್ತು ತಜ್ಞ ಶಿವಾನಂದ ರಾಜನಾಳ, ವಾರ್ತಾಧಿಕಾರಿ ವಸಂತ ಮಡ್ಲೂರ, ಎನ್.ಡಿ.ಆರ್.ಎಫ್. ಮುಖ್ಯಸ್ಥ ಕಮಲೇಶ್ ಸಿಂಗ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಉಪಯುಕ್ತ ಮಾಹಿತಿ...ತುರ್ತು ಸಂದರ್ಭಗಳಲ್ಲಿ ಬಳಸುವ ಸಾಮಗ್ರಿಗಳ ಕುರಿತು ಉಪಯುಕ್ತ ಮಾಹಿತಿ ನೀಡಲಾಯಿತು. ಎನ್‌ಡಿಆರ್‌ಎಫ್ ತಂಡವು ರಕ್ಷಣಾ ಕಾರ್ಯಗಳಲ್ಲಿ ಬಳಸುವ ವಿವಿಧ ಸಾಧನಗಳನ್ನು ಪರಿಚಯಿಸಿ, ಅವುಗಳನ್ನು ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಎಂಬುದನ್ನು ತಿಳಿಸಿದರು.
ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆ ಹಚ್ಚುವಲ್ಲಿ ಎನ್.ಡಿ.ಆರ್.ಎಫ್. ತಂಡದ ಶ್ವಾನ ತನ್ನ ಅದ್ಭುತ ಘ್ರಾಣ ಶಕ್ತಿಯನ್ನು ಬಳಸಿಕೊಂಡು ತಂಡಕ್ಕೆ ಸಹಕಾರ ನೀಡಿತು. ಕಣ್ಣಿಗೆ ಕಾಣದ ಸ್ಥಳದಲ್ಲಿರುವ ವ್ಯಕ್ತಿಯ ಅಸ್ತಿತ್ವವನ್ನು ಕೂಡಾ ಅದು ಶೀಘ್ರವಾಗಿ ಗುರುತಿಸಿ, ರಕ್ಷಣಾ ಸಿಬ್ಬಂದಿಗೆ ಸೂಚನೆ ನೀಡುವ ದೃಶ್ಯ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿತು.