ಆಲಿಕಲ್ಲು ಸುರಿಮಳೆ : ಹವಾಮಾನ ವೈಪರೀತ್ಯದ ಎಚ್ಚರಿಕೆ ಗಂಟೆ..!

KannadaprabhaNewsNetwork |  
Published : Mar 19, 2026, 02:00 AM IST
Alikallu

ಸಾರಾಂಶ

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹವಾಮಾನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪೋತದಾರ ಸೇರಿದಂತೆ ಹವಾಮಾನ ತಜ್ಞರು ಆಲಿಕಲ್ಲು ಮಳೆ ಹವಾಮಾನ ವೈಪರೀತ್ಯದ ಪರಿಣಾಮಗಳಲ್ಲಿ ಒಂದು ಎನ್ನುತ್ತಾರೆ.

ಬಸವರಾಜ ಹಿರೇಮಠ

ಧಾರವಾಡ: ರಸ್ತೆ, ಮನೆಯಂಗಳ, ಹೊಲ-ಗದ್ದೆ ಸೇರಿದಂತೆ ಇಡೀ ಕಲಘಟಗಿ ಊರು ಹಾಗೂ ಸುತ್ತಲಿನ ಪ್ರದೇಶ, ಮಂಗಳವಾರ ಸಂಜೆ ಆಲಿಕಲ್ಲುಗಳಿಂದ ಆವೃತ್ತವಾಗಿ ಕಾಶ್ಮೀರದಲ್ಲಿರುವಂತೆ ಮಂಜುಗಡ್ಡೆಯ ಅದ್ಭುತ ಸೌಂದರ್ಯ ಸೃಷ್ಟಿಸಿತ್ತು. ಜನರೂ ಈ ತಾತ್ಕಾಲಿಕ ಸೌಂದರ್ಯ ಅನುಭವಿಸಿದ್ದೂ ಆಯಿತು. ಆದರೆ, ಈ ತಾತ್ಕಾಲಿಕ ಆಲಿಕಲ್ಲಿನ ಸೌಂದರ್ಯ ಹಾಗೂ ಬೆರಗು ಹವಾಮಾನ ವೈಪರೀತ್ಯದ ಸ್ಪಷ್ಟ ಎಚ್ಚರಿಕೆಯ ಗಂಟೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ..!

ಸಾಮಾನ್ಯವಾಗಿ ಆಲಿಕಲ್ಲು ಮಳೆ ಹೊಸದೇನಲ್ಲ. ಅಚ್ಚರಿಯೂ ಅಲ್ಲ. ಅಡ್ಡ ಮಳೆಗಾಲದಲ್ಲಿ ಗಾಳಿ ಮಳೆಯ ಜೊತೆಗೆ ಆಲಿಕಲ್ಲು ಮಳೆ ಬರುವುದು ಸಾಮಾನ್ಯ. ಆದರೆ, ಕಲಘಟಗಿ ಮಾತ್ರವಲ್ಲದೇ ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಇಷ್ಟೊಂದು ರೀತಿಯಲ್ಲಿ ದೊಡ್ಡ ಪ್ರಮಾಣದ ಆಲಿಕಲ್ಲಿನ ಸುರಿಮಳೆ ಆಗಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಮಂಗಳವಾರದ ಆಲಿಕಲ್ಲಿ ಮಳೆಯ ಅಚ್ಚರಿ ಬಗ್ಗೆ ಪರಿಸರವಾದಿಗಳ, ಹವಾಮಾನ ತಜ್ಞರಲ್ಲಿ ಪರಸ್ಪರ ಚರ್ಚೆಗಳು ನಡೆದಿವೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹವಾಮಾನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಪೋತದಾರ ಸೇರಿದಂತೆ ಹವಾಮಾನ ತಜ್ಞರು ಇದೇ ಹವಾಮಾನ ವೈಪರೀತ್ಯದ ಪರಿಣಾಮಗಳಲ್ಲಿ ಒಂದು ಎನ್ನುತ್ತಾರೆ.

ಏತಕ್ಕಿದು ಆಲಿಕಲ್ಲು ಮಳೆ?

ಇತ್ತೀಚೆಗಿನ ವರ್ಷಗಳಲ್ಲಿ ಪರಿಸರ ಮಾಲಿನ್ಯದಿಂದಾಗಿ ತಾಪಮಾನ ಹೆಚ್ಚಾಗಿ ಮಂಗಳವಾರ ಕಲಘಟಗಿ ಸೇರಿದಂತೆ ರಾಜ್ಯದ ವಿವಿಧೆಡೆ ಇದೇ ರೀತಿಯಲ್ಲಿ ಆಲಿಕಲ್ಲಿನ ಮಳೆಯಾಗಿದೆ. ಪರಿಸರದ ಮೇಲ್ಮೈ ಸುಳಿಗಾಳಿ ಉಂಟಾದಾಗ ಈ ರೀತಿ ಆಗಲಿದೆ. ಸಾಮಾನ್ಯವಾಗಿ ಬಿಸಿಲಿನ ತಾಪಮಾನದಿಂದಾಗಿ ತೇವಾಂಶದ ಪ್ರಮಾಣ ಹೆಚ್ಚಾಗುತ್ತದೆ. ತೇವಾಂಶ ಮೇಲಕ್ಕೆ ಚಲಿಸುತ್ತದೆ. ಎತ್ತರ ಹೆಚ್ಚಾದಂತೆ ಉಷ್ಣಾಂಶ ಕಡಿಮೆ ಇರುತ್ತದೆ. ಬಳಿಕ ತೇವಾಂಶ ತಂಪಾಗುತ್ತದೆ. ಆಗ ಮಳೆಯಾಗುವುದು ಸಾಮಾನ್ಯ. ಆದರೆ, ನಿಧಾನವಾಗಿ ಉಷ್ಣಾಂಶ ಮತ್ತಷ್ಟು ಕಡಿಮೆಯಾದಾಗ ಮಳೆ ಹನಿಗಳು ಮಂಜುಗಡ್ಡೆಯಾಗುತ್ತವೆ. ಇದೇ ಕಾರಣಕ್ಕೆ ಕಲಘಟಗಿಯಲ್ಲಿ ಭಾರೀ ಆಲಿಕಲ್ಲು ಮಳೆಯಾಗಿದೆ ಎನ್ನುತ್ತಾರೆ ಡಾ. ಪೋತದಾರ.

ಹವಾಮಾನ ವೈಪರೀತ್ಯವೇ ಇದಕ್ಕೆಲ್ಲ ಕಾರಣವಾಗಿದ್ದು, ಭೂಮಿಯ ಮೇಲೆ ಹೋಗಿರುವ ತೇವಾಂಶ ಕೊಂಚ ಪ್ರಮಾಣದಲ್ಲಿ ತಂಪಾದರೆ ಮಳೆ ಸುರಿಯುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ತಂಪಾದರೆ ಅದು ಮಂಜುಗಡ್ಡೆಯಾಗುತ್ತದೆ. ಕೆಲವು ಚಿಕ್ಕ ಚಿಕ್ಕ ಆಲಿಕಲ್ಲು ಬೀಳುತ್ತವೆ. ಕೆಲವೊಮ್ಮೆ ದೊಡ್ಡ ಪ್ರಮಾಣದಲ್ಲಿ ಆಲಿಕಲ್ಲು ಬಿದ್ದಿರುವುದನ್ನು ನಾವು ಗಮನಿಸಿದ್ದೇವೆ ಎಂದು ಡಾ. ಪೋತದಾರ ಮಾಹಿತಿ ನೀಡಿದರು.

ಕಲಘಟಗಿ ಪ್ರದೇಶ ಪಶ್ಚಿಮ ಘಟ್ಟ ಹಾಗೂ ಮಲೆನಾಡಿನ ಶುರುವಾತಿನ ಊರು. ಕಲಘಟಗಿಯಿಂದ ದಟ್ಟವಾದ ಅರಣ್ಯ ಪ್ರದೇಶ ಆರಂಭವಾಗುತ್ತದೆ. ಸಮೃದ್ಧ ಪರಿಸರ. ಈ ಪರಿಸರದಲ್ಲಿ ಕಳೆದ ವರ್ಷ ಮಳೆ ತೀರಾ ಕಡಿಮೆಯಾಗಿ ಬರಗಾಲದ ಸಂದರ್ಭವಿತ್ತು. ಈಗ ಆಲಿಕಲ್ಲಿನ ಸುರಿಮಳೆಯಾಗಿದೆ. ಕಲಘಟಗಿ ಹಾಗೂ ಧಾರವಾಡ ಸಮೀಪದ ಪ್ರದೇಶಗಳಲ್ಲಿದ್ದ ಸಾವಿರಾರು ವರ್ಷಗಳಿಂದ ಇದ್ದ ಗುಡ್ಡಗಳು ಹಣದಾಸೆಗಾಗಿ ನಿಧಾನವಾಗಿ ಬೋಳಾಗುತ್ತಿವೆ. ಹೊಲ-ಗದ್ದೆಗಳು ನಿವೇಶನಗಳಾಗಿ ಪರಿವರ್ತನೆಯಾಗುತ್ತವೆ. ನಿಷೇಧದ ಮಧ್ಯೆಯೂ ಪ್ಲಾಸ್ಟಿಕ್‌ ಬಳಕೆ, ತ್ಯಾಜ್ಯದ ಗುಡ್ಡಗಳಿಗೆ ಬೆಂಕಿ ಬೀಳುವಂತ ಘಟನೆಗಳು ಹೀಗೆ ಒಟ್ಟಾರೆ, ಪರಿಸರಕ್ಕೆ ಆಗುತ್ತಿರುವ ಧಕ್ಕೆಯಿಂದಾಗಿ ತಾಪಮಾನದಲ್ಲಿ ಏರಿಳಿತ ಉಂಟಾಗಿ ಅನಾಹುತಗಳು ಸಂಭವಿಸುತ್ತವೆ. ಅಂತಹುದೇ ಘಟನೆ ಕಲಘಟಗಿಯಲ್ಲಾಗಿದೆ ಎನ್ನುತ್ತಾರೆ ಪರಿಸರವಾದಿಗಳು.

ಆಲಿಕಲ್ಲಿಂದ ಅಪಾರ ಹಾನಿ

ಮಂಗಳವಾರ ಸುರಿದ ಆಲಿಕಲ್ಲಿನ ಮಳೆಯಿಂದಾಗಿ ಕೆಲ ಹೊತ್ತು ಸುಂದರ ದೃಶ್ಯಗಳು ಕಂಡಿರಬಹುದು. ಅದರ ಫೋಟೋಗಳು ಎಲ್ಲೆಡೆ ವೈರಲ್‌ ಆಗಿ ಅಚ್ಚರಿ ವ್ಯಕ್ತಪಡಿಸಿರಬಹುದು. ಆದರೆ, ಆಲಿಕಲ್ಲು ಬಿದ್ದು ರೈತರಿಗೆ ತುಂಬಾ ಹಾನಿಯಾಗಿದೆ. ಮನೆಗಳ ಹೆಂಚು ಒಡೆದು ಹೋಗಿವೆ. ಬೆಳೆದ ಕಬ್ಬು ಬಿದ್ದು ಹೋಗಿದೆ. ಗೋವಿನ ಜೋಳ, ಸೋಯಾಬೀನ್‌ ಬೆಳೆ ಹಾಳಾಗಿದೆ. ಮಾವಿನ ಬೆಳೆಯಂತೂ ಕೇಳುವ ಹಾಗಿಲ್ಲ. ಈಗಾಗಲೇ ಹವಾಮಾನ ವೈಪರೀತ್ಯದಿಂದ ಹೂ ಉದುರಿ ಅಲ್ಲೊಂದು ಇಲ್ಲೊಂದು ಕಾಯಿ ಕಂಡಿದ್ದ ಕಲಘಟಗಿಯ ಮಾವಿನ ಗಿಡಗಳಲ್ಲೀಗ ಒಂದೂ ಕಾಯಿ ಕಾಣುತ್ತಿಲ್ಲ. ಮಡಕಿಹೊನ್ನಳಿ, ಮಾಚಾಪುರ, ಬೆಲವಂತರ, ದೇವಿಕೊಪ್ಪ, ಹಿಂಡಸಗೇರಿ, ಆಲಕಟ್ಟಿ, ಹನುಮಾಪುರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಆಲಿಕಲ್ಲು ಮಳೆಯಿಂದ ಬೆಳೆಹಾನಿಯಾಗಿದೆ ಎಂದು ಮಡಕಿಹೊನ್ನಿಹಳ್ಳಿ ರೈತ ನಿಂಗಯ್ಯ ಪಟದಯ್ಯನವರ ಕಳವಳ ವ್ಯಕ್ತಪಡಿಸುತ್ತಾರೆ. ಜೊತೆಗೆ ಈ ವೈಪರೀತ್ಯಕ್ಕೆ ಪರಿಹಾರದ ನಿರೀಕ್ಷೆ ಸಹ ಇಟ್ಟುಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸೋದರಳಿಯ ಜತೆ ಪತ್ನಿ ಪರಾರಿ: ಮಕ್ಕಳ ಕೊಂದ ತಂದೆ ಆತ್ಮ*ತ್ಯೆ - ತಾನೇ ಸಾಕಿದ್ದ ಅಕ್ಕನ ಮಗನಿಂದ ಮಹಾಮೋಸ
ತೆಂಗಿನ ನಾರಿನ 6000 ಮ್ಯಾಟ್‌ ರಾಜ್ಯದಿಂದ ಜೈಪುರಕ್ಕೆ ರಪ್ತು