ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಹವಾಮಾನ ವೈಪರೀತ್ಯದಿಂದ ರೋಗ ಬಾಧೆಯಿಂದ ಬಾಳೆ ಫಸಲು ಕುಂಠಿತವಾಗಿದ್ದು, ದರ ಗಣನೀಯ ಏರಿಕೆ ಕಂಡಿದೆ. ಪ್ರತಿಕೆಜಿ ಏಲಕ್ಕಿ ಬಾಳೆಹಣ್ಣು ₹80 ದಾಟಿದ್ದು, ದಿನದಿಂದ ದಿನಕ್ಕೆ ಈ ದರ ಏರಿಕೆಯಾಗುತ್ತಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಬಾಳೆಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಪ್ರತಿ ಕೆಜಿ ಬಾಳೆಹಣ್ಣು ₹30ರಿಂದ ₹40ಕ್ಕೆ ಮಾರಾಟವಾಗುತ್ತಿತ್ತು. ಆದರೆ ಬೇರೆ ರಾಜ್ಯಗಳಿಂದ ಬಾಳೆಹಣ್ಣು ಪೂರೈಕೆ ಆಗದ ಹಿನ್ನೆಲೆ ಬೇಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ. ಹಾಗಾಗಿ ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹70ರಿಂದ ₹80 ವರೆಗೆ ಮಾರಾಟವಾಗುತ್ತಿದೆ.
ಕೆಜಿಗೆ ₹100 ಸಾಧ್ಯತೆ: ಬಾಳೆಹಣ್ಣಿನ ದರ ಕೆಲವೇ ದಿನದಲ್ಲಿ ₹100 ತಲುಪುವ ಸಾಧ್ಯತೆ ಇದೆ. ಶಿವರಾತ್ರಿ ಸಂದರ್ಭದಲ್ಲಿ ಬೇಡಿಕೆ ಹೆಚ್ಚು ಬಂದಿದ್ದರಿಂದ ದರ ಹೆಚ್ಚಳವಾಗಿತ್ತು. ಈಗ ರಂಜಾನ್ ಹಿನ್ನೆಲೆಯಲ್ಲಿ ಏರಿಕೆ ಕಂಡಿದೆ. ಇದಲ್ಲದೆ ಪಚ್ಚಬಾಳೆ ಹಣ್ಣು ಕೂಡ ಕೆಜಿ ₹50ರಿಂದ ₹60ರ ವರೆಗೆ ಮಾರಾಟವಾಗುತ್ತಿದೆ. ಬಿಡಿ ಒಂದು ಬಾಳೆ ಹಣ್ಣಿಗೆ ₹5ಕ್ಕೆ ಮಾರಾಟ ಮಾಡಲಾಗುತ್ತಿದೆ.
ಬೆಲೆ ಏರಿಕೆ ಬಿಸಿ: ಈ ಬಾರಿ ತಾಲೂಕಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಬಾಳೆ ಬೆಳೆಗೆ ರೋಗ ಕಾಣಿಸಿದೆ. ಕೆಲವು ವರ್ಷಗಳಿಂದ ಬಾಳೆಹಣ್ಣಿಗೆ ಉತ್ತಮ ದರ ಸಿಕ್ಕಿರಲಿಲ್ಲ. ಈ ವರ್ಷ ಮುಂಗಾರು ಸಮಯದಲ್ಲಿ ಉಂಟಾದ ಹವಾಮಾನ ವ್ಯತ್ಯಯದಿಂದ ಬಾಳೆ ಇಳುವರಿ ಸಂಪೂರ್ಣ ಕುಸಿತವಾಗಿದೆ. ಕೆಲವೆಡೆ ಅಕಾಲಿಕ ಮಳೆ, ಬಿಸಿಲು ಕೂಡ ಸಮಸ್ಯೆಯಾಗಿದೆ. ಇದರಿಂದ ಬಾಳೆಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಮೂರು ತಿಂಗಳ ಹಿಂದೆ ಬಾಳೆಹಣ್ಣು ಖರೀದಿಸುವವರೇ ಇರಲಿಲ್ಲ. ಮತ್ತೊಂದೆಡೆ ರೋಗಬಾಧೆಯೂ ಕಾಣಿಸಿತು. ಕಳೆದ ವರ್ಷವೂ ಇದೇ ಪರಿಸ್ಥಿತಿ ಇತ್ತು. ಬಾಳೆ ಬೆಳೆಗಾರರಿಗೆ ಸ್ಥಿರ ಬೆಲೆ ಸಿಗಲಿಲ್ಲ. ಹೀಗಾಗಿ ಬೇಸರಗೊಂಡ ಕೆಲವು ಏಲಕ್ಕಿ ಬಾಳೆ ಬೆಳೆಗಾರರು ತೋಟಗಳನ್ನೇ ನಾಶಪಡಿಸಿದ್ದರು. ಕೃಷಿಕರು ಬಾಳೆ ಕೃಷಿಯಿಂದ ವಿಮುಖರಾದರು. ಇದು ಸಹ ಬೆಲೆ ಏರಿಕೆಗೆ ಕಾರಣವಾಗಿದೆ.
620 ಹೆಕ್ಟೇರ್‌ನಲ್ಲಿ ಬೆಳೆ: ಮುಂಡರಗಿ ತಾಲೂಕಿನಲ್ಲಿ ಹೋದ ವರ್ಷ 500 ಹೆಕ್ಟೇರ್ ಬಾಳೆ ಬೆಳೆ ಇತ್ತು. ಈ ವರ್ಷ ಮುಂಡರಗಿ ತಾಲೂಕಿನಾದ್ಯಂತ 620ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಡಂಬಳ ಗ್ರಾಮದಲ್ಲಿ ಅತಿ ಹೆಚ್ಚು ಬಾಳೆ ಬೆಳೆಗಾರರಿದ್ದಾರೆ. ಬಾಳೆ ಬೆಳೆಗಾರರು ತೋಟಗಾರಿಕೆ ಇಲಾಖೆಯಿಂದ ಸೂಕ್ತ ಸಲಹೆ-ಸೂಚನೆ ಪಡೆಯಬಹುದು ಎಂದು ಮುಂಡರಗಿ ತಾಲೂಕು ತೋಟಗಾರಿಕಾ ಅಧಿಕಾರಿ ರಫೀಕ ತಾಂಬೋಟಿ ಹೇಳಿದರು.