ಕನ್ನಡಪ್ರಭ ವಾರ್ತೆ ರಾಮನಗರ
ಗ್ರಾಮದ ಪ್ರಮುಖ ಮುಖ್ಯ ರಸ್ತೆ ಅಭಿವೃದ್ದಿ ಹಾಗೂ ಡೇರಿ ರಸ್ತೆಯಲ್ಲಿ ಚರಂಡಿಗಳನ್ನು ಅಸಮರ್ಪಕವಾಗಿ
ನಿರ್ಮಿಸಿದ್ದು, ಸಾರ್ವಜನಿಕರ ರಸ್ತೆಯನ್ನು ಉಳಿಸಬೇಕಾದ ಪುರಸಭೆ ಅಧಿಕಾರಿಗಳೇ ರಸ್ತೆಯನ್ನು ನುಂಗಿದ್ದಾರೆ. ರಸ್ತೆಯಲ್ಲಿ ನಿರ್ಮಿಸಿರು ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದು ಗ್ರಾಮಸ್ಥರು ಎಂಜಿನಿಯರ್ ಶಿಲ್ಪಾ ಗಮನ ಸೆಳೆದರು.ಇದಕ್ಕೆ ಕ್ಯಾರೆ ಎನ್ನದ ಎಂಜಿನಿಯರ್ ಶಿಲ್ಪಾ ನಿರ್ಲಕ್ಷ್ಯ ತೋರಿದಾಗ ಗ್ರಾಮಸ್ಥರು, ಕೂಡಲೇ ಹೊಸದಾಗಿ ಚರಂಡಿ ಕಾಮಗಾರಿ ನಡೆಸಬೇಕು. ಕಾಮಗಾರಿಗಳ ಅಸಮರ್ಪಕ ಮತ್ತು ಕಳಪೆಗೆ ಗುತ್ತಿಗೆದಾರರು ಮತ್ತು ಮೇಲ್ವಿಚಾರಣೆ ಮಾಡಿರುವ ಎಂಜಿನಿಯರ್ ಶಿಲ್ಪಾ ನೇರ ಕಾರಣರಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬೈರವನದೊಡ್ಡಿ-ಬಾನಂದೂರು ರಸ್ತೆ 80 ಅಡಿಗಳ ನಕಾಶೆ ರಸ್ತೆಯಾಗಿದ್ದು, ಪ್ರಭಾವಿ ವ್ಯಕ್ತಿಗಳು ರಸ್ತೆ ಒತ್ತುವರಿ ಮಾಡಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ, ಮಳಿಗೆ ಹಿಂಭಾಗ ಸಣ್ಣ ನೀರಾವರಿ ಇಲಾಖೆಗೆ ಸೇರಿದ ರಾಜಕಾಲುವೆಯನ್ನೂ ಒತ್ತುವರಿ ಮಾಡಿಕೊಳ್ಳಲಾಗಿದೆ. ನಲ್ಲಿಗುಡ್ಡೆಯಿಂದ ಬರುವ ನೀರು ಗೊಲ್ಲಹಳ್ಳಿ ಚೆಕ್ ಡ್ಯಾಂ ಮೂಲಕ ಬಾನಂದೂರು ಗ್ರಾಮದಲ್ಲಿ ಹಾದು ಹೋಗಿರುವ ರಾಜಕಾಲುವೆಯಲ್ಲಿ ಹರಿಯುತ್ತದೆ. ಆದರೆ, ನಾಲೆಯನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ. ಈ ಕೂಡಲೇ ಪುರಸಭೆ, ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ರಾಜಕಾಲುವೆ ಹಾಗೂ ನಕಾಶೆ ರಸ್ತೆ ಉಳಿಸಿಕೊಡುವಂತೆ ಮುಖ್ಯಾಧಿಕಾರಿಗೆ ಮನವಿ ಮಾಡಿದರು.
ಪುರಸಭಾ ಎಂಜಿನಿಯರ್‌ಗಳು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣವೇ ಕಾಮಗಾರಿಯಲ್ಲಿ ನಡೆದಿರುವ ಲೋಪವನ್ನು ಸರಿಪಡಿಸಬೇಕು. ಉನ್ನತ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಂಡು ಗುಣಮಟ್ಟದೊಂದಿಗೆ ಕಾಮಗಾರಿಯನ್ನು ಪುನಃ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಾನಂದೂರು ಗ್ರಾಮಸ್ಥರಾದ ಶಿವನಂಜಪ್ಪ, ಶೇಖರ್, ನಾಗರಾಜು, ಬಸವರಾಜು, ಪೃಥ್ವಿರಾಜು, ರೇವಣಸಿದ್ದಪ್ಪ, ಮಹದೇವಣ್ಣ, ಧನುಷ್ ಮತ್ತಿತರರು ಹಾಜರಿದ್ದರು. .
-ಹೋಟೆಲ್ ಜಗದೀಶ್, ಗ್ರಾಮದ ಮುಖಂಡರು, ಬಾನಂದೂರು
ಬಾನಂದೂರು ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಎಂಜಿನಿಯರ್‌ಗಳು ಸ್ಥಳದಲ್ಲಿಯೇ ಇರುವುದಿಲ್ಲ. ಗುತ್ತಿಗೆದಾರರು ತಮಗಿಷ್ಟ ಬಂದಂತೆ ಕಾಮಗಾರಿ ಮಾಡುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಕಳಪೆ ಕಾಮಗಾರಿಗೆ ಪೋಲಾಗುತ್ತಿದೆ.