ಬಾಣತಿಕಟ್ಟಾ ರಸ್ತೆ ಬಂತು ಜೋಪಾನ

KannadaprabhaNewsNetwork |  
Published : Jun 01, 2025, 03:15 AM IST
28ಎಚ್‌ಯುಬಿ23ಎ,ಬಿ,ಸಿ,ಡಿಬಾಣತಿಕಟ್ಟಾದಿಂದ ನೇಕಾರ ನಗರದ ವರೆಗಿನ ರಸ್ತೆ ಅವಸ್ಥೆ ಸಾರುವ ಚಿತ್ರಗಳುಫೋಟೋ ಈರಪ್ಪ ನಾಯ್ಕರ್ | Kannada Prabha

ಸಾರಾಂಶ

ಕಳೆದ 2-3 ವರ್ಷಗಳಿಂದ ಇಲ್ಲಿ ಅಭಿವೃದ್ಧಿ ಕಾಮಗಾರಿಯ ಹೆಸರಲ್ಲಿ ನೆಲ ಅಗೆಯುವದು, ಮುಚ್ಚುವದು ಹೀಗೆ ಮುಂದುವರಿದಿದೆ. ಹೀಗಾಗಿ, ಈ ರಸ್ತೆಯಲ್ಲಿ ಬಿದ್ದ ಹಲವರು ಕೈಕಾಲು ಮುರಿದುಕೊಂಡ ಘಟನೆಗಳಾಗಿವೆ

ಮಹಮ್ಮದ ರಫೀಕ್ ಬೀಳಗಿ ಹುಬ್ಬಳ್ಳಿ

ಬಾಣತಿಕಟ್ಟೆ ರಸ್ತೆ ಬಂತು ಜೋಪಾನ... ಸ್ವಲ್ಪ ಎಚ್ಚರಿಕೆಯಿಂದ ವಾಹನ ಓಡಿಸಿ. ಅಪ್ಪತಪ್ಪಿ ಬಿದ್ದೀರಿ ಜೋಕೆ.

ಹೌದು, ಬಾಣತಿಕಟ್ಟಾ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರೂ ಹೇಳುವ ಮಾತಿದು. ಯಾಕಂತೀರಾ ಈ ಚಿತ್ರವನ್ನು ಒಮ್ಮೆ ಗಮನಿಸಿ. ಇದು ಯಾವುದೋ ಹಳ್ಳಿಯ ಅಥವಾ ಕುಗ್ರಾಮದ ಚಿತ್ರಣವಲ್ಲ. ಹಳೆ ಹುಬ್ಬಳ್ಳಿಯ ನೇಕಾರ ನಗರದ ಮುಖ್ಯ ರಸ್ತೆ ಅವಸ್ಥೆ.

ಕಳೆದ 2-3 ವರ್ಷಗಳಿಂದ ಇಲ್ಲಿ ಅಭಿವೃದ್ಧಿ ಕಾಮಗಾರಿಯ ಹೆಸರಲ್ಲಿ ನೆಲ ಅಗೆಯುವದು, ಮುಚ್ಚುವದು ಹೀಗೆ ಮುಂದುವರಿದಿದೆ. ಹೀಗಾಗಿ, ಈ ರಸ್ತೆಯಲ್ಲಿ ಬಿದ್ದ ಹಲವರು ಕೈಕಾಲು ಮುರಿದುಕೊಂಡ ಘಟನೆಗಳಾಗಿವೆ.

ಅದ್ಯಾವ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ, ರಸ್ತೆ ಮಾತ್ರ ಸರಿಯಾಗುತ್ತಿಲ್ಲ. ಕಳೆದ ವರ್ಷ ಮಳೆಗಾಲದಲ್ಲಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸಿ ರೋಸಿ ಹೋಗಿದ್ದ ಜನತೆ ಮುಂದಿನ ವರ್ಷದ ಮಳೆಗಾಲದ ವರೆಗೆ ಕಾಮಗಾರಿ ಮುಗಿದು ಸುಸಜ್ಜಿತ ರಸ್ತೆ ನಿರ್ಮಾಣವಾಗುತ್ತದೆ ಎಂಬ ನಂಬಿಕೆಯಲ್ಲಿದ್ದರು. ಆದರೆ, ಚಳಿಗಾಲ, ಬೇಸಿಗೆ ಕಳೆದು ಮತ್ತೆ ಮಳೆಗಾಲ ಕಾಲಿಟ್ಟರೂ ಈ ಕಾಮಗಾರಿ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ.

ಕಳೆದ ವರ್ಷ ಒಳಚರಂಡಿ ನಿರ್ಮಿಸುವ ಸಲುವಾಗಿ ರಸ್ತೆ ಅಗೆದು ಕಾಮಗಾರಿ ನಿರ್ವಹಿಸಲಾಗಿತ್ತು. ಅದಾದ ಬಳಿಕ ಸರಿಯಾಗಿ ತಗ್ಗು ಮುಚ್ಚದಿರುವುದರಿಂದ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿವೆ. ಒಳಚರಂಡಿ ಕಾಮಗಾರಿಗೆ ಒಮ್ಮೆ, ಚರಂಡಿ ಕಾಮಗಾರಿಗೆ ಮತ್ತೊಮ್ಮೆ ಸೇರಿ ವಿವಿಧ ಕಾಮಗಾರಿಗೆ ಪದೇ ಪದೇ ರಸ್ತೆ ಅಗೆಯುತ್ತಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ಸಾಹಸವಾಗಿ ಪರಿಣಮಿಸಿದೆ.

ಹಿಂದೆ ಚರಂಡಿ ಕಾಮಗಾರಿ ಆರಂಭಿಸಿ ಕೈಬಿಡಲಾಗಿತ್ತು. ಈಗ ನಾಲ್ಕೈದು ತಿಂಗ‍ಳಿಂದ ಕಾಮಗಾರಿ ಮತ್ತೆ ಆರಂಭಿಸಲಾಗಿದ್ದು, ಬಹಳ ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಈಗಿನ ಸ್ಥಿತಿ ಗಮನಿಸಿದರೆ ಇನ್ನೂ 7-8 ತಿಂಗಳಾಗುವ ಸಾಧ್ಯತೆ ಇದ್ದು, ಈ ವರ್ಷವೂ ಹೊಂಡಗಳಲ್ಲಿಯೇ ಸಂಚರಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.

ಈ ರಸ್ತೆ ಪಕ್ಕದಲ್ಲೇ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಗಳಿವೆ. ಮಕ್ಕಳು ಬೆಳಗ್ಗೆ ಅಂದದ ಬಟ್ಟೆ ತೊಟ್ಟು ಶಾಲೆಗೆ ಹೊರಡುತ್ತಾರೆ. ಆದರೆ, ಅವರು ಶಾಲೆ ತಲುಪುವಷ್ಟರಲ್ಲಿ ಅವರ ಬಟ್ಟೆ, ಶೂಗಳೆಲ್ಲ ನೀರಲ್ಲಿ ನೆನೆದು ರಾಡಿ ಮೆತ್ತಿಕೊಂಡಿರುತ್ತದೆ. ಇನ್ನು ರೋಗಿಗಳನ್ನು ಆ್ಯಂಬುಲೆನ್ಸ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಬೇಕಾದರೂ ಪರದಾಡುವ ಸ್ಥಿತಿ. ನೀರು ತುಂಬಿಕೊಳ್ಳುವುದರಿಂದ ಎಲ್ಲಿ ಎಷ್ಟು ದೊಡ್ಡ ಗುಂಡಿ ಇದೆಯೋ ಗೊತ್ತಾಗದೆ ಹಲವರು ವಾಹನಗಳಿಂದ ಬಿದ್ದು ನೋವು ಮಾಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ.

ಈ ದೊಡ್ಡದಾದ ಗುಂಡಿಗಳಲ್ಲಿ ಸಂಚರಿಸಿದ ಅದೆಷ್ಟೋ ವಾಹನಗಳು ಜಖಂಗೊಂಡಿವೆ. ಆಟೋ ಸವಾರರು ಕಾಮಗಾರಿ ನಿರ್ವಹಿಸುತ್ತಿರುವವರ ವಿರುದ್ಧ ಶಪಿಸುತ್ತಲೇ ಇಲ್ಲಿ ಸಂಚರಿಸುತ್ತಾರೆ. ಇನ್ನೂ ಕೆಲವರು ಈ ಮಾರ್ಗದಲ್ಲಿ ಬಾಡಿಗೆ ಬರಲು ನಿರಾಕರಿಸುತ್ತಾರೆ. ಅಷ್ಟೊಂದು ಹದಗೆಟ್ಟಿದೆ ಇಲ್ಲಿನ ಸ್ಥಿತಿ.

2 ಅಡಿ ಕೆಳಭಾಗದಲ್ಲಿ ರಸ್ತೆ.

ಬಾಣತಿಕಟ್ಟಾದಿಂದ ನೇಕಾರನಗರ ರಸ್ತೆ ವರೆಗೆ ಚರಂಡಿ ಮತ್ತು ರಸ್ತೆ ಕಾಮಗಾರಿಗಾಗಿ 2-3 ಅಡಿ ಅಗೆಯಲಾಗಿದೆ. ಎರಡು ಬದಿಯಲ್ಲಿ ಚರಂಡಿ ನಿರ್ಮಿಸಲಾಗುತ್ತಿದ್ದು, ಒಳರಸ್ತೆಯಿಂದ ಮುಖ್ಯ ರಸ್ತೆಗೆ ಬರುವವರು ಚರಂಡಿ ಹತ್ತಿ ಇಳಿಯಲು ಹರಸಾಹಸ ಪಡುವಂತಾಗಿದೆ. ವಯೋವೃದ್ಧರು, ಮಕ್ಕಳು, ರೋಗಿಗಳು ಇಲ್ಲಿ ಸಂಚರಿಸಬೇಕೆಂದರೆ ನೂರು ಬಾರಿ ಯೋಚಿಸಬೇಕಿದೆ.

ಮಳೆಗಾಲದಲ್ಲಿ ರಸ್ತೆ ಅಗದಿರುವುದರಿಂದ ಬಾಣತಿಕಟ್ಟೆ ಸರ್ಕಲ್‌ನಿಂದ 200 ಮೀಟರ್‌ ಉದ್ದ ರಸ್ತೆಯಲ್ಲಿ ಕೆರೆಯಂತೆ ನಿಲ್ಲುವ ನೀರಿನಲ್ಲಿ ವಾಹನಗಳು ಸಂಚರಿಸುವುದು ಸವಾಲಾಗಿ ಪರಿಣಮಿಸಿದೆ. ಮೂರ್ನಾಲ್ಕು ವರ್ಷದಿಂದ ಮಳೆ ನೀರು ನಿಲ್ಲುತ್ತಿರುವುದರಿಂದ ಮಳೆಗಾಲದಲ್ಲಿ ಇಲ್ಲಿ ವ್ಯಾಪಾರ ನಡೆಯದೆ ಅಂಗಡಿಕಾರರು ನಷ್ಟ ಅನುಭವಿಸುವ ಜತೆಗೆ ಕೈಯಿಂದ ಬಾಡಿಗೆ ಕಟ್ಟುವ ಸ್ಥಿತಿ ಇದೆ.

ಕಳೆದ ಮೂರ್ನಾಲ್ಕು ವರ್ಷದಿಂದ ಈ ಕಾಮಗಾರಿ ನಡೆದೆ ಇದೆ. ಒಬ್ಬೊಬ್ಬರು ಒಂದೊಂದು ಕಾಮಗಾರಿಗೆ ರಸ್ತೆ ಅಗೆಯುತ್ತಲೇ ಇದ್ದಾರೆ. ಈ ರಸ್ತೆ ಯಾವಾಗ ಸರಿಹೋಗುತ್ತೋ ತಿ‍‍‍ಳಿಯದಾಗಿದೆ. ಪ್ರತಿವರ್ಷ ಈ ಹೊಂಡದಲ್ಲಿ ಸಂಚರಿಸುದೂ ತಪ್ಪದಂತಾಗಿದೆ. ಇಲ್ಲಿನ ಜನರ ಗೋಳು ಕೇಳುವವರಿಲ್ಲದಾಗಿದೆ ಎಂದು ಸ್ಥಳೀಯ ನೇಕಾರನಗರ ನಿವಾಸಿ ಪ್ರಕಾಶ ಹೇಳಿದ್ದಾರೆ. ಕಳೆದ ಆರೇಳು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಹೆಸ್ಕಾಂನಿಂದ ನೆಲದಡಿ ಹಾಕಿರುವ ವಿದ್ಯುತ್‌ ಲೈನ್‌, ಚರಂಡಿಯ ಸಮಸ್ಯೆಗಳನ್ನು ಸರಿಪಡಿಸಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಈಗ ಒಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿಗೆ ತಡೆಯಾಗಿದೆ. ಶೀಘ್ರವೇ ಕಾಮಗಾರಿ ಮುಗಿಸಲಾಗುವುದು.

ಎಚ್‌.ಪಿ. ಮಧುಕರ್ ಆ್ಯಂಡ್‌ ಕಂಪನಿ ಸೈಟ್‌ ಇನ್‌ಚಾರ್ಜ್‌ ದಯಾನಂದ ಬಿರಾದಾರ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ