ಬಾಣಾವರ ಕೋಟೆ ಆಂಜನೇಯಸ್ವಾಮಿ ಜಾತ್ರೆ

KannadaprabhaNewsNetwork |  
Published : Apr 09, 2026, 01:30 AM IST
ಮಣೆವು ಆಚರಣೆಯಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಭಾಗಿ | Kannada Prabha

ಸಾರಾಂಶ

ಮಣೆವು ಆಚರಣೆ ಕರ್ನಾಟಕದ ಜಾನಪದ ಮತ್ತು ಧಾರ್ಮಿಕ ಪರಂಪರೆಯ ವಿಶಿಷ್ಟ ರೂಪವಾಗಿದ್ದು, ವಿಶೇಷವಾಗಿ ಚಿತ್ರದುರ್ಗ, ಶಿರಾ ಭಾಗದ ಕಾಡುಗೊಲ್ಲರ ಸಮುದಾಯದಲ್ಲಿ ಇದು ಸಂಪ್ರದಾಯವಾಗಿ ಆಚರಣೆಗೊಳ್ಳುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ದೇವತಾ ಆರಾಧನೆಯ ಅಂಗವಾಗಿ ನಡೆಯುವ ಈ ಆಚರಣೆಯಲ್ಲಿ, ಭಾಗವಹಿಸುವವರು ಹೆಗಲ ಮೇಲೆ ಕರಿ ಕಂಬಳಿ ಹೊದ್ದು, ತಲೆಗೆ ಟವಲ್ ಸುತ್ತಿ, ಕೈಯಲ್ಲಿ ಬಿದಿರಿನ ಕೋಲು ಹಿಡಿದು, ಹಾಡು-ಹರಟೆಗಳೊಂದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿಯುತ್ತಾರೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಣಾವರದ ಸುಪ್ರಸಿದ್ಧ ಕೋಟೆ ಆಂಜನೇಯಸ್ವಾಮಿಯ ಜಾತ್ರಾ ಮಹೋತ್ಸವವು ಈ ಬಾರಿ ಧಾರ್ಮಿಕ ಭಕ್ತಿ, ಜಾನಪದ ಸಂಪ್ರದಾಯ ಮತ್ತು ಸಾಂಸ್ಕೃತಿಕ ಸಂಭ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯುತ್ತಿದ್ದು, ಮಣೆವು ಆಚರಣೆಯಲ್ಲಿ ಶಾಸಕ ಕೆ. ಎಂ. ಶಿವಲಿಂಗೇಗೌಡ ಭಾಗಿಯಾಗಿರುವುದು ವಿಶೇಷ ಆಕರ್ಷಣೆಯಾಗಿ ಮೂಡಿಬಂದಿತು.

ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಕರ್ನಾಟಕ ಗೃಹಮಂಡಳಿ ಅಧ್ಯಕ್ಷರೂ ಆದ ಸ್ಥಳೀಯ ಶಾಸಕ ಕೆ.ಎಂ. ಶಿವಲಿಂಗೇಗೌಡರು, ಸಂಪ್ರದಾಯಬದ್ಧ ಮಣೆವು ಆಚರಣೆಯಲ್ಲಿ ಸಾಂಕೇತಿಕವಾಗಿ ಭಾಗವಹಿಸಿ ಭಕ್ತರ ಹಾಗೂ ಸಾರ್ವಜನಿಕರ ಗಮನ ಸೆಳೆದರು. ಅವರ ಈ ಭಾಗವಹಿಸುವಿಕೆ ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು. ಮಣೆವು ಆಚರಣೆ ಕರ್ನಾಟಕದ ಜಾನಪದ ಮತ್ತು ಧಾರ್ಮಿಕ ಪರಂಪರೆಯ ವಿಶಿಷ್ಟ ರೂಪವಾಗಿದ್ದು, ವಿಶೇಷವಾಗಿ ಚಿತ್ರದುರ್ಗ, ಶಿರಾ ಭಾಗದ ಕಾಡುಗೊಲ್ಲರ ಸಮುದಾಯದಲ್ಲಿ ಇದು ಸಂಪ್ರದಾಯವಾಗಿ ಆಚರಣೆಗೊಳ್ಳುತ್ತದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ದೇವತಾ ಆರಾಧನೆಯ ಅಂಗವಾಗಿ ನಡೆಯುವ ಈ ಆಚರಣೆಯಲ್ಲಿ, ಭಾಗವಹಿಸುವವರು ಹೆಗಲ ಮೇಲೆ ಕರಿ ಕಂಬಳಿ ಹೊದ್ದು, ತಲೆಗೆ ಟವಲ್ ಸುತ್ತಿ, ಕೈಯಲ್ಲಿ ಬಿದಿರಿನ ಕೋಲು ಹಿಡಿದು, ಹಾಡು-ಹರಟೆಗಳೊಂದಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ಕುಣಿಯುತ್ತಾರೆ.

ಈ ಆಚರಣೆಯ ಇನ್ನೊಂದು ವಿಶೇಷವೆಂದರೆ, ಕರಿ ಕಂಬಳಿ ಅಥವಾ ಬಿಳಿ ವಸ್ತ್ರದ ಮೇಲೆ ಹಲಸಿನ ಹಣ್ಣಿಗೆ ಜೇನುತುಪ್ಪ ಬೆರೆಸಿ ಗುಡ್ಡೆಯ ರೂಪದಲ್ಲಿ ಇಟ್ಟು, ಅದರ ಸುತ್ತಲೂ ಸಂಭ್ರಮದಿಂದ ಕುಣಿದು ಬಳಿಕ ಅದನ್ನು ಕೈಯಲ್ಲಿ ಪಡೆದು ತಿನ್ನುವ ಸಂಪ್ರದಾಯ. ಇದೇ ವಿಧಾನದಂತೆ ಬಾಣಾವರದ ಜಾತ್ರೆಯಲ್ಲಿಯೂ ಸಂಪ್ರದಾಯಬದ್ಧವಾಗಿ ಮಣೆವು ಆಚರಣೆ ನೆರವೇರಿತು. ಈ ವೇಳೆ ಶಾಸಕ ಶಿವಲಿಂಗೇಗೌಡರು ಮತ್ತು ಇತರರು ಬಿಳಿ ಟವಲ್‌ನ್ನು ಕೈಯಲ್ಲಿ ಹಿಡಿದು, ಕರಿ ಕಂಬಳಿ ಮೇಲೆ ಇರಿಸಿದ್ದ ಹಲಸಿನ ಹಣ್ಣಿನ ಗುಡ್ಡೆಯ ಸುತ್ತ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ದೃಶ್ಯ ಜಾತ್ರೆಯಲ್ಲಿ ನೆರೆದಿದ್ದ ಭಕ್ತರಲ್ಲಿ ಉತ್ಸಾಹ ಮೂಡಿಸಿತು.ಬಳಿಕ ಮಾತನಾಡಿದ ಶಾಸಕ ಕೆ.ಎಂ. ಶಿವಲಿಂಗೇಗೌಡರು ಜಾತ್ರೆಗಳು ಎಂದರೆ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅವು ಸ್ಥಳೀಯರು ಮತ್ತು ಸುತ್ತಮುತ್ತಲಿನ ಜನರನ್ನು ಒಂದೇ ವೇದಿಕೆಯಲ್ಲಿ ಒಂದಾಗಿಸುವ ಸಾಮರಸ್ಯದ ಸಂಕೇತ. ಬಾಣಾವರದಲ್ಲಿ ಮಣೆವು ಆಚರಣೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಅದರಲ್ಲಿ ನಾನೂ ಸಾಂಕೇತಿಕವಾಗಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾಂಪ್ರದಾಯಿಕ ಆಚರಣೆಗಳು ಮುಂದುವರಿಯಬೇಕು. ಜನರು ಈ ರೀತಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಹಳ್ಳಿಗಳಲ್ಲಿ ಶಾಂತಿ, ಸೌಹಾರ್ದ ಮತ್ತು ಪರಸ್ಪರ ಬಾಂಧವ್ಯ ವಾತಾವರಣ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಭಾಗದ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವುದು ಅವಶ್ಯ
ಬಸ್‌ ನಿಲ್ದಾಣ ಉದ್ಘಾಟಿಸಿದ ಸಂಸದ ಡಾ.ಸುಧಾಕರ್‌