ಕಪ್ಪು ಪಟ್ಟಿ ಧರಿಸಿ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯರು
ಆರ್ಯುವೇದ ವೈದ್ಯರು ಸಹ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಕನ್ನಡಪ್ರಭ ವಾರ್ತೆ ಕೊಪ್ಪಳ
ಕೋಲ್ಕತ್ತಾದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿ ಹತ್ಯೆ ಖಂಡಿಸಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಜಿಲ್ಲಾದ್ಯಂತ ಹೊರರೋಗಿಗಳು ಪರದಾಡುವಂತಾಯಿತು.ಭಾರತೀಯ ವೈದ್ಯರ ಸಂಘ ಕರೆಯ ಹಿನ್ನೆಲೆಯಲ್ಲಿ ವೈದ್ಯರ ಸಂಘದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದರಿಂದ ದೂರು ಉಳಿದರು. ಹೀಗಾಗಿ, ಜಿಲ್ಲಾ ಕೇಂದ್ರ ಕೊಪ್ಪಳ ಸೇರಿದಂತೆ ವಿವಿಧೆಡೆಯೂ ಇರುವ ಖಾಸಗಿ ಆಸ್ಪತ್ರೆಗಳು ಬಹುತೇಕ ಬಂದ್ ಆಗಿದ್ದವು. ಇನ್ನು ಒಳರೋಗಿಗಳಿಗೆ ಚಿಕಿತ್ಸೆ ಎಂದಿನಂತೆ ನಡೆಯಿತು.
ಆದರೆ, ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರು ಹಾಗೂ ಆರ್ಯುವೇದ ವೈದ್ಯರು ಕಪ್ಪುಪಟ್ಟಿ ಧರಿಸಿ ಒಪಿಡಿ ಚಿಕಿತ್ಸೆಯನ್ನು ನೀಡಿದರು. ಇದರಿಂದಾಗಿ ಹೊರರೋಗಿಗಳು ಅಷ್ಟಾಗಿ ಸಮಸ್ಯೆಯನ್ನು ಎದುರಿಸಲಿಲ್ಲ. ನಿಯಮಾನುಸಾರ ಆಯಾ ವೈದ್ಯರ ಬಳಿಯೇ ಚಿಕಿತ್ಸೆ ಪಡೆಯಬೇಕಾದ ರೋಗಿಗಳು ಮಾಹಿತಿ ಇರದೆ ಚಿಕಿತ್ಸೆಗಾಗಿ ಬಂದು, ವಾಪಸ್ಸು ಹೋಗುವಂತಾಯಿತು.ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಇರುವ ಖಾಸಗಿ ಆಸ್ಪತ್ರೆಗಳು ಬಂದಾಗಿದ್ದವು.
ಪ್ರತಿಭಟನೆ:ವೈದ್ಯ ವಿದ್ಯಾರ್ಥಿ ಹತ್ಯೆ ಖಂಡಿಸಿ ಕೊಪ್ಪಳ ನಗರದಲ್ಲಿ ವಿವಿಧ ಸಂಘಟನೆಗಳು ಸಹ ಪ್ರತಿಭಟನೆ ನಡೆಸಿದವು.ಎಐಡಿವೈಓ ಸಂಘಟನೆ ಹಾಗೂ ಮಹಿಳಾ ಸಂಘಟನೆಗಳು ಸಹ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದವು.
ವಿಪರೀತ ಗದ್ದಲ:ಖಾಸಗಿ ಆಸ್ಪತ್ರೆಗಳು ಬಂದಾಗಿದ್ದರಿಂದ ಆಯುರ್ವೇದ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಹೊರರೋಗಿಗಳನ್ನು ನೋಡುತ್ತಿದ್ದರಿಂದ ವಿಪರೀತ ಗದ್ದಲ ಇರುವುದು ಕಂಡು ಬಂದಿತು. ಇರುವ ಕೆಲವೇ ಆಸ್ಪತ್ರೆಯಲ್ಲಿ ರೋಗಿಗಳು ಹೋಗಿ ಚಿಕಿತ್ಸೆ ಪಡೆಯುತ್ತಿದ್ದರು.ವಿದ್ಯಾರ್ಥಿನಿ ಅತ್ಯಾಚಾರ ಖಂಡಿಸಿ ಕನಕಗಿರಿಯಲ್ಲಿ ಪ್ರತಿಭಟನಾ ಮೆರವಣಿಗೆ:
ಕೋಲ್ಕತ್ತಾದ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ಐಎಂಎ ನಡೆಸುತ್ತಿರುವ ಹೋರಾಟ ಬೆಂಬಲಿಸಿ ಕನಕಗಿರಿ ತಾಲೂಕು ವೈದ್ಯರ ಸಂಘ ಶನಿವಾರ ಕನಕಗಿರಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.ವೈದ್ಯ ಡಿ.ಎಂ. ಅರವಟಗಿಮಠ ಮಾತನಾಡಿ, ಕೋಲ್ಕತ್ತಾದ ಮೆಡಿಕಲ್ ಕಾಲೇಜುವೊಂದರಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವಾಗಿದೆ. ದೇಶದ ಮಹಿಳಾ ವೈದ್ಯರಿಗೆ ಭದ್ರತೆ ಇಲ್ಲವಾಗಿದ್ದರಿಂದ ರೋಗಿಗಳ ಸೇವೆ ಸಲ್ಲಿಸಲು ಮೀನಮೇಷ ಎಣಿಸುವಂತಾಗಿದೆ. ಸರ್ಕಾರ ಇಂತಹ ಕೃತ್ಯಗಳು ನಡೆಯದಂತೆ ಕಾನೂನನ್ನು ಬಿಗಿಗೊಳಿಸುವ ಮೂಲಕ ಕೃತ್ಯವೆಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮಹಿಳಾ ವೈದ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.ತಹಸೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ವೈದ್ಯರಾದ ಬಸವರಾಜ ಹಿರೇಮಠ, ರಂಗಾರೆಡ್ಡಿ ಗಚ್ಚಿನಮನಿ, ಮಲ್ಲಿಕಾರ್ಜುನ ಬೇವಿನಮರದ, ನಾಗರಾಜ ಪಾಟೀಲ್, ಐ.ಎಚ್. ಕಿನ್ನಾಳ್, ಸಿದ್ರಾಮೇಶ, ಶಾಬುದ್ದೀನ್, ಔಷಧಿ ಅಂಗಡಿಗಳ ವ್ಯಾಪಾರ ಸಂಘದವರಾದ ಅನಿಲ ಬಿಜ್ಜಳ, ಪಶುಪತಿ ಪಾಟೀಲ್, ವಜೀರ, ಅಭಿಷೇಕ ಕಲುಬಾಗಿಲಮಠ ಇತರರು ಇದ್ದರು.