ಬಂಟಕಲ್ಲು: ಕೆಸರುಗದ್ದೆ ಕ್ರೀಡೋತ್ಸವ ‘ಗಾದೆಂತ್ ಕ್ಹೇಳ್ ಮೇಳ್’ ಸಂಪನ್ನ

KannadaprabhaNewsNetwork |  
Published : Jun 25, 2024, 12:39 AM IST
ಕೆಸರು24 | Kannada Prabha

ಸಾರಾಂಶ

ಮಕ್ಕಳು, ಯುವಕರು, ಯುವತಿಯರು, ಹಿರಿಯರು ಮಹಿಳೆಯರೆನ್ನದೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ದಿನಪೂರ್ತಿ ಆಡಿ, ಓಡಿ, ಬಿದ್ದು, ಎದ್ದು ಸಂಭ್ರಮಿಸಿದರು!

ಕನ್ನಡಪ್ರಭ ವಾರ್ತೆ ಕಾಪು

ಇಲ್ಲಿನ ಬಂಟಕಲ್ಲು ಸಮೀಪದ ಸಡಂಬೈಲು ಅನಂತರಾಮ ವಾಗ್ಳೆಯವರ ಕೆಸರುಗದ್ದೆಯಲ್ಲಿ ಭಾನುವಾರ ಬೆಳಗ್ಗೆಯಿಂದ ಸ್ವಲ್ಪ ಬಿಸಿಲು, ನಡುನಡುವೆ ಹನಿಹನಿ ತುಂತುರು ಮಳೆಯ ಸಿಂಚನದ ಜೊತೆಗೆ ಮಕ್ಕಳು, ಯುವಕರು, ಯುವತಿಯರು, ಹಿರಿಯರು ಮಹಿಳೆಯರೆನ್ನದೆ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ದಿನಪೂರ್ತಿ ಆಡಿ, ಓಡಿ, ಬಿದ್ದು, ಎದ್ದು ಸಂಭ್ರಮಿಸಿದರು!

ಪ್ರಾರಂಭದ ಸ್ಪರ್ಧೆಯಾಗಿ ನಿಧಿ ಶೋಧದಲ್ಲಿ ಕೆಸರಲ್ಲಿ ತೆಂಗಿನ ಕಾಯಿ ಹುಡುಕಾಟ ಅತ್ಯಂತ ರೋಚಕವಾಗಿತ್ತು. ಸಂಘಟಕರು ಐದು ಕಾಯಿಗಳನ್ನು ಮೊದಲೇ ಕೆಸರಲ್ಲಿ ಹೂತಿದ್ದು, ಸ್ಪರ್ಧಿಗಳು ಗದ್ದೆಯಿಡೀ ಹುಡುಕಾಡುತ್ತಿದ್ದ ದೃಶ್ಯವೇ ಪ್ರೇಕ್ಷಕರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.

ನಂತರ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆಯ ದಾರಿ ತಪ್ಪಿ ಕೆಸರಿನಲ್ಲಿ ಬಿದ್ದೇಳುತ್ತಿದ್ದ ದೃಶ್ಯ ನೋಡುಗರ ಕಣ್ಣಿ ಹಬ್ಬವನ್ನುಂಟು ಮಾಡಿತ್ತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪರವಿರೋಧ ತಂಡಗಳ ಬೆಂಬಲಿಗರ ಘೋಷಣೆಗಳು ಕಾರ್ಯಕ್ರಮದ ಜೋಶನ್ನು ತೋರಿಸುತ್ತಿತ್ತು.

ಮಹಿಳೆಯರಿಗಾಗಿ ತೆಂಗಿನ ಸೋಗೆ ಹೆಣೆಯುವ ಸ್ಪರ್ಧೆ ನಮ್ಮ ಹಿರಿಯರ ಜೀವನವನ್ನು ನೆನಪಿಸಿದರೆ, ಪುರುಷರು ಬೈಹುಲ್ಲಿನಲ್ಲಿ ಹಗ್ಗೆ ನೇಯುವ ಸ್ಪರ್ಧೆ ಇಂದಿನ ಜನಾಂಗಕ್ಕೆ ಹೀಗೂ ನಮ್ಮ ಹಿಂದಿನ ಜೀವನ ಇತ್ತು ಎಂದು ಪರಿಚಯಿಸುವಂತಿತ್ತು.

ಮಕ್ಕಳು ರಜಾಕಾಲದಲ್ಲಿ ಅಡಕೆ ಹಾಳೆಯಲ್ಲಿ ಕುಳಿತು ಎಳೆಯುವುದನ್ನು ಇಲ್ಲಿ ಕೆಸರಿನಲ್ಲಿ ನಡೆಸಲಾಯಿತು, ಇದು ಸ್ಪರ್ಧೆಯಾಗಿ ಬಹಳ ಮಜಾ ನೀಡಿತು. ಈ ಸ್ಪರ್ಧೆಯಲ್ಲಿ ಹೆಚ್ಚಿನ ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ಕೆಸರಲ್ಲಿ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಕುರ್ಚಿ ಹಿಡಿಯಲು ಪಡುತ್ತಿದ್ದ ಪಾಡು ರೋಚಕವಾಗಿತ್ತು. ಕೊನೆಯಲ್ಲಿ ಜೋರಾಗಿ ಸುರಿದ ಮಳೆಯಲ್ಲಿ ರೈನ್ ಡ್ಯಾನ್ಸ್ ಎಲ್ಲ ಸುಸ್ತನ್ನು ದೂರ ಮಾಡಿತ್ತು.

* ಉದ್ಘಾಟನಾ ಕಾರ್ಯಕ್ರಮ

ಕೆಸರುಗದ್ದೆ ಸ್ಪರ್ಧೆಯ ನೇತೃತ್ವ ವಹಿಸಿದ್ದು ಬಂಟಕಲ್ಲು ರಾಜಾಪುರ ಸಾರಸ್ವತ ಸೇವಾ ವೃಂದ ಹಾಗೂ ಮಹಿಳಾ ವೃಂದದವರು. ಬೆಳಗ್ಗೆ ಉದ್ಘಾಟನಾ ಸಮಾರಂಭದಲ್ಲಿ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ಕಾರ್ಕಳ ರಾಜಾಪುರ ಸಾರಸ್ವತ ಕ್ರೆ.ಕೊ.ಬ್ಯಾಂಕ್ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಜಯರಾಮ ಪ್ರಭು ಗಂಪದಬೈಲು, ಉದ್ಯಮಿ ರಾಮಚಂದ್ರ ನಾಯಕ್, ಮಹಿಳಾ ವೃಂದದ ಅಧ್ಯಕ್ಷೆ ಸರಸ್ವತಿ ಪ್ರಭು, ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ, ಯುವ ಉದ್ಯಮಿ ಹರೀಶ್ ನಾಯಕ್ ಹಿರಿಯಡ್ಕ ಉಪಸ್ಥಿತರಿದ್ದು, ಗದ್ದೆಗೆ ಒಂಭತ್ತು ಕಲಶಗಳಲ್ಲಿ ಹಾಲು ಎರೆಯುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.

* ಸಮಾರೋಪ ಸಮಾರಂಭ

ಸಂಜೆ ಜರುಗಿದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಗಣ್ಯರಾದ ಶಿವಾನಂದ ನಾಯಕ್ ಕಡಂಬು, ರಾಮಚಂದ್ರ ನಾಯಕ್, ಶಶಿಧರ ವಾಗ್ಲೆ, ಸರಸ್ವತಿ ಕಾಮತ್, ಪಿಡಿಒ ಶೈಲಜಾ ನಾಯಕ್ ಉಪಸ್ಥಿತರಿದ್ದರು.

ಕೃಷಿ ಸಾಧಕ ನಿತ್ಯಾನಂದ ನಾಯಕ್ ಪಾಲಮೆ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಕೆ.ಆರ್.ಪಾಟ್ಕರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾತಿಸಿದರು. ಶಿಕ್ಷಕ ದೇವದಾಸ ಪಾಟ್ಕರ್ ನಿರೂಪಿಸಿದರು. ಕಾರ್ಯದರ್ಶಿ ವಿಶ್ವನಾಥ್ ಬಾಂದೇಲ್ಕರ್ ವಂದಿಸಿದರು.

ಎಲ್ಲರೂ ಹಳೆಯ ಕೃಷಿ ಕುಟುಂಬದ ಮಾದರಿಯಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಕಡ್ಲೆ ಉಪ್ಕರಿ, ಮಸಾಲೆ ಅವಲಕ್ಕಿ, ಚಹಾ, ಮಧ್ಯಾಹ್ನದ ಊಟದಲ್ಲಿ ಕುಚ್ಚಲಕ್ಕಿ ಗಂಜಿ, ಉಪ್ಪಿನಕಾಯಿ, ತಿಮರೆ ಚಟ್ನಿ, ಜೈನ್ ಉಪ್ಪಿನಕಾಯಿ, ಹಲಸಿನಸೊಳೆ, ಹುರುಳಿಕಟ್ಟು, ಮೊಸರು, ಮಜ್ಜಿಗೆ ಮೆಣಸು, ಪಾಯಸನ್ನು ತಿಂದುಂಡು ಖುಷಿಪಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿಸಾನ್‌ ಸನ್ಮಾನ್‌ ಇ - ಕೆವೈಸಿಗೆ ಸರ್ವರ್‌ ಅಡ್ಡಿ!
ವರ್ಷಕ್ಕೆ ಲಕ್ಷ ಮಂದಿಗೆ ರೋಗ- 40 ಸಾವಿರ ಸಾವು : ಆತಂಕಕಾರಿ ಮಾಹಿತಿ ನೀಡಿದ ಡಾ.ಸಿಎನ್ ಮಂಜುನಾಥ್