ಕುಕನೂರಿನಲ್ಲಿ ಬಂದ್ ಯಶಸ್ವಿ, ಪಟ್ಟಣ ಸ್ತಬ್ಧ

KannadaprabhaNewsNetwork | Published : Oct 12, 2023 12:00 AM

ಸಾರಾಂಶ

ಕುಕನೂರಿನ ಕೋಳಿಪೇಟೆಯಿಂದ ಪ್ರಾರಂಭವಾದ ಹೋರಾಟ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತದವರೆಗೆ ಬೇಡಿಕೆಗಳ ಘೋಷಣೆಗಳನ್ನು ಕೂಗುತ್ತಾ ಮಾನವ ಸರಪಳಿ ನಿರ್ಮಿಸಿ ತಾಲೂಕು ಕಚೇರಿಗಳು ಪಟ್ಟಣದಲ್ಲಿ ಆಗಲೇಬೇಕು ಎಂದು ಘೋಷಣೆಗಳನ್ನು ಕೂಗಿದರು. ಬೆಳಗ್ಗೆಯಿಂದ ಪಟ್ಟಣದಲ್ಲಿ ಯಾವುದೇ ಅಂಗಡಿಗಳು ತೆರೆಯದೇ ಇರುವುದರಿಂದ ಪ್ರಮುಖ ರಸ್ತೆಗಳು, ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಕುಕನೂರು:ಪಟ್ಟಣಕ್ಕೆ ಸೇರಿದ ಸರ್ಕಾರಿ ಜಮೀನಿನಲ್ಲಿಯೇ ನೂತನ ಕುಕನೂರು ತಾಲೂಕು ಆಡಳಿತ ಕಚೇರಿಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿ ಬುಧವಾರ ಪಟ್ಟಣದ ವರ್ತಕರು, ವಿವಿಧ ಸಂಘ-ಸಂಸ್ಥೆಯವರು ಕುಕನೂರು ಬಂದ್ ಮಾಡುವ ಮೂಲಕ ತಹಸೀಲ್ದಾರ ಎಚ್.ಪ್ರಾಣೇಶ ಅವರಿಗೆ ಮನವಿ ಸಲ್ಲಿಸಿದರು.ಬೆಳಗ್ಗೆಯಿಂದ ಪಟ್ಟಣದಲ್ಲಿ ಎಲ್ಲ ವರ್ತಕರು ಅಂಗಡಿಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ಬೀದಿಬದಿ ವ್ಯಾಪಾರ ಸಹ ಸ್ಥಗಿತವಾಗಿತ್ತು. ಬಂದ್‌ಗೆ ಬೆಂಬಲಿಸಿ ಹಲವಾರು ಸಂಘಟನೆಗಳು ಸಾಥ್ ನೀಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟಿಸುತ್ತಾ ಸಾಗಿದರು.ಪಟ್ಟಣದ ಕೋಳಿಪೇಟೆಯಿಂದ ಪ್ರಾರಂಭವಾದ ಹೋರಾಟ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತದವರೆಗೆ ಬೇಡಿಕೆಗಳ ಘೋಷಣೆಗಳನ್ನು ಕೂಗುತ್ತಾ ಮಾನವ ಸರಪಳಿ ನಿರ್ಮಿಸಿ ತಾಲೂಕು ಕಚೇರಿಗಳು ಪಟ್ಟಣದಲ್ಲಿ ಆಗಲೇಬೇಕು ಎಂದು ಘೋಷಣೆಗಳನ್ನು ಕೂಗಿದರು. ಬೆಳಗ್ಗೆಯಿಂದ ಪಟ್ಟಣದಲ್ಲಿ ಯಾವುದೇ ಅಂಗಡಿಗಳು ತೆರೆಯದೇ ಇರುವುದರಿಂದ ಪ್ರಮುಖ ರಸ್ತೆಗಳು, ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.ಕುಕನೂರಿನಲ್ಲಿಯೇ ತಹಸೀಲ್ದಾರ ಕಚೇರಿ, ತಾಲೂಕು ನ್ಯಾಯಾಲಯ, ಕ್ರೀಡಾಂಗಣ ಕಟ್ಟಡಗಳ ನಿರ್ಮಾಣ ಆಗಬೇಕು. ಪಟ್ಟಣ ಬಿಟ್ಟು ಬೇರೆ ಗ್ರಾಮಗಳಲ್ಲಿ ನಿರ್ಮಾಣ ಮಾಡಬಾರದು. ಪಟ್ಟಣಕ್ಕೆ ಸೇರಿದ ಸರ್ಕಾರಿ ಜಾಗದಲ್ಲಿಯೇ ನಿರ್ಮಾಣ ಮಾಡಬೇಕು ಎಂದು ಘೋಷಣೆ ಕೂಗುತ್ತಾ ಸಾಗಿದರು. 15ಕ್ಕೂ ಹೆಚ್ಚಿನ ನಾನಾ ಸಂಘ, ಸಂಸ್ಥೆಯವರು ಸೇರಿದ್ದರು. ನೂರಾರು ಜನರು ಒಕ್ಕೊರಲಿನಿಂದ ಧ್ವನಿಗೂಡಿಸಿ ಒತ್ತಾಯಿಸಿದರು.ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ ಮಾತನಾಡಿ, ಪಟ್ಟಣವು ಸುಮಾರು ೨೦ ಸಾವಿರ ಜನಸಂಖ್ಯೆ ಹೊಂದಿದ್ದು, ಹತ್ತಾರು ಶಿಕ್ಷಣ ಸಂಸ್ಥೆಗಳು, ಶೇಂಗಾಮಿಲ್‌, ಕೃಷಿ ಮಾರುಕಟ್ಟೆ, ಗ್ರಾನೈಟ್ ಫಾಕ್ಟರಿ, ಅಗತ್ಯ ಸೇವೆಗಳು, ವ್ಯಾಪಾರ-ವಹಿವಾಟು, ಶೈಕ್ಷಣಿಕ, ಆರ್ಥಿಕವಾಗಿ ಮುಂದುವರೆಯುತ್ತಿರುವ ನಗರವಾಗಿದೆ. ಕುಕನೂರು ತಾಲೂಕು ಕೇಂದ್ರವಾಗಬೇಕು ಎಂದು ೫೧ ದಿನಗಳ ಕಾಲ ನಿರಂತರ ಹೋರಾಟ ಮಾಡಿದ್ದರ ಫಲವಾಗಿ ಕುಕನೂರು ತಾಲೂಕು ಕೇಂದ್ರವಾಗಿದೆ ಎಂದರು.ಮುಖಂಡ ಸಿದ್ದಯ್ಯ ಕಳ್ಳಿಮಠ ಮಾತನಾಡಿ, ಪಟ್ಟಣ ಬಿಟ್ಟು ಬೇರೆ ಕಡೆ ತಹಸೀಲ್ದಾರ ಕಚೇರಿ ನಿರ್ಮಾಣ ಮಾಡುವುದು ಸರಿಯಲ್ಲ. ಇಲ್ಲೇ ಆದಲ್ಲಿ ತಾಲೂಕು ಕೇಂದ್ರ ಕುಕನೂರಿಗೂ ಶೋಭೆ. ಜನರ ಸಂಚಾರಕ್ಕೂ ಅನುಕೂಲ ಎಂದರು.ಹೋರಾಟದಲ್ಲಿ ಮುಖಂಡರಾದ ಕಾಸೀಮಸಾಬ ತಳಕಲ್, ರೆಹಮಾನ್‌ಸಾಬ ಮಕ್ಕಪ್ಪನವರ್, ಸಂಗಮೇಶ ಗುತ್ತಿ, ಪಪಂ ಸದಸ್ಯ ನೂರುದ್ದೀನ್‌ಸಾಬ ಗುಡಿಹಿಂದಲ್, ಯಲ್ಲಪ್ಪ ಕಲ್ಮನಿ, ಈಶಪ್ಪ ದೊಡ್ಡಮನಿ, ಬಸವರಾಜ ಕೊಡ್ಲಿ, ಅಂದಪ್ಪ ಹುರುಳಿ, ಶರಣಪ್ಪ ಚಲವಾದಿ ಪಾಲ್ಗೊಂಡರು.ಪ್ರತಿಭಟನೆಯಲ್ಲಿ ವರ್ತಕರ ಸಂಘ, ಕಿರಾಣಿ ವರ್ತಕರ ಸಂಘ, ವರ್ತಕರ ಕ್ಷೇಮಾಭಿವೃದ್ಧಿ ಸಂಘ, ಹಮಾಲರ ಸಂಘ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಭೀಮ್ ಆರ್ಮಿ, ನ್ಯಾಯವಾದಿಗಳ ಸಂಘ, ಕಟ್ಟಡ ಕಾರ್ಮಿಕರ ಸಮಿತಿ, ಬಾರ್ ಬೆಂಡಿಂಗ್ ಕಾರ್ಮಿಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಗ್ಯಾರೇಜ್ ಒಕ್ಕೂಟ, ವ್ಯಾಪಾರಿಗಳ ಸಂಘ, ಚಾಲಕರ ಒಕ್ಕೂಟ, ಬೀದಿಬದಿ ವ್ಯಾಪಾರಸ್ಥರ ಸಂಘಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಯಾಕೀ ಒತ್ತಾಯ: ಪಟ್ಟಣದಲ್ಲಿ ಕೊಪ್ಪಳ ರಸ್ತೆಗೆ ಹೊಂದಿಕೊಂಡಂತೆ 18 ಎಕರೆ ಭೂಮಿಯನ್ನು ತಾಲೂಕು ಆಡಳಿತ ಕಚೇರಿ, ಕ್ರೀಡಾಂಗಣ ನಿರ್ಮಾಣಕ್ಕಾಗಿ ಭೂಸ್ವಾಧೀನಕ್ಕೆ ಸರ್ಕಾರಕ್ಕೆ ತಹಸೀಲ್ದಾರರು ಒತ್ತಾಯಿಸಿದ್ದರು. ಭೂಮಿ ನೀಡುವುದಿಲ್ಲ ಎಂದು ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಮಧ್ಯೆ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ನಳಿನಅತುಲ್, ಶಾಸಕ ಬಸವರಾಜ ರಾಯರಡ್ಡಿ ಪಟ್ಟಣದ ಗುದ್ನೇಪ್ಪನಮಠದ ಸರ್ಕಾರಿ ಜಾಗದಲ್ಲಿ ತಾಲೂಕು ಆಡಳಿತ ಕಚೇರಿ ನಿರ್ಮಾಣಕ್ಕೆ ಜಾಗ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆ ತಾಲೂಕು ಆಡಳಿತ ಕಚೇರಿ, ಇತರೆ ಕಟ್ಟಡಗಳನ್ನು ಕುಕನೂರು ಪಟ್ಟಣದಲ್ಲಿ ಭೂಮಿ ಸಿಗದೇ ಇದ್ದರೆ ಅನ್ಯ ಗ್ರಾಮದಲ್ಲಿ ಭೂಮಿ ಸಿಕ್ಕರೆ ನಿರ್ಮಾಣ ಮಾಡುತ್ತಾರೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆ ಬಂದ್ ಮಾಡಿ ಆಕ್ರೋಶ ಹೊರಹಾಕಿದರು.

Share this article