ಮಂಡ್ಯ: ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಹೋರಾಟ ಮುಂದುವರೆದಿದ್ದು, ಕಾವೇರಿ ಹೋರಾಟಗಾರರು ಧರಣಿ, ರಸ್ತೆ ತಡೆ ನಡೆಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಿರಂತರ ಧರಣಿಯಲ್ಲಿ ಸಮಿತಿಯ ಮುಖಂಡರ ಜೊತೆಗೂಡಿದ ಜಾನಪದ ಕಲಾವಿದರು ಹಾಡುಗಳ ಮೂಲಕ ಕಾವೇರಿ ನದಿ ನೀರಿನ ವಿಚಾರದಲ್ಲಿ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು -ಮೈಸೂರು ಹೆದ್ದಾರಿಗೆ ಇಳಿದ ಹೋರಾಟಗಾರರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರು, ಸುಮಾರು ಅರ್ಧ ತಾಸು ಹೆದ್ದಾರಿ ತಡೆದ ಹಿನ್ನೆಲೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದವರು ಅಲ್ಲಿಯೇ ಇಳಿದು ಬಸ್ ನಿಲ್ದಾಣದತ್ತ ಹೊರಟರು. ಅಕ್ಕ ಪಕ್ಕದ ರಸ್ತೆಯಿಂದ ಹೆದ್ದಾರಿಗೆ ಬರುತ್ತಿದ್ದ ವಾಹನಗಳನ್ನು ಸಹ ಪ್ರತಿಭಟನಾಕಾರರು ತಡೆದ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಕಾವೇರಿ ಹೋರಾಟದ ಬಿಸಿ ತಟ್ಟಿತು. ಕೇಂದ್ರ, ರಾಜ್ಯ ಸರ್ಕಾರ, ಸಂಸದರು ಶಾಸಕರ ವಿರುದ್ಧ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು, ಆಳುವ ಸರ್ಕಾರಗಳು, ಚುನಾಯಿತ ಜನಪ್ರತಿನಿಧಿಗಳು ತಮ್ಮ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ರೈತರು ಮತ್ತು ಜನತೆಗೆ ಸಂಕಷ್ಟ ಎದುರಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ನೆರೆ ರಾಜ್ಯಕ್ಕೆ ನೀರು ಬಿಡುವುದಿಲ್ಲ ಎಂದು ಹೇಳುತ್ತಿಲ್ಲ. ಶಾಸಕರು ಕಂಡು ಕಾಣದಂತೆ ಇದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಿಲ್ಲ. ಸಂಸದರು ದೆಹಲಿಗೆ ಹೋಗಿ ಪ್ರಧಾನಮಂತ್ರಿ ಮೇಲೆ ಒತ್ತಡ ಹಾಕಲು ಮುಂದಾಗುತ್ತಿಲ್ಲ, ಇವರ ನಿರ್ಲಕ್ಷ್ಯದಿಂದ ರೈತ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ತಂದೊಡ್ಡಿದ್ದಾರೆ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡುವವರೆಗೂ ಕಾವೇರಿ ಚಳವಳಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಸಮಿತಿಯ ಸುನಂದಾ ಜಯರಾಂ., ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಮಹಾಂತಪ್ಪ, ಜಾನಪದ ಕಲಾವಿದರ ಸಂಘದಗೊರವಾಲೆ ಚಂದ್ರಶೇಖರ್, ದೇವರಾಜ್ ಕೊಪ್ಪ, ಕಾರಸವಾಡಿ ದೇವರಾಜ್, ಸಂತೋಷ್‌ಕುಮಾರ್, ಕೆ.ಎನ್.ಮಹದೇವ, ವೈರಮುಡಿ, ಮುದಗಂದೂರು ಕೃಷ್ಣಯ್ಯ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.