ಮಂಗಳೂರು: ಮಂಗಳೂರಿನಲ್ಲಿ ನಾಲ್ಕು ದಿನಗಳ ಅಂತರದಲ್ಲಿ 19 ಮಂದಿ ಬಾಂಗ್ಲಾದೇಶ ಮೂಲದ ಕಾರ್ಮಿಕರು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ, ಕಾರ್ಮಿಕರನ್ನು ಕಟ್ಟಡ ಕೆಲಸಕ್ಕೆ ಪೂರೈಕೆ ಮಾಡುತ್ತಿರುವ ಏಜಂಟರನ್ನು ಪತ್ತೆ ಮಾಡಿ ಬಂಧಿಸುವಂತೆ ಸೂಚಿಸಿದ್ದಾರೆ. ಅದರಂತೆ ಪಶ್ಚಿಮ ಬಂಗಾಳ ಮೂಲದ ಇಬ್ಬರು ಏಜಂಟರನ್ನು ಉರ್ವ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.ಬಂಗಾಳದ ಪಶ್ಚಿಮ ನಿವಾಸಿಗಳಾದ ದಿಲ್ವಾರ್ ಹುಸೇನ್(29) ಮತ್ತು ಮೊಯ್ದುಲ್ ಇಸ್ಲಾಂ (35) ಬಂಧಿತರು.
ಮಂಗಳೂರಿನ ಪೊಲೀಸರ ತಂಡ ಈಗಾಗಲೇ ಕೊಲ್ಕೊತ್ತಾಕ್ಕೆ ತೆರಳಿದ್ದು, ಅಲ್ಲಿಂದ ಕಾರ್ಮಿಕರನ್ನು ಪೂರೈಕೆ ಮಾಡುತ್ತಿರುವ ವಿಚಾರದಲ್ಲಿ ತನಿಖೆ ನಡೆಸುತ್ತಿದೆ. ಸದ್ಯಕ್ಕೆ ತಿಳಿದುಬಂದ ಮಾಹಿತಿ ಪ್ರಕಾರ, ಮೊಯ್ದಿನ್ ಇಸ್ಲಾಂ, ರಸೂಲ್ ಇಸ್ಲಾಂ ಮತ್ತು ದಿಲ್ವಾರ್ ಹುಸೈನ್ ಎಂಬವರು ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ಕಡೆಯಿಂದ ಮಂಗಳೂರಿಗೆ ಕಾರ್ಮಿಕರನ್ನು ಪೂರೈಸುತ್ತಿದ್ದಾರೆ. ಇವರಲ್ಲಿ ಇಬ್ಬರನ್ನೂ ಬಂಧಿಸಲಾಗಿದ್ದು, ಇನ್ನೂ ಹಲವರು ಈ ಸಂಚಿನಲ್ಲಿ ತೊಡಗಿರುವ ಶಂಕೆಯಲ್ಲಿ ಪೊಲೀಸ್ ತನಿಖೆ ಮುಂದುವರಿದಿದೆ.
ಉರ್ವ ಠಾಣಾ ವ್ಯಾಪ್ತಿಯ ಕುಂಟಿಕಾನ ಮತ್ತು ಕೋಡಿಕಲ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಒಟ್ಟು 11 ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ಪರಿಶೀಲನೆ ವೇಳೆ ಬಾಂಗ್ಲಾ ಮೂಲದವರು ಎನ್ನುವುದು ದೃಢಪಟ್ಟಿತ್ತು. ಈ ಸಂದರ್ಭ ಇಬ್ಬರು ಕಾರ್ಮಿಕರು ಪರಾರಿಯಾಗಿದ್ದಾರೆಂಬ ಮಾಹಿತಿ ಇದ್ದು, ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ. ಕಳೆದ ಬುಧವಾರ ಸುರತ್ಕಲ್ ಬಳಿ ಎಂಟು ಮಂದಿ ಬಾಂಗ್ಲಾ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದರು. ಇದರೊಂದಿಗೆ ಬಂಧಿತ ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಕರ್ನಾಟಕ ಕರಾವಳಿ ಮತ್ತು ಕೇರಳದಲ್ಲಿ ಅತಿ ಹೆಚ್ಚು ಬಾಂಗ್ಲಾ ಮೂಲದವರು ಕಟ್ಟಡ ನಿರ್ಮಾಣ ಇನ್ನಿತರ ಕೆಲಸಕ್ಕೆ ಬಂದು ಇಲ್ಲಿಯೇ ಉಳಿದುಕೊಂಡಿದ್ದಾರೆ. ಸದ್ಯ ಎಸ್‌ಐಆರ್(ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ) ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಶಂಕೆಯ ಮೇರೆಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ.