ಗಜೇಂದ್ರಗಡ: ಮುಂಗಾರು ಮಳೆ ಸಮರ್ಪಕವಾಗಿ ಬಾರದ ಹಿನ್ನೆಲೆ ವರುಣ ದೇವನನ್ನು ಒಲಿಸಿಕೊಳ್ಳಲು ಪಟ್ಟಣದ ಎಪಿಎಂಸಿ ಜಗಜ್ಯೋತಿ ವರ್ತಕರ ಸಂಘ, ಪುಟ್ಟರಾಜ ಕಾರಕೂನರ ಸಂಘ ಹಾಗೂ ಜೈ ಹನುಮಾನ ಹಮಾಲರ ಸಂಘದಿಂದ ಸೋಮವಾರ ಕತ್ತೆ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಲಾಯಿತು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಳೆದೊಂದು ವಾರದಿಂದ ಕತ್ತೆಗಳ ಮದುವೆ ಉಸ್ತುವಾರಿ ವಹಿಸಿದ್ದ ಮುಖಂಡರು ಎಪಿಎಂಸಿ ಸೇರಿ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿನ ಅಂಗಡಿಗಳಲ್ಲಿ ಹಣ ಸಂಗ್ರಹಿಸಿದ್ದರು. ಸೋಮವಾರ ಎಪಿಎಂಸಿಯಲ್ಲಿನ ಸಿದ್ದಿವಿನಾಯಕ ದೇವಸ್ಥಾನ ಮುಂಭಾಗದಲ್ಲಿ ಕತ್ತೆಗಳ ಮದುವೆಗಾಗಿ ಚಪ್ಪರ ಹಾಕಿಸಿ ಸಂಭ್ರಮದ ಮದುವೆಗೆ ಸಿದ್ಧತೆಗಳನ್ನು ಕೈಗೊಂಡಿದ್ದರು. ಮದುವೆಗಾಗಿ ತಂದಿದ್ದ ಕತ್ತೆಗಳಿಗೆ ಸಂಪ್ರದಾಯದಂತೆ ಅರಿಶಿನ ಕುಂಕಮ ಹಚ್ಚಿ, ಹೂವಿನ ಹಾರ, ಬಳೆ ಹಾಕಿ ಮದುಮಗ ಹಾಗೂ ಮದುಮಗಳಂತೆ ಅಲಂಕರಿಸಿದ್ದರು. ಬಳಿಕ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ನೆರವೇರಿಸಿದರು. ಎಪಿಎಂಸಿಯಿಂದ ಆರಂಭವಾದ ಕತ್ತೆಗಳ ಮೆರವಣಿಗೆ ವೇಳೆ ಕೆಲ ಹಿರಿಯರು ಕತ್ತೆಗಳ ಜೋಡಿಗೆ ಅಕ್ಷತೆ ಹಾಕಿ ವರುಣ ದೇವನಿಗೆ ಬೇಡಿಕೊಂಡರೆ, ಇತ್ತ ಕೆಲ ಯುವಕರು ಬ್ಯಾಂಡ್ ಬಾಜಾದ ನಾದಕ್ಕೆ ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿ ಮಳೆಗಾಗಿ ಪ್ರಾರ್ಥಿಸಿದರು.
ಸಂಗ್ರಹಿಸಿದ್ದ ದವಸ ಧಾನ್ಯ ಹಾಗೂ ಹಣದಿಂದ ಕ್ವಿಂಟಲ್ ಸಂಗಟಿ ಹಾಗೂ ಸಾರು ಮಾಡಿಸಿ ವರುಣ ದೇವನಿಗೆ ನೈವೇದ್ಯ ಸಮರ್ಪಿಸಿದ ಬಳಿಕ ಸಾಮೂಹಿಕವಾಗಿ ಭೋಜನ ಸವಿದರು.ಈ ವೇಳೆ ಅಮರೇಶ ಬಳಿಗೇರ, ಶಿವಣ್ಣ ಸಂಗನಾಳ, ಪಿ.ಎಸ್. ಕಡ್ಡಿ, ಬಸವರಾಜ ವಾಲಿ, ಪವಾಡೆಪ್ಪ ಮ್ಯಾಗೇರಿ, ಚಂದ್ರಶೇಖರಪ್ಪ ಚೋಳಿನ, ಜಗದೀಶ ಕಲ್ಗುಡಿ, ಬಸವರಾಜ ಬೇಲೇರಿ, ಪರಶುರಾಮ ಕಲಾಲ, ಯಶವಂತ ಪವಾರ, ಬಸವರಾಜ ಸುರ್ಕೋಡ, ವೀರೇಶ ಸಂಗಮದ, ಸಿದ್ದಪ್ಪ ಚಲವಾದಿ, ರವಿ ಪವಾರ, ರಾಚಪ್ಪ ಬುಳ್ಳಾ, ನರಸಣ್ಣ ಕುಷ್ಟಗಿ, ವಿಜಯ ಬೂದಿಹಾಳ, ಕಳಕಪ್ಪ ಸಂಗನಾಳ, ಮುತ್ತಣ್ಣ ಸಂಗನಗೌಡ್ರ, ಸುರೇಶ ಕಾರಬಾರಿ, ಬಸವರಾಜ ಕುಷ್ಟಗಿ, ಕೃಷ್ಣಪ್ಪ ಘೋರ್ಪಡೆ, ಶೇಖಪ್ಪ ಕಲಾಲ, ಕಳಕಪ್ಪ ಕೊಂಡಿ, ಕಳಕಪ್ಪ ಹಿರೇಕೊಪ್ಪ, ರೇಣಪ್ಪ ನಾಯ್ಕರ, ಸುರೇಶ ವದೆಗೋಳ ಸೇರಿ ಇತರರು ಇದ್ದರು.