ಬಾಡಿದ ಬೆಳೆಗೆ ಚರಂಡಿ ನೀರು ಹರಿಸಿದ ರೈತ!

KannadaprabhaNewsNetwork |  
Published : Jul 15, 2026, 02:45 AM IST
ಮಳೆ ಕೊರತೆಯಿಂದಾಗಿ ಹೆಸರು ಬೆಳೆ ಹಳದಿ ರೋಗಕ್ಕೆ ತುತ್ತಾಗಿರುವುದು. | Kannada Prabha

ಸಾರಾಂಶ

ತೇವಾಂಶದ ಕೊರತೆಯಿಂದ ಬೆಳೆಗಳು ಹಳದಿ ರೋಗ ಮತ್ತು ಕೀಟಬಾಧೆಯೂ ಹೆಚ್ಚಾಗುತ್ತಿದೆ. ಇದರ ನಡುವೆ ಬೆಳೆ ಉಳಿಸಿಕೊಳ್ಳಲು ರೈತನೋರ್ವ ಚರಂಡಿ ನೀರನ್ನೇ ಹೊಲಕ್ಕೆ ಹರಿಸಿದ್ದಾನೆ.

ರಫೀಕ ಕಲೇಗಾರ

ಅಣ್ಣಿಗೇರಿ:

ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ತಾಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತಿದ ಹೆಸರು, ಉದ್ದು ಹಾಗೂ ಹತ್ತಿ ಬೆಳೆ ಒಣಗುತ್ತಿದ್ದು, ತೇವಾಂಶದ ಕೊರತೆಯಿಂದ ಹಳದಿ ರೋಗ ಮತ್ತು ಕೀಟಬಾಧೆಯೂ ಹೆಚ್ಚಾಗುತ್ತಿದೆ. ಇದರ ನಡುವೆ ಬೆಳೆ ಉಳಿಸಿಕೊಳ್ಳಲು ರೈತನೋರ್ವ ಚರಂಡಿ ನೀರನ್ನೇ ಹೊಲಕ್ಕೆ ಹರಿಸಿದ್ದಾನೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಒಟ್ಟು 25,824 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು ಇದರಲ್ಲಿ 2,500 ಹೆಕ್ಟೇರ್‌ನಲ್ಲಿ ಹೆಸರು, 2,800 ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆ ಮಾಡಲಾಗಿದೆ. ಮಳೆ ಕೊರತೆಯಿಂದ ಹೊಲದಲ್ಲಿ ತೇವಾಂಶ ಕಡಿಮೆಯಾಗಿದ್ದು, ಹೆಸರು ಮತ್ತು ಉದ್ದು ಬೆಳೆಗಳ ಎಲೆ ಹಳದಿಯಾಗಿ, ಚುಕ್ಕೆ ಕಾಣಿಸಿಕೊಳ್ಳುತ್ತಿವೆ. ಹಲವೆಡೆ ಕಾಂಡ ಒಣಗುವ ಲಕ್ಷಣ ಗೋಚರಿಸುತ್ತಿವೆ. ಬೆಳೆ ಬೆಳೆಯಬೇಕಾದ ಹಂತದಲ್ಲೇ ಕಾಯಿ ಕಟ್ಟದೆ ಒಣಗುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.

ಚರಂಡಿ ನೀರಿನ ಮೊರೆ:

ಅಣ್ಣಿಗೇರಿ ತಾಲೂಕಿನ ಕೋಳಿವಾಡ ರಸ್ತೆಯ ಸಮೀಪದ ಹೊಲದಲ್ಲಿ ಮೂರು ಎಕರೆ ಲಾವಣಿ ಭೂಮಿಯಲ್ಲಿ ಕೃಷಿ ಮಾಡಿರುವ ರೈತ ಅಬ್ದುಲಸಾಬ್ ಗಾಢಗೋಳಿ ಅವರು ಬೆಳೆ ಉಳಿಸಿಕೊಳ್ಳಲು ಹೊಲದ ಪಕ್ಕದಲ್ಲಿರುವ ಚರಂಡಿ ನೀರನ್ನು ಪೈಪ್ ಮೂಲಕ ಹರಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಕೇಳಿದರೆ "ಇದಕ್ಕಿಂತ ಬೇರೆ ದಾರಿ ಕಾಣುತ್ತಿಲ್ಲ " ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಎರಡ್ಮೂರು ಎಕರೆ ಲಾವಣಿ ಭೂಮಿಯಲ್ಲಿ ಕೃಷಿ ಮಾಡಿರುವ ಸಣ್ಣ ರೈತರು ಈಗಾಗಲೇ ಬೀಜ, ರಸಗೊಬ್ಬರ, ಕೂಲಿ ಸೇರಿದಂತೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ಮಳೆ ಕೈಕೊಟ್ಟಿರುವುದರಿಂದ ಬೆಳೆ ಕೈಗೆ ಸಿಗುವ ಭರವಸೆಯೇ ಕುಸಿದಿದೆ. ಸಾಲದ ಹೊರೆ, ಬೆಳೆ ನಷ್ಟ ಹಾಗೂ ಮುಂದಿನ ಜೀವನೋಪಾಯದ ಚಿಂತೆ ರೈತರನ್ನು ಕಾಡುತ್ತಿದೆ.

ಕೃಷಿ ಇಲಾಖೆ ಸಲಹೆ:

ಮಳೆ ಕೊರತೆಯ ಸಂದರ್ಭದಲ್ಲೂ ಕೀಟ ಹಾಗೂ ರೋಗ ನಿಯಂತ್ರಣಕ್ಕೆ ಸೂಕ್ತ ಔಷಧ ಲಭ್ಯವಿದ್ದು ರೈತರು ಕೃಷಿ ಇಲಾಖೆಯನ್ನು ಸಂಪರ್ಕಿಸಿ ತಜ್ಞರ ಸಲಹೆಯಂತೆ ಔಷಧ ಸಿಂಪಡಿಸಬೇಕು. ತುಕ್ಕು ಮತ್ತು ಇತರೆ ರೋಗಗಳ ನಿಯಂತ್ರಣಕ್ಕೆ ಶಿಫಾರಸು ಮಾಡಿರುವ ಶಿಲೀಂಧ್ರನಾಶಕ ಹಾಗೂ ಬೇವಿನ ಎಣ್ಣೆ ಬಳಸುವುದರಿಂದ ರೋಗದ ತೀವ್ರತೆ ಕಡಿಮೆ ಮಾಡಬಹುದು ಎಂದು ತಾಲೂಕು ಕೃಷಿ ಇಲಾಖೆ ಅಧಿಕಾರಿ ರವೀಂದ್ರಗೌಡ ಪಾಟೀಲ ತಿಳಿಸಿದರು. ನೀರಿನ ತೇವಾಂಶವೇ ಇಲ್ಲದ ಪರಿಸ್ಥಿತಿಯಲ್ಲಿ ಬೆಳೆ ಉಳಿಯುವುದು ಕಷ್ಟ. ಸರ್ಕಾರ ಮತ್ತು ಸ್ಥಳೀಯ ಶಾಸಕರು ತಕ್ಷಣ ಮೋಡ ಬಿತ್ತನೆ ಕಾರ್ಯ ಆರಂಭಿಸಿ ಈ ಭಾಗದ ರೈತರ ನೆರವಿಗೆ ಬರಬೇಕು.

ಭಗವಂತಪ್ಪ ಪುಟ್ಟಣ್ಣವರ, ಸ್ಥಳೀಯ ರೈತ ಮುಖಂಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ಅರ್ಥಧಾರಿಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ
ಯಕ್ಷಗಾನ ಕಲಾರಂಗದ 51ನೇ ವಾರ್ಷಿಕ ಮಹಾಸಭೆ