)
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿವಿಯು ಗುರುವಾರ ನಡೆಸಿದ ಪದವಿ ಪರೀಕ್ಷೆಯಲ್ಲಿ 5ನೇ ಸೆಮಿಸ್ಟರ್‌ನ ಅಡ್ವಾನ್ಸ್‌ಡ್ ಅಕೌಂಟಿಂಗ್ ವಿಷಯದ ಪ್ರಶ್ನೆ ಪತ್ರಿಕೆ ಪರೀಕ್ಷೆ ಸಮಯಕ್ಕೂ ಮೊದಲೇ ಸೋರಿಕೆಯಾಗಿದೆ. ಇದು ಈ ಅಕ್ರಮ ತಡೆಗಟ್ಟುವಲ್ಲಿ ವಿವಿ ಕುಲಪತಿ, ರಿಜಿಸ್ಟ್ರರ್ ಹಾಗೂ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ವಿಫಲರಾಗಿದ್ದಾರೆ ಎಂದು ಆರೋಪಿಸಿ ಎನ್‌ಎಸ್‌ಯುಐನ ಬೆಂಗಳೂರು ಜಿಲ್ಲಾ ಅಧ್ಯಕ್ಷ ವಿ.ಲಕ್ಷ್ಯರಾಜ್ ದೂರು ದಾಖಲಿಸಿದ್ದಾರೆ.
ಮತ್ತೊಂದೆಡೆ ಎನ್‌ಎಸ್‌ಯುಐನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂಜಯ್ ಮಾತನಾಡಿ, ಕುಲಪತಿ ಮತ್ತು ಕುಲಸಚಿವರ ನಿರ್ಲಕ್ಷ್ಯಧೋರಣೆಯಿಂದ ಈ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕಲ್ಪಿಸಬೇಕು. ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.ವಿವಿಯಿಂದ ತನಿಖೆಗೆ ಸಮಿತಿ ರಚನೆ
ಇನ್ನು, ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ವಿವಿಯ ಕುಲಪತಿ ಪ್ರೊ.ರಮೇಶ್ ಬಿ. ನಿರಾಕರಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಯಾರೋ ಅನಗತ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೇಪರ್‌ಒಂದನ್ನು ಹರಿಬಿಟ್ಟು ವಿವಾದ ಸೃಷ್ಟಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಪೇಪರ್‌ಗೂ, ನೈಜ ಪ್ರಶ್ನೆ ಪತ್ರಿಕೆಗೂ ತಾಳೆ ಆಗುತ್ತಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೂ, ಆರೋಪ ಕೇಳಿಬಂದಿರುವುದರಿಂದ ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡಲು ವಿವಿಯಿಂದಲೂ ಒಂದು ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.