ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಟ ನಮನ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಉದ್ಘಾಟಿಸಿದರು.ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಮಾತನಾಡಿ, ಇಡೀ ಜಗತ್ತಿನಲ್ಲೇ ಕರ್ನಾಟಕ ವಿಶೇಷ ಸ್ಥಾನ ಮಾನ ಪಡೆದ ಭಾರತದ ರಾಜ್ಯವಾಗಿದ್ದು, ವಿಶ್ವದ ಜನರು ನಮ್ಮನ್ನು ಗುರುತಿಸಿಸುವುದು ಸಿಲಿಕಾನ್ ಸಿಟಿ ಬೆಂಗಳೂರಿನಿಂದ. ವಿಶ್ವದ ಭೂಪಟದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನ ಮಾನವಿದೆ. ನಾಡಪ್ರಭು ಕೆಂಪೇಗೌಡ ಎಂದರೇ ನಮಗೆ ನೆನಪಗುವುದು ಬೆಂಗಳೂರು. ಅವರ ಪರಿಶ್ರಮದ ಪ್ರತಿಫಲ ಮತ್ತು ದೂರದೃಷ್ಟಿಯಿಂದಾಗಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿಯಾಗಿ ನಿರ್ಮಾಣವಾಗಿದೆ ಎಂದರು.ವಿಜಯನಗರದ ಅರಸರ ಆಳ್ವಿಕೆ ನಂತರ ಬೆಂಗಳೂರಿನ ಆಡಳಿತವನ್ನು ಕೆಂಪೇಗೌಡರು ಮುಂದುವರಿಸುತ್ತಾರೆ. ಅನೇಕ ರಾಜ್ಯಗಳಿಗೆ ಉತ್ತಮ ಸಂಪರ್ಕ ವ್ಯವಸ್ಥೆ, ಮೂಲ ಸೌಲಭ್ಯಗಳು ಇರುವುದರಿಂದ ಇಲ್ಲಿ ನವನಗರ ನಿರ್ಮಿಸುವ ಕನಸು ಕಂಡು ಸುಭದ್ರವಾದ ನಾಡು ನಿರ್ಮಾಣ ಮಾಡಿ, ಯಾವುದೇ ಜಾತಿ ಧರ್ಮ ಎನ್ನದೇ ಕೌಶಲ್ಯಾಭಿವೃದ್ದಿಗೆ ಅವಕಾಶ ಕಲ್ಪಿಸಿದರು. ಕೃಷಿಯ ಅಭಿವೃದ್ಧಿಗೆ ನೀರಿನ ಕೊರತೆ ಆಗದಂತೆ ಕೆರಕಟ್ಟಿ, ಕಾಲುವೆ ನಿರ್ಮಾಣ ಮಾಡಿದರು, ಅನೇಕ ದೇವಾಲಯ, ಪೇಟೆಗಳನ್ನು ನಿರ್ಮಾಣ ಮಾಡಿ ಧರ್ಮಪ್ರಭು ಎಂಬ ಹೆಸರನ್ನು ಪಡೆದರು ಎಂದರು.
ಕೆಂಪೇಗೌಡ ಜಯಂತಿ ಪ್ರಯುಕ್ತ ವಿವಿಧ ಸ್ಪರ್ಧೆ ಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಲತಾ ನಾಯಕ ಇದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ವನಿತಾ ಶೆಟ್ ನಿರೂಪಿಸಿ, ವಂದಿಸಿದರು.