ಬಾಂಗ್ಲಾ ನುಸುಳುಕೋರರು: ರೈಲು ಪ್ರಯಾಣಿಕರ ಹೆಚ್ಚಿದ ತಪಾಸಣೆ

KannadaprabhaNewsNetwork |  
Published : May 19, 2026, 02:15 AM IST
ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿದ ಪೊಲೀಸರು. | Kannada Prabha

ಸಾರಾಂಶ

ಪಶ್ಚಿಮ ಬಂಗಾಳದಲ್ಲಿ ಸರಿಸುಮಾರು ೨೭ ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌ ಆಗಿದೆ. ಅವರೆಲ್ಲರೂ ಬಾಂಗ್ಲಾದ ಅಕ್ರಮ ವಾಸಿಗಳು ಎಂಬುದು ವದಂತಿ. ಇದೀಗ ಅಲ್ಲಿ ವಾಸಿಸಲು ಅವರಿಗೆ ಅವಕಾಶ ಸಿಗುತ್ತಿಲ್ಲ. ಅತ್ತ ಬಾಂಗ್ಲಾಕ್ಕೂ ಹೋಗುತ್ತಿಲ್ಲ. ಬದಲಿಗೆ ದೇಶದ ವಿವಿಧ ರಾಜ್ಯಗಳಿಗೆ ತೆರಳುತ್ತಿದ್ದಾರೆ ಎಂಬುದು ಹಿಂದೂಪರ ಸಂಘಟನೆಗಳ ಆರೋಪ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಪಶ್ಚಿಮ ಬಂಗಾಳ ಚುನಾವಣೆ ಮುಗಿದು ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಬಾಂಗ್ಲಾ ನುಸುಳುಕೋರರು ಅನ್ಯ ರಾಜ್ಯಗಳಿಗೆ ವಲಸೆ ಬರುತ್ತಿದ್ದಾರೆ ಎಂಬ ಗುಲ್ಲು ಹಬ್ಬಿದೆ. ಅದಕ್ಕೆ ತಕ್ಕಂತೆ ಇದೀಗ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆರ್‌ಪಿಎಫ್‌, ರೈಲ್ವೆ ಪೊಲೀಸರು, ಸ್ಥಳೀಯ ಪೊಲೀಸರು ಜಂಟಿಯಾಗಿ ಎರಡು ದಿನದಿಂದ ತೀವ್ರ ತಪಾಸಣೆ ನಡೆಯುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸರಿಸುಮಾರು ೨೭ ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌ ಆಗಿದೆ. ಅವರೆಲ್ಲರೂ ಬಾಂಗ್ಲಾದ ಅಕ್ರಮ ವಾಸಿಗಳು ಎಂಬುದು ವದಂತಿ. ಇದೀಗ ಅಲ್ಲಿ ವಾಸಿಸಲು ಅವರಿಗೆ ಅವಕಾಶ ಸಿಗುತ್ತಿಲ್ಲ. ಅತ್ತ ಬಾಂಗ್ಲಾಕ್ಕೂ ಹೋಗುತ್ತಿಲ್ಲ. ಬದಲಿಗೆ ದೇಶದ ವಿವಿಧ ರಾಜ್ಯಗಳಿಗೆ ತೆರಳುತ್ತಿದ್ದಾರೆ ಎಂಬುದು ಹಿಂದೂಪರ ಸಂಘಟನೆಗಳ ಆರೋಪ.

ಈ ನಡುವೆ ಕಳೆದ ಎರಡ್ಮೂರು ದಿನದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನ್ಯ ರಾಜ್ಯಗಳಿಂದ ಆಗಮಿಸುವ ರೈಲುಗಳಲ್ಲಿನ ಪ್ರಯಾಣಿಕರ ತಪಾಸಣೆ ನಡೆಯುತ್ತಿದೆ. ವಾರಕ್ಕೆ ನಾಲ್ಕು ದಿನ ಸಂಚರಿಸುವ ಶಾಲಿಮಾರ್‌- ವಾಸ್ಕೋ ಡಿ ಗಾಮಾ, ಅಮರಾವತಿ ಎಕ್ಸ್‌ಪ್ರೆಸ್‌ ರೈಲನ್ನು ತಪಾಸಣೆ ಮಾಡಲಾಗುತ್ತಿದೆ. ಏಳೆಂಟು ಜನರ ಗುಂಪು ಪ್ರಯಾಣಿಸುತ್ತಿದ್ದರೆ, ಆ ಪ್ರಯಾಣಿಕರ ಆಧಾರ್‌ ಕಾರ್ಡ್‌, ಪ್ಯಾನ್‌, ರೈಲಿನ ಟಿಕೆಟ್‌ ಸೇರಿದಂತೆ ವಿವಿಧ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ.

ಶನಿವಾರ ಬರೋಬ್ಬರಿ 11 ಪ್ರಯಾಣಿಕರು ಗುಂಪು ಶಾಲಿಮಾರ್‌ ಎಕ್ಸ್‌ಪ್ರೆಸ್‌ನಲ್ಲಿ ಪತ್ತೆಯಾಗಿತ್ತು. ಹೀಗೆ ಬಂದವರು ಬಾಗಲಕೋಟೆ, ವಿಜಯಪುರ ಸೇರಿದಂತೆ ವಿವಿಧೆಡೆ ಕೆಲಸಕ್ಕಿರುವ ಕಾರ್ಮಿಕರಂತೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮತ ಚಲಾಯಿಸಿ ಇಲ್ಲಿಗೆ ಬಂದವರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್‌ಪುಟ್‌ ಇದ್ದಿದ್ದರಿಂದ ತಪಾಸಣೆ:

ಇಂಟಲಿಜೆನ್ಸ್‌ ಮೂಲಕ ಮಾಹಿತಿ ಬಂದಿದ್ದು, ಹೀಗಾಗಿ ತಪಾಸಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಳೀಯ ಪೊಲೀಸರು, ರೈಲ್ವೆ ಪೊಲೀಸರ ಮೂಲಕ ತಪಾಸಣೆ ನಡೆಸಲಾಗುತ್ತಿದೆ. 2 ದಿನದಿಂದ ತಪಾಸಣೆ ನಡೆಯುತ್ತಿದೆ. ಈ ವರೆಗೂ ಯಾರೂ ಬಾಂಗ್ಲಾ ದೇಶಿಯರು ಪತ್ತೆಯಾಗಿಲ್ಲ. ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಬಂದಿದ್ದ ಕಾರ್ಮಿಕರು ಪತ್ತೆಯಾಗಿದ್ದಾರೆ. ಪರಿಶೀಲನೆ ನಡೆಸಿ ಬಿಡಲಾಗಿದೆ ಎಂದು ಆರ್‌ಪಿಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂ ಸಂಘಟನೆ ಆರೋಪ:

ಪೊಲೀಸರು ಕಾಟಾಚಾರದ ತಪಾಸಣೆ ನಡೆಸುತ್ತಿದ್ದಾರೆ. ಅನ್ಯ ಹೆಸರುಗಳಿಂದ ಇಲ್ಲಿಗೆ ಬರುತ್ತಾರೆ. ಆಧಾರ್‌ ಕಾರ್ಡ್‌, ಚುನಾವಣೆ ಮತದಾರರ ಚೀಟಿ ನಕಲಿ ಮಾಡುವುದು ಎಷ್ಟೊತ್ತು. ಆದಕಾರಣ ಅವರನ್ನೆಲ್ಲ ಹಿಡಿದು ಕೇಸ್‌ ದಾಖಲಿಸಬೇಕು. ಆ ನಂತರ ಅವರ ಆಧಾರ್‌ ಕಾರ್ಡ್‌ನಲ್ಲಿರುವ ವಿಳಾಸಕ್ಕೆ ಸಂಪರ್ಕಿಸಿ ಅಲ್ಲಿನ ನಿವಾಸಿಗಳೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ತದನಂತರವಷ್ಟೇ ಬಿಡುಗಡೆ ಮಾಡಬೇಕು. ಆದರೆ ಆ ಕೆಲಸವಾಗುತ್ತಿಲ್ಲ. ಆಧಾರ ಕಾರ್ಡ್‌ ಪರಿಶೀಲಿಸಿ ಬಿಡಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂಬುದು ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳ ಆಗ್ರಹ.

ಹಿಂದೆ ಪತ್ತೆಯಾಗಿದ್ದರು ?

ಈ ನಡುವೆ ಬಾಂಗ್ಲಾ ನುಸುಳುಕೋರರು ಹುಬ್ಬಳ್ಳಿಯಲ್ಲಿ ಈ ಹಿಂದೆ ಪತ್ತೆಯಾಗಿದ್ದರು. ಜತೆಗೆ ಇಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದುಂಟು. ೨೦೧೯ರಲ್ಲಿ ನಡೆದಿದ್ದ ಉದ್ಯಮಿ ವೆಂಕಣ್ಣ ಬಣವಿ ಹತ್ಯೆ, ಧಾರವಾಡದಲ್ಲಿ ನಡೆದಿದ್ದ ದರೋಡೆ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಬಾಂಗ್ಲಾ ದೇಶಿಯರು ಭಾಗಿಯಾಗಿದ್ದರು. ನುಸುಳುಕೋರರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಬರುವುದು ಸಲೀಸು. ವಿವಿಧ ರಾಜ್ಯಗಳಿಂದ ನೇರ ಸಂಪರ್ಕ ಹೊಂದಿರುವ ರೈಲು ಇವರಿಗೆ ರಹದಾರಿಯಾಗಿದೆ.ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಎರಡು ದಿನಗಳಿಂದ ಆರ್‌ಪಿಎಫ್‌, ರೈಲ್ವೆ ಪೊಲೀಸ್‌, ಸ್ಥಳೀಯ ಪೊಲೀಸರ ನೆರವಿನೊಂದಿಗೆ ತಪಾಸಣೆ ನಡೆಸಲಾಗುತ್ತಿದೆ. ಬಾಂಗ್ಲಾ ದೇಶಿಯರು ಪತ್ತೆಯಾಗಿಲ್ಲ. ಇಂಟಲಿಜೆನ್ಸಿ ಮಾಹಿತಿ ಮೇರೆಗೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಇದು ಸಾಮಾನ್ಯ.

ಪ್ರವೀಣ ಎಸ್ಪಿ, ಸಿನಿಯರ್‌ ಪಿಆರ್‌ಒ, ಡಿಆರ್‌ಎಂ, ಹುಬ್ಬಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆರ್ಯವೈಶ್ಯ ಯುವಕರು ಮೂಲ ಉದ್ಯೋಗಕ್ಕೆ ಬರಲಿ: ಆರ್‌.ಪಿ. ರವಿಶಂಕರ
ನರೇಗಾ ಬದಲಾವಣೆಗೆ ಕೊಪ್ಪಳದಲ್ಲಿ ವಿರೋಧ, ಪ್ರತಿಭಟನೆ