ಮುಂಡರಗಿ: ಮಹಾತ್ಮ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದ ನೆಪದಲ್ಲಿ ಬಂಜಾರ ಸಮುದಾಯ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಸಮಾಜದ ಅಭಿವೃದ್ಧಿ ಸಂಘಟನೆಗೆ ಪೂರಕವಾದ ಕೆಲಸಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಸಮಾಜ ಇನ್ನಷ್ಟು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ರೋಣ ಪುರಸಭೆ ಉಪಾಧ್ಯಕ್ಷ ಮಿಥುನಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ನಡೆದ ಸಂತ ಶ್ರೀಸೇವಾಲಾಲರ ೨೮೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸುವ ಬಂಜಾರ ಸಮಾಜ ತಮ್ಮ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬೇಕು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವುದರ ಜತೆಗೆ ಸರಕಾರ ಬಂಜಾರ ಮತ್ತು ಅನೇಕ ಹಿಂದುಳಿದ ಸಮುದಾಯಗಳಿಗೆ ನೀಡಿದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಜಿ.ಎಸ್. ಪಾಟೀಲ ಮತ್ತು ಚಂದ್ರು ಲಮಾಣಿ ಅವರು ಸಮಾಜದವರ ಜತೆಗೆ ಸದಾ ಇರುತ್ತಾರೆ. ಇದಕ್ಕೆ ಬೇಕಾಗುವ ಅನುಕೂಲತೆ ಒದಗಿಸಲಾಗುವುದು ಎಂದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಸಂತ ಸೇವಾಲಾಲರು ತಮ್ಮ ಮಹಿಮೆಗಳ ಮೂಲಕ ಸಮಾಜಕ್ಕೆ ಒಳ್ಳೆಯದನ್ನು ಮಾಡಿದ್ದಾರೆ ಎಂದರು.ಕಾಂಗ್ರೆಸ್ ಮುಖಂಡರಾದ ಸುಜಾತಾ ದೊಡ್ಡಮನಿ ಮಾತನಾಡಿ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸೇವಾಲಾಲರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಬಂಜಾರ ಸಮಾಜದವರು ತಮ್ಮ ಮಕ್ಳಳನ್ನು ಶಿಕ್ಷಣವಂತರನ್ನಾಗಿ ಮಾಡಿರಿ, ತಮ್ಮ ಅಧಿಕಾರ ಅವಧಿಯಲ್ಲಿ ಮುಂಡರಗಿಯಲ್ಲಿ ಸೇವಾಲಾಲ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ತಿಳಿಸಿದ ಅವರು, ಮುರಡಿ ತಾಂಡಾ, ಬೀಡನಾಳ ತಾಂಡಾಗಳಲ್ಲಿ ಬಂಜಾರ ಸಮುದಾಯದವರ ಮಕ್ಕಳ ಶೈಕ್ಷಣಿಕ ಸೌಲಭ್ಯಕ್ಕಾಗಿ ಹೆಚ್ಚುವರಿ ವಸತಿ ನಿಲಯಗಳ ಪ್ರಸ್ತಾವನೆಯನ್ನು ನಾವು ಹಾಗೂ ಶಾಸಕ ಜಿ.ಎಸ್. ಪಾಟೀಲರು ಸೇರಿ ಕಳಿಸಲಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಜ. ಡಾ. ಅನ್ನದಾನೀಶ್ವರ ಸ್ವಾಮಿಗಳು ಮಾತನಾಡಿ, ಮಹಾತ್ಮರು ಎಂದಿಗೂ ಪವಾಡ ಮಾಡುವುದಿಲ್ಲ, ಅವರ ಸಿದ್ದಿ ತಪಸ್ಸು ಶಕ್ತಿಯಿಂದ ಘಟನೆಗಳು ಸಹಜವಾಗಿ ನಡೆಯುತ್ತವೆ, ಸಮಾಜದಲ್ಲಿ ಹೆತ್ತವರ, ಗುರುಗಳ ಸಮಾಜದ ಋಣ ತೀರಿಸುವದು ಪ್ರತಿಯೊಬ್ಬರ ಕರ್ತವ್ಯ. ಆ ಹಿನ್ನೆಲೆಯಲ್ಲಿ ಬಂಜಾರ ಸಮುದಾಯದವರು ಸಂತ ಸೇವಾಲಾಲರ ಸ್ಮರಿಸುವ ಮೂಲಕ ಮಾದರಿಯಾಗಿದ್ದಾರೆ. ಬಂಜಾರ ಸಮಾಜ ಈಗಲೂ ತಮ್ಮ ಕಲೆ ಸಂಸ್ಕೃತಿ ಉಳಿಸಿಕೊಂಡು ಬಂದಿದ್ದಾರೆ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಸುರೇಶ ಮಾಳಗಿಮನಿ ಮಾತನಾಡಿದರು. ಡಾ. ಮಿಟ್ಯಾ ನಾಯ್ಕ್ ಅವರಿಂದ ಉಪನ್ಯಾಸ ಜರುಗಿತು.ಕೆ.ವಿ. ಹಂಚಿನಾಳ, ಹೇಮಗಿರೀಶ ಹಾವಿನಾಳ, ಡಿ.ಡಿ. ಮೋರನಾಳ, ಲಿಂಗರಾಜಗೌಡ ಪಾಟೀಲ, ಶಿವಪ್ಪ ಚಿಕ್ಕಣ್ಣವರ, ಎಸ್.ಡಿ. ಮಕಾನದಾರ, ರಾಮಚಂದ್ರ ಕಲಾಲ, ಸಿಪಿಐ ಮಂಜುನಾಥ ಕುಸುಗಲ್, ಡಾ. ವೆಂಕಟೇಶ ನಾಯ್ಕ್, ರಾಜು ದಾವಣಗೆರೆ, ಚಂದ್ರಾ ನಾಯ್ಕ್, ಸುಭಾಷ ಗುಡಿಮನಿ, ದೇವಪ್ಪ ನಾಯಕ, ಉಮೇಶ ದೇವರಮನಿ, ಜಿ.ಡಿ. ಲಮಾಣಿ, ರಾಮವ್ವ ಗುಡಿಮನಿ ಸೇರಿದಂತೆ ತಾಲೂಕಿನ ಲಂಬಾಣಿ ಸಮುದಾಯದವರು ಇದ್ದರು. ಬಂಜಾರ ಸಮುದಾಯದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಿ.ಪಿ. ಬಮ್ಮನಪಾಡ ಸ್ವಾಗತಿಸಿದರು. ಎಸ್.ಡಿ.ರಾಠೋಡ, ಎಚ್.ಜೆ. ಪವಾರ ನಿರೂಪಿಸಿದರು.