ಬ್ಯಾಂಕ್‌ ಡಿಡಿ: ಮಾರ್ಗಸೂಚಿ ರಚಿಸಲು ಆರ್‌ಬಿಐಗೆ ಹೈಕೋರ್ಟ್‌ ಸೂಚನೆ

KannadaprabhaNewsNetwork |  
Published : Dec 06, 2024, 08:57 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಬ್ಯಾಂಕ್‌ಗಳಲ್ಲಿ ಪಡೆಯುವ ಡಿಡಿ ಹಣ ನಗದೀಕರಣ ಆಗದಿದ್ದಾಗ ಗ್ರಾಹಕನ ಖಾತೆಗೆ ಸ್ವಯಂ ಚಾಲಿವಾಗಿ ಹಣ ವರ್ಗ ಮಾಡುವ ಬಗ್ಗೆ ಮಾರ್ಗಸೂಚಿ ರಚನೆ ಮಾಡಿ ಎಂದು ಹೈಕೋರ್ಟ್‌ ಆರ್‌ಬಿಐಗೆ ನಿರ್ದೇಶನ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಗದಿತ ಅವಧಿಯಲ್ಲಿ ಡಿಮಾಂಡ್‌ ಡ್ರಾಫ್ಟ್‌ (ಡಿಡಿ) ಬ್ಯಾಂಕ್‌ಗೆ ಸಲ್ಲಿಸದೇ ಇದ್ದಾಗ ಆ ಡಿಡಿ ನೀಡಿದ ಗ್ರಾಹಕರ ಖಾತೆಗೆ ಸ್ವಯಂಚಾಲಿತವಾಗಿ ಹಣ ಮರು ಪಾವತಿಯಾಗುವಂತೆ ಮಾರ್ಗಸೂಚಿ ರೂಪಿಸುವಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಹೈಕೋರ್ಟ್‌ ನಿರ್ದೇಶಿಸಿದೆ.

ಈ ಕುರಿತು ದೊಡ್ಡಬಳ್ಳಾಪುರದ ಸ್ಪಿನ್ನಿಂಗ್‌ ಮಿಲ್ಸ್‌ ಕಂಪನಿ ನಿರ್ದೇಶಕ ಎ.ಅಭಿಷೇಕ್‌ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಪೀಠ ಈ ಆದೇಶ ಮಾಡಿದೆ.

ಡಿಡಿ ಪಡೆದಿರುವವರು ನಿರ್ದಿಷ್ಟ ಅವಧಿಯಲ್ಲಿ ಅದನ್ನು ಬ್ಯಾಂಕ್‌ಗೆ ಸಲ್ಲಿಸದೆ ಹೋದರೆ ಅಂಥ ಸಂದರ್ಭಗಳಲ್ಲಿ ಡಿಡಿಯ ಸ್ಥಿತಿ ಏನಾಗಲಿದೆ ಎಂಬ ಬಗ್ಗೆ ಆರ್‌ಬಿಐ ಮಾರ್ಗಸೂಚಿ ಹೊರಡಿಸಬೇಕು. ಒಂದು ವೇಳೆ ಡಿಡಿ ಪಡೆದವರು ಅದನ್ನು ಬ್ಯಾಂಕ್‌ಗೆ ಸಲ್ಲಿಸದೆ ಹೋದರೆ ನಿರ್ದಿಷ್ಟ ಅವಧಿ ಮುಗಿದ ಬಳಿಕ ಆ ಡಿಡಿ ಮೊತ್ತ ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ದೊಡ್ಡಬಳ್ಳಾಪುರದಲ್ಲಿ ಸ್ಪಿನ್ನಿಂಗ್‌ ಮಿಲ್‌ ಹೊಂದಿದ್ದ ಅರ್ಜಿದಾರರು ಐಸಿಐಸಿಐ ಬ್ಯಾಂಕ್‌ ನಲ್ಲಿ ಚಾಲ್ತಿ ಖಾತೆ ಹೊಂದಿದ್ದರು. ನಿವೇಶನ ಖರೀದಿ ಸಂಬಂಧ 2010ರಲ್ಲಿ 50 ಲಕ್ಷ ರು.ಗಳಿಗೆ ಪಿ.ಬಚ್ಚೇಗೌಡ ಎಂಬುವರ ಹೆಸರಿಗೆ ಡಿಡಿ ಪಡೆದಿದ್ದರು. ಆದರೆ ಅರ್ಜಿದಾರರು ಮತ್ತು ಬಚ್ಚೇಗೌಡ ನಡುವಿನ ಒಪ್ಪಂದ ಮುರಿದು ಬಿದ್ದು, ಮಾರಾಟ ಕ್ರಯ ರದ್ದಾಗಿತ್ತು. ಆ ಕಾರಣದಿಂದ ಕಂಪನಿ 2018ರಲ್ಲಿ ಮೂಲ ಡಿಡಿ ಸಲ್ಲಿಸಿ, ಆ ಡಿಡಿಯನ್ನು ರದ್ದುಗೊಳಿಸಿ ಆ ಮೊತ್ತವನ್ನು ತಮ್ಮ ಖಾತೆಗೆ ಜಮೆ ಮಾಡಬೇಕು ಎಂದು ಕೋರಿದ್ದರು.

ಆದರೆ ಬ್ಯಾಂಕ್‌ ಅದಕ್ಕೆ ಒಪ್ಪಲಿಲ್ಲ. ಇದರಿಂದ ಅರ್ಜಿದಾರರು ಒಂಬುಡ್ಸ್‌ಮನ್‌ ಮೊರೆ ಹೋಗಿದ್ದರು. ಆದರೆ ಒಂಬುಡ್ಸ್‌ಮನ್‌ ಕೂಡ ದೂರನ್ನು ಪುರಸ್ಕರಿಸಲಿಲ್ಲ. ಇದರಿಂದ ಅರ್ಜಿದಾರರು ಬ್ಯಾಂಕ್‌ ಉದ್ದೇಶಪೂರ್ವಕವಾಗಿ ಡಿಡಿ ಮೊತ್ತ ಜಮೆ ಮಾಡುತ್ತಿಲ್ಲ. ಇದು ನಿಯಮಬಾಹಿರ ಕ್ರಮ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, 2018ರಿಂದ ಅನ್ವಯವಾಗುವಂತೆ ಐಸಿಐಸಿಐ ಬ್ಯಾಂಕ್‌ ಶೇ.18ರ ಬಡ್ಡಿ ಸಹಿತ ಡಿಡಿ ಮೊತ್ತವನ್ನು ಅರ್ಜಿದಾರರಿಗೆ ಪಾವತಿಸಬೇಕು ಮತ್ತು ಅರ್ಜಿದಾರರಿಗೆ ದಂಡದ ರೂಪದಲ್ಲಿ 5 ಲಕ್ಷ ರು. ಅನ್ನು 15 ದಿನಗಳಲ್ಲಿ ಪಾವತಿಸಬೇಕು ಎಂದು ಸೂಚಿಸಿದೆ.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ