ಆನ್‌ಲೈನ್ ಗೇಮ್, ಗೋವಾದಲ್ಲಿ ಮೋಜು ಮಸ್ತಿಗೆ ಕನ್ನ । ಅನ್ನ, ನೌಕರಿ ಕೊಟ್ಟ ಬ್ಯಾಂಕ್‌ನಲ್ಲೇ ಕೃತ್ಯ ಎಸಗಿದ್ದ ಉದ್ಯೋಗಿ
ಆನ್ ಲೈನ್ ಗೇಮ್ ಹಾಗೂ ಗೋವಾದಲ್ಲಿ ಮೋಜು ಮಸ್ತಿ ಮಾಡಲು ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲೇ 3.5 ಕೆಜಿ ಚಿನ್ನಾಭರಣ ಕಳವು ಮಾಡಿ, ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು, ಅದೇ ಬ್ಯಾಂಕ್‌ನಿಂದ ಕೋಟ್ಯಂತರ ರು. ಸಾಲ ಪಡೆದಿದ್ದ ಮಹಾನ್ ಚಾಲಕಿ ನೌಕರರನ್ನು ಇಲ್ಲಿನ ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ, ದಾವಣಗೆರೆ ದೇವರಾಜ ಅರಸು ಬಡಾವಣೆಯ ಸಿಎಸ್‌ಬಿ ಬ್ಯಾಂಕ್ ಉದ್ಯೋಗಿ ಟಿ.ಪಿ.ಸಂಜಯ್ (35) ಬಂಧಿತ ಆರೋಪಿ ಎಂದರು.ಇಲ್ಲಿನ ದೇವರಾಜ ಅರಸು ಬಡಾವಣೆಯ ಸಿಎಸ್‌ಬಿ ಬ್ಯಾಂಕ್‌ನಲ್ಲಿ ಕಳೆದ ಏಪ್ರಿಲ್‌ನಲ್ಲಿ ವಾರ್ಷಿಕ ಆಡಿಟ್ ವೇಳೆ ಬ್ಯಾಂಕ್‌ನ ಇತರೆ ಸಿಬ್ಬಂದಿಗೆ ಅನುಮಾನ ಕಂಡು ಬಂದ ಹಿನ್ನೆಲೆ ವ್ಯವಸ್ಥಾಪಕ ಶಿವಕುಮಾರ ನೀಡಿದ ದೂರನ್ನು ಆಧರಿಸಿ, ತನಿಖೆ ಕೈಗೊಂಡಾಗ ಅದೇ ಬ್ಯಾಂಕ್‌ನ ಗೋಲ್ಡ್ ಲೋನ್ ವಿಭಾಗದ ಸಿಬ್ಬಂದಿ ಟಿ.ಪಿ.ಸಂಜಯ್ ಹಣವನ್ನು ಕಳವು ಮಾಡಿರುವುದು ತಿಳಿದು ಬಂದಿದೆ ಎಂದು ಹೇಳಿದರು.
ಗ್ರಾಹಕರು ಅಡಮಾನ ಮಾಡಿದ ಸಾಲದ ಖಾತೆಗಳಲ್ಲಿನ ಒಟ್ಟು 1,86,22,000 ರು. ಮೌಲ್ಯದ 3157.10 ಗ್ರಾಂ ತೂಕದ ಚಿನ್ನಾಭರಣಗಳನ್ನು ಬ್ಯಾಂಕ್‌ನಿಂದ ಕಳವು ಮಾಡಿಕೊಂಡು ಹೋಗಿದ್ದ. ಅಲ್ಲದೇ, ಬ್ಯಾಂಕ್‌ನ ಗಮನಕ್ಕೆ ಬರದಂತೆ ತನ್ನ ಸ್ನೇಹಿತರು, ಹಿತೈಷಿಗಳು, ಬಂಧುಗಳ ಹೆಸರಿನಲ್ಲಿ ನಕಲಿ ಬಂಗಾರದ ಆಭರಣ ಅಡಮಾನ ಮಾಡಿ ಸಾಲ ಪಡೆದಿದ್ದ ಎಂದರು.
ಖಾಸಗಿ ಫೈನಾನ್ಸ್‌ನವರು ಪ್ರಕರಣದ ತನಿಖೆಗೆ ಸಹಕಾರ ನೀಡಲಿಲ್ಲ. ಹಾಗಾಗಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು, ತಿಜೋರಿಗಳನ್ನು ಒಡೆಯಲಾಗಿದೆ. ಇದೇ ಮೊದಲ ಸಹ ಇಂತಹ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಕೆಟಿಜೆ ನಗರ ಠಾಣೆ ಪೊಲೀಸ್ ಅಧಿಕಾರಿಗಳ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ ಮೆಚ್ಚುಗೆ ವ್ಯಕ್ತಪಡಿಸಿದರು.
ದಾವಣಗೆರೆ ನಗರ, ಜಿಲ್ಲೆಯಲ್ಲಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಬ್ಯಾಂಕ್‌ಗಳಿಗೆ ಅಧಿಕಾರಿಗಳು, ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಾಗ ಅಂತಹವರ ಅಪರಾಧಿಕ ಹಿನ್ನೆಲೆ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ ನಂತರವಷ್ಟೇ ನೇಮಕ ಮಾಡಿಕೊಳ್ಳಬೇಕು.