ಬ್ಯಾಂಕ್‌ ಸಬ್ಸಿಡಿ ಒದಗಿಸುವುದಾಗಿ ವಂಚನೆ: ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Apr 28, 2026, 02:45 AM IST
ಎಸ್ಸಿ ಎಸ್ಟಿ ಕುಂದು ಕೊರತೆ ಸಭೆ ನಡೆಯಿತು. | Kannada Prabha

ಸಾರಾಂಶ

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಬ್ಯಾಂಕ್‌ ಸಬ್ಸಿಡಿ ಹೆಸರಿನಲ್ಲಿ ವಂಚನೆ ವಿಚಾರ ಕುರಿತು ಚರ್ಚೆ ನಡೆಯಿತು.

ಮಂಗಳೂರು: ಹಲವು ಮಹಿಳೆಯರಿಗೆ ಬ್ಯಾಂಕ್ ಸಬ್ಸಿಡಿಗಳನ್ನು ಒದಗಿಸುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪ ಹೊತ್ತಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡರು ಒತ್ತಾಯಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ದಲಿತ ಮುಖಂಡ ಎಸ್.ಪಿ. ಆನಂದ್, ಪಾಂಡೇಶ್ವರ ಸುತ್ತಮುತ್ತಲಿನ ಸುಮಾರು 15 ಮಹಿಳೆಯರಿಂದ ಮೊಹಮ್ಮದ್ ಉಮ್ಮರ್ ಎಂಬವರು ತಲಾ 10ರಿಂದ 20 ಸಾವಿರ ರು.ವರೆಗೆ ಹಣ ಸಂಗ್ರಹಿಸಿ ಸಬ್ಸಿಡಿ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ ಯಾವುದೇ ಸಬ್ಸಿಡಿ ಮೊತ್ತ ಮಹಿಳೆಯರಿಗೆ ಸಿಕ್ಕಿಲ್ಲ ಎಂದು ಆರೋಪಿಸಿದರು.ಪ್ರತಿಕ್ರಿಯಿಸಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್‌.ಎನ್., ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ತಕ್ಷಣ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಂಗಳೂರು ಮಹಾನಗರ ಪಾಲಿಕೆಯ ನೈರ್ಮಲ್ಯ ನಿರೀಕ್ಷಕರು ಮಹಿಳಾ ಸ್ವಚ್ಛತಾ ಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡಿದ್ದು ಎಫ್‌ಐಆರ್‌ ದಾಖಲಾದ ನಂತರ ಪರಾರಿಯಾಗಿದ್ದಾರೆ. ಅದರ ಬಳಿಕ ಮಹಿಳಾ ಕಾರ್ಮಿಕರಿಗೆ ಕೆಲವು ಅಧಿಕಾರಿಗಳು ಮತ್ತು ಮುಖಂಡರು ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೌರಕಾರ್ಮಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಆರೋಪಿಸಿದರು. ಈ ಕುರಿತಾದ ಕಾಲ್‌ ರೆಕಾರ್ಡಿಂಗ್‌ಗಳನ್ನು ಸಂಗ್ರಹಿಸಿ ಪ್ರಕರಣ ದಾಖಲಿಸುವಂತೆ ಡಿಸಿಪಿ ಅವರು ಇನ್ಸ್‌ಪೆಕ್ಟರ್‌ಗೆ ಸೂಚಿಸಿದರು.ಅಂಬೇಡ್ಕರ್‌ ಪ್ರತಿಮೆ:

ಪ್ರಸ್ತಾವಿತ ಅಂಬೇಡ್ಕರ್ ವೃತ್ತ ನಿರ್ಮಾಣದ ವರದಿಯು ಸಂಚಾರ ಪೊಲೀಸರ ಬಳಿ ಬಾಕಿ ಉಳಿದಿದೆ ಎಂದು ದಲಿತ ಮುಖಂಡರು ಧ್ವನಿ ಎತ್ತಿದರು. ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ಸಂಚಾರ ಪೊಲೀಸರ ವರದಿಯ ಜತೆಗೆ, ಎನ್‌ಐಟಿಕೆ ಮತ್ತು ಎಂಸಿಸಿ ಎಂಜಿನಿಯರ್‌ಗಳ ವರದಿಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಹೇಳಿದರು. ಅಂಬೇಡ್ಕರ್ ವೃತ್ತದಲ್ಲಿ ‘ವಿ’ ಆಕಾರದ ಜಾಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮಿಸಬಹುದು ಎಂದು ಡಿಸಿಪಿ (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್ ಹೇಳಿದರು.ಮಹಿಳೆಯೊಬ್ಬರು ಹಳೆಯ ಕೌಟುಂಬಿಕ ಹಿಂಸಾಚಾರದ ಘಟನೆಯನ್ನು ಪ್ರಸ್ತಾಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್‌, ಪೊಲೀಸ್ ಮನೆ ಭೇಟಿ ಕಾರ್ಯಕ್ರಮದಡಿ ಅವರ ಮನೆಗೆ ಭೇಟಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೇಪರ ಹಂಚಿದ ಹುಡುಗ 20 ಕೃತಿ ರಚಿಸಿದ ಸಾಹಿತಿ: ಡಾ.ವಿ.ಡಿ.ಐಹೊಳ್ಳಿ
ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಯತ್ನಾಳ ಭೂಮಿಪೂಜೆ