ಮಂಗಳೂರು: ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರತೆ ಕೊರತೆಯಿಂದಾಗಿ ಅಪರಾಧ ಪ್ರಕರಣಗಳು, ಸೈಬರ್ ವಂಚನಾ ಜಾಲ ವಿಸ್ತರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಡಿಸಿಪಿ (ಅಪರಾಧ ಮತ್ತು ಸಂಚಾರ) ಕೆ. ರವಿಶಂಕರ್ ಸಲಹೆ ನೀಡಿದ್ದಾರೆ.
ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಸೈಬರ್ ವಂಚಕರ ಜಾಲ ವಿಸ್ತರಣೆಯಾಗುತ್ತಿರುವುದು ಒಂದೆಡೆಯಾದರೆ, ಅದಕ್ಕೆ ಪೂರಕವಾಗಿ ಭದ್ರತಾ ವ್ಯವಸ್ಥೆ ಕೈಗೊಳ್ಳುವುದು ಕೂಡ ಸುಲಭವೇ ಆಗಿದೆ. ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಲ್ಲ ಬ್ಯಾಂಕ್‌ಗಳನ್ನೊಳಗೊಂಡ ಕಮಾಂಡ್ ಸೆಂಟರ್ ಸ್ಥಾಪಿಸಿದರೆ ಭದ್ರತೆಗೆ ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜನರು ಸಹಕಾರ ಸಂಘಗಳ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಹೂಡಿಕೆ ಮಾಡುತ್ತಾರೆ. ಜನರು ಇರಿಸಿದ ನಂಬಿಕೆಯನ್ನು ಉಳಿಸುವ ಮಹತ್ತರ ಜವಾಬ್ದಾರಿ ಸಹಕಾರಿ ಕ್ಷೇತ್ರದ ಮೇಲಿದೆ ಎಂದ ಕೆ.ರವಿಶಂಕರ್, ಭದ್ರತೆ ಕೊರತೆಯಿಂದ ಆಗುವ ಅನಾನುಕೂಲತೆಗಳ ಕುರಿತು ಅವಲೋಕನ ಮಾಡಿ, ಕಾಲಕಾಲಕ್ಕೆ ಈ ಕುರಿತು ಅರಿವು ಮೂಡಿಸುವುದು, ಮಾರ್ಗಸೂಚಿಗಳ ಪಾಲನೆ ಮಾಡುವುದು ಅತ್ಯವಶ್ಯಕ ಎಂದರು.ಇತ್ತೀಚೆಗೆ ಬ್ಯಾಂಕ್ ಉದ್ಯೋಗಿಗಳೇ ವಂಚನೆ ಪ್ರಕರಣಗಳಲ್ಲಿ ಪಾಲ್ಗೊಳ್ಳುತ್ತಿರುವುದು ಆತಂಕಕಾರಿ. ಇಂತಹ ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಬ್ಯಾಂಕ್‌ಗಳು ಕಾರ್ಯಾಚರಿಸುತ್ತಿರುವ ಕಟ್ಟಡ ಸರ್ವ ಭದ್ರತೆಯಿಂದ ಕೂಡಿರಬೇಕು. ಸಿಸಿ ಕ್ಯಾಮರಾಗಳನ್ನು ಹಾಕಿರಬೇಕು. ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆದರೆ ತಕ್ಷಣ 112ಕ್ಕೆ ಕರೆ ಮಾಡಿದರೆ ನಾಲ್ಕೈದು ನಿಮಿಷದೊಳಗೆ ಪೊಲೀಸ್ ನೆರವು ದೊರೆಯುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ನಮ್ಮ ದೇಶದ ಜನಸಂಖ್ಯೆಯ ಶೇ.48ರಿಂದ 50ರಷ್ಟು ಮೊಬೈಲ್ ಬ್ಯಾಂಕಿಂಗ್ ಉಪಯೋಗ ಮಾಡಲಾಗುತ್ತಿದೆ. 2024ರಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ 127 ಪ್ರಕರಣಗಳಲ್ಲಿ 41 ಕೋಟಿ ರು. ವಂಚನೆ ನಡೆದಿತ್ತು. 2025ರಲ್ಲಿ 123 ಪ್ರಕರಣಗಳಲ್ಲಿ 36 ಕೋಟಿ ರು. ವಂಚನೆ ನಡೆದಿದೆ. ವಿವಿಧ ಸೈಬರ್ ವಂಚನೆಗಳ ಕುರಿತು ಜನರು ಜಾಗ್ರತೆ ವಹಿಸಬೇಕು ಎಂದರು.
ದ.ಕ. ಜಿಲ್ಲಾ ಪೊಲೀಸ್ ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಎಸ್. ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಇಳಿಕೆಯಾಗಬೇಕಾದರೆ ಸೂಕ್ತ ಮಾರ್ಗಸೂಚಿಗಳ ಪಾಲನೆ ಅತ್ಯಗತ್ಯ. ಕಾಲಕಾಲಕ್ಕೆ ಭದ್ರತೆಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನೋಡಿಕೊಳ್ಳಬೇಕು ಎಂದು ಹೇಳಿದರು.ಜಿಲ್ಲಾ ಪೊಲೀಸ್ ಡಿವೈಎಸ್‌ಪಿ (ಕ್ರೈಂ) ಮಂಜುನಾಥ್, ಡಿವೈಎಸ್‌ಪಿ ಬಂಟ್ವಾಳ ವಿಜಯ ಪ್ರಸಾದ್, ಡಿವೈಎಸ್‌ಪಿ ಬೆಳ್ತಂಗಡಿ ರೋಹಿಣಿ ಸಿ.ಕೆ., ಡಿವೈಎಸ್‌ಪಿ ಪುತ್ತೂರು ಅರುಣ್ ನಾಗೇಂದ್ರ, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್‌ನ ಟ್ರಸ್ಟಿ ಮೇಘರಾಜ್ ಜೈನ್ ಇದ್ದರು.
ಭದ್ರತೆ ಬಗ್ಗೆ ಕಾಳಜಿ ಇರಲಿ: ಡಾ.ಎಂಎನ್ಆರ್ಸಹಕಾರಿ ಕ್ಷೇತ್ರದಲ್ಲಿ ಭದ್ರತೆ ಕುರಿತು ಇನ್ನಷ್ಟು ಕಾಳಜಿ ವಹಿಸುವ ಅಗತ್ಯವಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ಯಾಂಕ್ ವ್ಯವಸ್ಥೆಯಲ್ಲಿ ಕೇವಲ ಸಿಸಿ ಕ್ಯಾಮರಾ ಅಳವಡಿಸಿದರೆ ಸಾಲದು, ಅದು ಸದಾ ಕಾರ್ಯ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಬ್ಯಾಂಕಿನಲ್ಲಿರುವ ಸೊತ್ತುಗಳಿಗೆ ವಿಮೆ ಮಾಡಿದರೆ ಸಂಭವಿಸಬಹುದಾದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದರು.