ಲಕ್ಷ್ಮೇಶ್ವರ: ಪಟ್ಟಣಕ್ಕೆ ಭೇಟಿ ನೀಡಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಸಮರ ಕಲೆಗಳ ಪ್ರಾಚಾರ್ಯ, ಪಾರಂಪರಿಕ ಶೌರ್ಯ ಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹಾಸನ ರಘು ಅವರನ್ನು ಇತ್ತೀಚೆಗೆ ರಾಜ್ಯ ಮಲ್ಲಕಂಬ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಡಾ. ಹಾಸನ ರಘು ಅವರು, ಯಾವುದೇ ವಿದ್ಯೆ ಇರಲಿ ಅದರಲ್ಲಿ ಸಾಧನೆ ಮಾಡುವ ಛಲ ನಮ್ಮದಾಗಬೇಕು. ಅಂದಾಗಲೆ ಜಗತ್ತು ನಮ್ಮನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಜೀವನದಲ್ಲಿ ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗಬೇಕೆಂಬ ಇಚ್ಛೆ ಹೊಂದಿರುತ್ತಾರೆ. ಆದರೆ ಎಲ್ಲರಿಗೂ ಈ ಆಸೆ ಈಡೇರುವುದಿಲ್ಲ. ಏನು ಆಗದೆ ಇದ್ದರೂ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ನಾನೇ ಉದಾಹರಣೆಯಾಗಿದ್ದೇನೆ. ೧೯೭೧ರ ಹಿಂದೂ ಪಾಕ್ ಯುದ್ಧದಲ್ಲಿ ಭಾಗಿಯಾಗಿ ಸೇವಾ ಪದಕವನ್ನು ಪಡೆದು, ಸೇನೆಯಲ್ಲಿ ಜಿಮ್ಯಾಸ್ಟಿಕ್ ಪಟುವಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದೇನೆ.
೧೯೮೦ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಮಾರ್ಗದರ್ಶನದಲ್ಲಿ ರಂಗನಾಯಕಿ ಚಿತ್ರದ ಮೂಲಕ ಕಾರ್ಯನಿರ್ವಹಿಸಿ, ಕನ್ನಡ ಚಲನಚಿತ್ರ ಕಾರ್ಮಿಕರ ಸಂಘಟನೆ, ಸಾಹಸ ಕಲಾವಿದರ ಸಂಘಟನೆ ಸ್ಥಾಪಿಸಿ ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರನ್ನು ಬೆಳೆಸಲು ವಿಶೇಷ ಕ್ರಮ ಕೈಗೊಂಡಿದ್ದೇನೆ ಎಂದು ವಿವರಿಸಿದರು.ಪಿಎಸ್‌ಐ ನಾಗರಾಜ ಗಡದ ಮಾತನಾಡಿ ಮಲ್ಲಕಂಭ ಕ್ರೀಡೆಯೇ ಒಂದು ರೋಮಾಂಚನಕಾರಿ ಆಟ, ಕರ್ನಾಟಕದಲ್ಲಿ ಮಲ್ಲಕಂಬಕ್ಕೆ ಆದ್ಯತೆ ಇತ್ತು ಎಂದರು. ಪಿಎಸ್‌ಐ ನಾಗರಾಜ ಗಡದ ಮತ್ತು ಬಾಬು ಅಳವಂಡಿ ಅವರನ್ನು ಸನ್ಮಾನಿಸಲಾಯಿತು.ರಾಜ್ಯ ಮಲ್ಲಕಂಬ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಮ್ಯಾಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸೋಮಶೇಖರ ಕೊಡ್ಲಿ, ಬಸವರಾಜ ಗಡೆಪ್ಪನವರ, ಮಹಾಂತೇಶ ಹವಳದ, ಎಂ.ಎಂ. ಗದಗ, ಶಾಂಬಯ್ಯ ಹಿರೇಮಠ, ಎಂ.ಐ. ಕಣಕೆ, ಗಿರೀಶ ಅಗಡಿ, ರಾಜು ಹುಲಮನಿ, ಧರ್ಮರಾಜ ಬಟಗುರ್ಕಿ, ಡಿ.ಎಂ. ಪೂಜಾರ, ವಿ.ಎ. ಪಾಟೀಲ, ಎಲ್.ಎಸ್. ಅರಳಿಹಳ್ಳಿ ಇದ್ದರು.