ಬ್ಯಾಂಕ್‌ ದರೋಡೆಗೆ ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯ ಕಾರಣ

KannadaprabhaNewsNetwork |  
Published : Jan 22, 2025, 12:30 AM IST
21ಕೆಡಿವಿಜಿ6-ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಬ್ಯಾಂಕ್ ವ್ಯವಸ್ಥಾಪಕರ ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಬ್ಯಾಂಕ್‌ಗಳ ಭದ್ರತೆ ಕುರಿತಂತೆ ಸಲಹೆ, ಸೂಚನೆ ನೀಡುತ್ತಿರುವುದು. ..............21ಕೆಡಿವಿಜಿ7-ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಬ್ಯಾಂಕ್ ವ್ಯವಸ್ಥಾಪಕರ ಸಭೆ. | Kannada Prabha

ಸಾರಾಂಶ

ಭದ್ರತಾ ಮಾನದಂಡ ಕಡ್ಡಾಯ ಪಾಲನೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಸೂಚನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬ್ಯಾಂಕ್‌ಗಳಲ್ಲಿ ದರೋಡೆ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಭದ್ರತಾ ಮಾನದಂಡಗಳ ಜೊತೆಗೆ ಮಾಹಿತಿ ಸಂಗ್ರಹದಲ್ಲೂ ಅಧಿಕಾರಿಗಳು, ಸಿಬ್ಬಂದಿ ನಿರ್ಲಕ್ಷ್ಯತೆಯೂ ಕಾರಣವಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಭದ್ರತೆಗಾಗಿ ಬ್ಯಾಂಕ್‌ಗಳ ಎಲ್ಲಾ ವ್ಯವಸ್ಥಾಪಕರ ಸಭೆ ಉದ್ಘಾಟಿಸಿ ಮಾತನಾಡಿದ ಅ‍ವರು, ಬ್ಯಾಂಕ್‌ ದರೋಡೆ ಹೆಚ್ಚಳಕ್ಕೆ ಬ್ಯಾಂಕ್‌ನವರ ನಿರ್ಲಕ್ಷ್ಯದ ಜೊತೆ ಮಾಹಿತಿ ವಿನಿಮಯದ ಕೊರತೆಯೂ ಕಾರಣವಾಗುತ್ತಿದೆ ಎಂದರು.

ಭದ್ರತಾ ಮಾನದಂಡಗಳನ್ನು ಪ್ರತಿಯೊಂದು ಬ್ಯಾಂಕ್‌ಗಳಲ್ಲೂ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಬ್ಯಾಂಕ್‌ಗಳ ವ್ಯವಸ್ಥಾಪಕರು ತಮ್ಮ ಬ್ಯಾಂಕ್‌ಗಳಿಗೆ ಬೇಕಾದ ಹೈಸೆಕ್ಯೂರಿಟಿ ಸಿಸಿ ಕ್ಯಾಮೆರಾಗಳ ಜೊತೆಗೆ ಅಲರಾಂಗಳನ್ನೂ ಅಳವಡಿಸಿಕೊಳ್ಳಬೇಕು. ಬ್ಯಾಂಕ್ ಭದ್ರತಾ ಸಿಬ್ಬಂದಿಯ ಮಾಹಿತಿ ಸಂಗ್ರಹ ಜೊತೆಗೆ ಸಮೀಪದ ಪೊಲೀಸ್ ಠಾಣೆಯೊಂದಿಗೆ ಸೆಕ್ಯೂರಿಟಿ ಕುರಿತಂತೆ ಚರ್ಚಿಸಬೇಕು ಎಂದು ಅವರು ಸೂಚಿಸಿದರು.

ಬ್ಯಾಂಕ್‌ ಒಳಗೆ ಸ್ಟ್ರಾಂಗ್ ರೂಂ ಡಿಜಿ ಲಾಕರ್, ಸ್ಟ್ರೋಕ್‌ ಡಿಟೆಕ್ಟರ್‌ಗಳು, ಹೀಟ್ ಡಿಟೆಕ್ಟರ್‌ಗಳು, ಬ್ಯಾಂಕ್‌ಗಳ ಬಳಿ ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ಅಂತಹವರ ಮಾಹಿತಿಯನ್ನು ತಕ್ಷಣವೇ ಪೊಲೀಸ್ ಠಾಣೆಗೆ ಬ್ಯಾಂಕ್‌ ಅಧಿಕಾರಿ, ಸಿಬ್ಬಂದಿ ತಿಳಿಸಬೇಕು. ಸ್ಟ್ರಾಂಗ್ ರೂಂಗೆ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ನಿತ್ಯ ಭೇಟಿ ನೀಡುವ ನಮೂನೆಯಲ್ಲಿ ಕಡ್ಡಾಯವಾಗಿ ದಾಖಲು ಮಾಡಬೇಕು ಎಂದು ಅವರು ತಿಳಿಸಿದರು.

ಅಲ್ಲದೇ, ನಿತ್ಯವೂ ಬೀಟ್ ಪೊಲೀಸರು ಬ್ಯಾಂಕ್‌ಗೆ ಭೇಟಿ ನೀಡುವ ಬಗ್ಗೆ ಇ-ಬೀಟ್ ವ್ಯವಸ್ಥೆ ಮಾಡಬೇಕು. ಪ್ರತಿ ಬೀಟ್ ಸಿಬ್ಬಂದಿಗಳು ಭೇಟಿ ನೀಡುತ್ತಿರುವ ಬಗ್ಗೆ ರಾತ್ರಿ ಗಸ್ತಿನ ಉಸ್ತುವಾರಿ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಬೇಕು. ಜಿಲ್ಲಾ ಕಂಟ್ರೋಲ್ ರೂಂನವರು ನಿತ್ಯ ಬ್ಯಾಂಕ್‌ಗಳಿಗೆ ಬೀಟ್ ಸಿಬ್ಬಂದಿ, ರಾತ್ರಿ ಗಸ್ತಿನ ಅಧಿಕಾರಿಗಳು ಭೇಟಿ ನೀಡುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ಪಡೆದು, ನಮೂದಿಸಬೇಕು ಎಂದು ಅವರು ಆದೇಶಿಸಿದರು.

ಹೊರ ವಲಯಗಳಲ್ಲಿರುವ ಬ್ಯಾಂಕ್‌ಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಠಾಣೆ ವ್ಯಾಪ್ತಿಯ ಪೊಲೀಸ ಇನ್ಸಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್‌ ಸೆಕ್ಯೂರಿಟಿ ಆಡಿಟ್ ವರದಿಯನ್ನು ಕಡ್ಡಾಯವಾಗಿ ಪಡೆದು, ಜಿಲ್ಲಾ ಪೊಲೀಸ್ ಕಚೇರಿಗೆ ಕಳಿಸಿಕೊಡಬೇಕು. ಬ್ಯಾಂಕ್‌ಗಳ ಒಳ ಭಾಗ ಮತ್ತು ಹೊರ ಭಾಗದಲ್ಲಿ ಮತ್ತು ಎಟಿಎಂ ಇರುವ ಕಡೆಗಳಲ್ಲಿ ಕಡ್ಡಾಯವಾಗಿ ಮೋಷನ್ ಸಿಸಿ ಟೀವಿಗಳನ್ನು ಅಳವಡಿಸಿ, ಈ ಛಾಯಾಚಿತ್ರ ಮತ್ತು ರೆಕಾರ್ಡಿಂಗ್‌ನ್ನು ಡ್ರೈವ್‌ನಲ್ಲಿ ಸೇವ್ ಮಾಡಿಡಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಮೇಯರ್ ಕೆ.ಚಮನ್ ಸಾಬ್‌, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಿ.ಮಂಜುನಾಥ, ಸ್ಯಾಮ್ ವರ್ಗೀಸ್‌, ಪೊಲೀಸ್ ಅಧಿಕಾರಿಗಳು, ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರು ಇದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ