ಬ್ಯಾಂಕಿಂಗ್ ವಹಿವಾಟು ವಂಚನೆ ತಡೆ, 1600 ಸರಣಿ ದೂರವಾಣಿ ಸಂಖ್ಯೆ: ಪ್ರತೀಕ್ ಬಾಯಲ್

KannadaprabhaNewsNetwork |  
Published : Sep 04, 2026, 03:00 AM IST
03ಲೀಡ್‌ | Kannada Prabha

ಸಾರಾಂಶ

ಬ್ಯಾಂಕಿಂಗ್ ವಹಿವಾಟುಗಳಲ್ಲಿ ವಂಚನೆ ತಡೆಗಟ್ಟಲು 1600ರಿಂದ ಪ್ರಾರಂಭವಾಗುವ ದೂರವಾಣಿ ಸಂಖ್ಯೆ ಸರಣಿಯನ್ನು ಮಾತ್ರ ಬಳಸುವಂತೆ ಬ್ಯಾಂಕುಗಳಿಗೆ ಆರ್.ಬಿ.ಐ ನಿರ್ದೇಶನ ನೀಡಿದೆ. ಈ ಬಗ್ಗೆ ಎಲ್ಲ ಬ್ಯಾಂಕುಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಪ್ರತೀಕ್ ಬಾಯಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಡುಪಿ: ಬ್ಯಾಂಕಿಂಗ್ ವಹಿವಾಟುಗಳಲ್ಲಿ ವಂಚನೆ ತಡೆಗಟ್ಟಲು 1600ರಿಂದ ಪ್ರಾರಂಭವಾಗುವ ದೂರವಾಣಿ ಸಂಖ್ಯೆ ಸರಣಿಯನ್ನು ಮಾತ್ರ ಬಳಸುವಂತೆ ಬ್ಯಾಂಕುಗಳಿಗೆ ಆರ್.ಬಿ.ಐ ನಿರ್ದೇಶನ ನೀಡಿದೆ. ಈ ಬಗ್ಗೆ ಎಲ್ಲ ಬ್ಯಾಂಕುಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಪಂ ಸಿಇಒ ಪ್ರತೀಕ್ ಬಾಯಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ರಜತಾದ್ರಿಯ ಜಿಪಂನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸೈಬರ್‌ ವಂಚನೆಯಿಂದ ಹಣ ಕಳೆದುಕೊಂಡ ಗ್ರಾಹಕರು ಬ್ಯಾಂಕುಗಳಿಗೆ ವಿಚಾರಿಸಲು ಬಂದಾಗ ಅವರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಸಲಹೆ ತಿಳುವಳಿಕೆ ನೀಡಬೇಕು. ಈ ರೀತಿಯ ವಂಚನೆಗೊಳಗಾದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು. ಅವಕಾಶವಿದ್ದಲ್ಲಿ ಪರಿಹಾರ ನೀಡಬೇಕು. ಪೊಲೀಸರು ಪ್ರಕರಣದ ತನಿಖೆಗೆ ಬಂದಾಗ ಸಹಕರಿಸಬೇಕು ಎಂದವರು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. ಪರಿಹಾರಕ್ಕೆ ಅವಕಾಶವಿದೆ: ಆರ್.ಬಿ.ಐ.ನ ಎ.ಜಿ.ಎಂ ನಿಶಾ ಠಾಕೂರ್ ಮಾತನಾಡಿ, ಸೈಬರ್ ವಂಚನೆಗೊಳಗಾದವರು ತಮಗಾದ ನಷ್ಟವು ಸಾಬೀತು ಮಾಡಿದಲ್ಲಿ, ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್ ಅಥವಾ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಗೆ ನಿಗದಿತ ಅವಧಿಯಲ್ಲಿ ಪ್ರಕರಣ ದಾಖಲಿಸಿದ್ದಲ್ಲಿ, ನಿವ್ವಳ ನಷ್ಟದ ಮೊತ್ತದ ಶೇ.85 ರಷ್ಟು ಅಥವಾ 25,000, ಯಾವುದು ಕಡಿಮೆಯೋ ಅದನ್ನು ಒಂದು ಬಾರಿ ಮಾತ್ರ ಪರಿಹಾರ ನೀಡಲಾಗುವುದು, ಇ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.

ಸಿಡಿ ಅನುಪಾತ ಶೇ 49.64: ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ರ ಪ್ರಾದೇಶಿಕ ವ್ಯವಸ್ಥಾಪಕ ತದಿನಾಡ ಶ್ರೀನಾಗ ಪೂರ್ಣಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜೂನ್ ಮಾಹೆಯ ಅಂತ್ಯದವರೆಗೆ ಜಿಲ್ಲೆಯ ಒಟ್ಟು 440 ಶಾಖೆಗಳಲ್ಲಿ 48715.93 ಕೋಟಿ ರು. ಠೇವಣಿ ಮತ್ತು 24,184.84 ಕೋಟಿ ರು. ಮುಂಗಡ ಸೇರಿದಂತೆ ಒಟ್ಟು 72,900.77 ಕೋಟಿ ರು. ವಹಿವಾಟು ನಡೆದಿದೆ, ಬ್ಯಾಂಕುಗಳ ಸಾಲ ಠೇವಣಿ ಅನುಪಾತ ಶೇ. 49.64 ಇದೆ. ಈ ಪ್ರಮಾಣವು ರೀಸರ್ವ್ ಬ್ಯಾಂಕ್ ಮಾರ್ಗ ಸೂಚಿಯಂತೆ ಕನಿಷ್ಠ ಶೇ. 60 ಇರಬೇಕಾಗಿದ್ದು, ಈ ಬಗ್ಗೆ ಎಲ್ಲ ಬ್ಯಾಂಕುಗಳು ಪ್ರಯತ್ನಿಸಬೇಕು ಎಂದರು.

ಲೋಕ್ ಕಲ್ಯಾಣ್‌ ಮೇಳ: ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಮಾತನಾಡಿ. ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗಾಗಿ ಸೆಯ 1 ರಿಂದ 30ರವರೆಗೆ ಲೋಕ್ ಕಲ್ಯಾಣ್ ಮೇಳ ವಿಶೇಷ ಅಭಿಯಾನವನ್ನು ಆಯೋಜಿಸಲಾಗುತ್ತಿದ್ದು, ಈ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಹೆಚ್ಚಿನ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ಅಭಿವೃದ್ಧಿಗೆ ಬ್ಯಾಂಕುಗಳು ಸಹಕರಿಸಬೇಕು ಎಂದರು. ಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್‌ನ ಉಪಮಹಾಪ್ರಬಂಧಕ ರಾಜೇಶ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಷ್ಟ್ರೀಯ ಸೇವಾ ಯೋಜನೆ ಘಟಕ ಉದ್ಘಾಟನೆ
ಹಾರಂಗಿ ಸಾಕಾನೆ ಶಿಬಿರ ಪ್ರವಾಸಿಗರಿಗೆ ಶೀಘ್ರ ಮುಕ್ತ