ಕೊಡಗಿನ ಪ್ರಸಿದ್ಧ ಹಾರಂಗಿ ಸಾಕಾನೆ ಶಿಬಿರ ಗುರುವಾರದಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದು, ದುಬಾರೆ ಸಾಕಾನೆ ಶಿಬಿರಕ್ಕೆ ಶೀಘ್ರ ಸಾರ್ವಜನಿಕರಿಗೆ ಪ್ರವೇಶ ಒದಗಿಸಲಾಗುವುದು ಎಂದು ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಟಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗಿನ ಪ್ರಸಿದ್ಧ ಹಾರಂಗಿ ಸಾಕಾನೆ ಶಿಬಿರ ಗುರುವಾರದಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗಿದ್ದು, ದುಬಾರೆ ಸಾಕಾನೆ ಶಿಬಿರಕ್ಕೆ ಶೀಘ್ರ ಸಾರ್ವಜನಿಕರಿಗೆ ಪ್ರವೇಶ ಒದಗಿಸಲಾಗುವುದು ಎಂದು ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಟಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕುಶಾಲನಗರ ವ್ಯಾಪ್ತಿಯಲ್ಲಿ ದುಬಾರೆ ಮತ್ತು ಹಾರಂಗಿ ಬಳಿ 2 ಸಾಕಾನೆ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು ಕಳೆದ ನಾಲ್ಕು ತಿಂಗಳ ಹಿಂದೆ ಪ್ರವಾಸಿಗರಿಗೆ ಆನೆ ಶಿಬಿರಕ್ಕೆ ಭೇಟಿಗೆ ನಿರ್ಬಂಧ ಹೇರಲಾಗಿತ್ತು.

ನಿಯಮ ಪಾಲನೆ ಕಡ್ಡಾಯ: ಆನೆ ಶಿಬಿರದಲ್ಲಿ ಪಾಲಿಸಬೇಕಾದ 10 ಕಡ್ಡಾಯ ಸುರಕ್ಷತಾ ನಿಯಮಗಳನ್ನು ಪಟ್ಟಿಯಲ್ಲಿ ನಮೂದಿಸಲಾಗಿದ್ದು ಸಾರ್ವಜನಿಕರು ಸಾಕಾನೆಗಳೊಂದಿಗೆ ಭೌತಿಕ ಸಂಪರ್ಕವನ್ನು ಹೊಂದುವಂತಿಲ್ಲ ಎಂದು ಸೂಚಿಸಲಾಗಿದೆ. ಪ್ರತಿ ಮಂಗಳವಾರ ಆನೆ ಶಿಬಿರ ಸಾರ್ವಜನಿಕ ವೀಕ್ಷಣೆಗೆ ನಿಷೇಧವಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಮೀಟರ್‌ ದೂರ: ಇನ್ನು ಮುಂದೆ ಸಾಕಾನೆ ಶಿಬಿರಗಳಲ್ಲಿ ಆನೆಗಳನ್ನು ವೀಕ್ಷಿಸಬೇಕಾದರೆ 10 ಮೀಟರ್ ಅಂತರ ಕಾಪಾಡಲೇಬೇಕು. ಆನೆಯನ್ನು ಮುಟ್ಟುವುದು, ಮೈ ಮುಟ್ಟಿ ನಮಸ್ಕರಿಸುವುದು. ಆಹಾರ ತಿನಿಸುವುದು, ನದಿಯಲ್ಲಿ ಆನೆ ಮೇಲೆ ಕುಳಿತು ಸ್ನಾನ ಮಾಡಿಸುವುದು, ಸೆಲ್ಫಿ ತೆಗೆದುಕೊಳ್ಳುವುದಕ್ಕೆ ನಿಷೇಧ ಹೇರಲಾಗಿದೆ. ಪ್ರವಾಸಿಗರು ಬ್ಯಾರಿಕೇಡ್ ಹಿಂದೆ ಇರುವ ಹಸಿರು ವಲಯದಲ್ಲಿ ಮಾತ್ರ ಇರಬೇಕು ಎಂದು ಸೂಚಿಸಲಾಗಿದೆ.

ಶಿಬಿರದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಹತ್ತಕ್ಕಿಂತ ಹೆಚ್ಚು ಆನೆಗಳನ್ನು ನಿಯೋಜಿಸಬಾರದು. ಮದ ಲಕ್ಷಣ ಕಂಡು ಬಂದಿರುವ ಆಕ್ರಮಣಕಾರಿ, ಗಾಯಗೊಂಡ ಅನಾರೋಗ್ಯದ ಒತ್ತಡಕ್ಕೆ ಒಳಗಾದ ಅಥವಾ ಹೊಸದಾಗಿ ಸೆರೆಹಿಡಿಯಲಾದ ಅಥವಾ ಆರು ತಿಂಗಳ ಒಳಗಿನ ಮರಿಯನ್ನು ಹೊಂದಿರುವ ತಾಯಿ ಸಾಕಾನೆಯನ್ನು ಸಾರ್ವಜನಿಕರ ವೀಕ್ಷಣೆಗೆ ಒಳಪಡಿಸಬಾರದು ಎಂಬ ನಿಯಮ ಮಾಡಲಾಗಿದೆ. ಆನೆಗಳು ಪರಸ್ಪರ ತಳ್ಳುವಂತಹ ಸ್ಥಿತಿಯಲ್ಲಿ ಇರಿಸಬಾರದು. ಸ್ನಾನ ಮಾಡಿಸುವುದು ಹೆಚ್ಚಿನ ಅಪಾಯದ ಕಾರ್ಯಾಚರಣೆಯ ಚಟುವಟಿಕೆಯಾಗಿದ್ದು ಪ್ರವಾಸಿಗರಿಗೆ ಸ್ನಾನದ ವಲಯಕ್ಕೆ ಪ್ರವೇಶಿಸಲು ಅವಕಾಶವಿಲ್ಲ. ಶಿಬಿರದಲ್ಲಿ ಸಿಸಿಟಿವಿ ಮೇಲ್ವಿಚಾರಣೆ ಕಡ್ಡಾಯವಾಗಿದ್ದು ಶಿಬಿರದ ಕಂಟ್ರೋಲ್ ರೂಮ್ ಮತ್ತು ಮೇಲ್ವಿಚಾರಣೆ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿದೆ.

ಮೂರು ವಲಯ ನಿಯಮ ಹಲವು: ಶಿಬಿರದಲ್ಲಿ ಕೆಂಪು, ಕೇಸರಿ ಮತ್ತು ಹಸಿರು ವಲಯಗಳು ವಿಂಗಡಿಸಲಾಗಿದ್ದು, ಕೆಂಪು ವಲಯದಲ್ಲಿ ಮಾವುತರು ಕಾವಡಿಗಳು ಪಶು ವೈದ್ಯರು, ಅಧಿಕೃತ ಅರಣ್ಯ ಸಿಬ್ಬಂದಿ ಮಾತ್ರ ಪ್ರವೇಶಿಸಬಹುದಾಗಿದೆ. ಕೇಸರಿ ವಲಯ ನಿಯಂತ್ರಿತ ಪ್ರದೇಶದಲ್ಲಿ ಅಧಿಕೃತ ಸಿಬ್ಬಂದಿ ಮತ್ತು ತುರ್ತು ಪ್ರತಿಕ್ರಿಯೆ ಸಿಬ್ಬಂದಿ ಮಾತ್ರ ಸಾಗಬಹುದಾಗಿದೆ. ಶಿಬಿರದಲ್ಲಿ ಆನೆಗಳ ನಡುವೆ 15 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಹಸಿರು ವಲಯ ವೀಕ್ಷಣಾ ಪ್ರದೇಶದಲ್ಲಿ ನಿಯಂತ್ರಿತ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾ ಶಿಕ್ಷಣದ ಭಾಗವಾಗಿ ಪ್ರವಾಸಿಗರು ಆನೆಗಳನ್ನು ವೀಕ್ಷಿಸುವ ಏಕೈಕ ಸ್ಥಳಗಳಾಗಿದ್ದು ಪ್ರವಾಸಿಗರು ಬ್ಯಾರಿಕೇಡ್ ಹಿಂದೆ ಇರಬೇಕು ಎಂದು ಸೂಚಿಸಲಾಗಿದೆ.

ಸ್ಲಾಟ್‌ ವ್ಯವಸ್ಥೆ: ಸಾರ್ವಜನಿಕರ ಪ್ರವೇಶದಲ್ಲಿ ಸ್ಲಾಟ್ ವ್ಯವಸ್ಥೆ ಕಡ್ಡಾಯವಾಗಿದ್ದು ಪ್ರತಿಯೊಂದು ಪ್ರವಾಸಿಗರ ಗುಂಪು ಸಂಬಂಧ ಪಟ್ಟ ವಲಯವನ್ನು ಪ್ರವೇಶಿಸಿ ಸುರಕ್ಷತಾ ಸೂಚನೆಗಳನ್ನು ಪಡೆದು ಅನುಮೋದಿತ ಹಸಿರು ವಲಯ ಮಾರ್ಗದ ಮೂಲಕ ಚಲಿಸಿ ನಿಗದಿತ ಸ್ಥಳದಿಂದ ಆನೆಗಳನ್ನು ವೀಕ್ಷಿಸಿ, ನಂತರವಷ್ಟೇ ಮುಂದಿನ ಗುಂಪು ಒಳಬರಲು ಅವಕಾಶವಿದೆ. ಶಿಬಿರದಲ್ಲಿ ಪೊಲೀಸ್ ಮತ್ತು ಆ್ಯಂಬುಲೆನ್ಸ್‌ ಕಡ್ಡಾಯವಾಗಿ ಇರಿಸಲು ಸೂಚಿಸಲಾಗಿದೆ.