ಧಾರವಾಡ:
ನಗರದ ಎಲ್ಲ ಬ್ಯಾಂಕ್ ಸಿಬ್ಬಂದಿ ಬೆಳಗ್ಗೆ ಇಲ್ಲಿಯ ಎಸ್‌ಬಿಐ ಮುಖ್ಯ ಶಾಖೆಯ ಎದುರು ಜಮಾ ಆಗಿ ಪ್ರತಿಭಟಿಸಿದರು. 2024ರಲ್ಲಿ ಕೇಂದ್ರ ಸರ್ಕಾರ ವಾರದ ಐದು ದಿನ ಮಾತ್ರ ಕೆಲಸದ ದಿನಗಳನ್ನಾಗಿ ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈ ವರೆಗೂ ಈ ಕ್ರಮವನ್ನು ಅನುಷ್ಠಾನಗೊಳಿಸದೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದ್ದಾರೆ ಎಂದು ಸಂಘಟನೆಯ ಮುಖಂಡ ರಾಜು ಕಲಾಲ್, ಇಕ್ಬಾಲ್ ನದಾಫ್ ಹೇಳಿದರು.
ಪ್ರತಿಭಟನೆಯು ಎಸ್‌ಬಿಐ ಮುಖ್ಯ ಶಾಖೆಯಿಂದ ಆರಂಭವಾಗಿ ಜ್ಯುಬಿಲಿ ಸರ್ಕಲ್, ಪಾಲಿಕೆ ವೃತ್ತ, ವಿವೇಕಾನಂದ ಸರ್ಕಲ್ ವರೆಗೆ ಸಾಗಿತು. ನೂರಾರು ಬ್ಯಾಂಕ್ ಸಿಬ್ಬಂದಿ ಘೋಷಣೆ ಕೂಗುತ್ತಾ ಕೇಂದ್ರ ಸರ್ಕಾರದ ಗಮನ ಸೆಳೆದರು. ಕಾರ್ಮಿಕ ಸಂಘಟನೆಗಳ ಮುಖಂಡರಾದ ಸಂದೀಪ ಮೇತ್ರಿ, ರವಿ ಕಟ್ಟಿ, ಪ್ರವೀಣ ಸವಣೂರು, ವಿದ್ಯಾಸಾಗರ ದೀಕ್ಷಿತ್, ಶ್ರೀರಂಗ ಕೊಣ್ಣೂರ, ದಿನೇಶ್ ಶಾನಭಾಗ್, ಅಧಿಕಾರಿಗಳ ವರ್ಗದ ಮುಖಂಡರಾದ ವಿಜಯ ನಾಗರಾಜ, ವಿಕ್ರಮ್ ಮಲ್ಲಸಮುದ್ರ, ಅರುಣಾ ಸಾಸ್ವಿಹಳ್ಳಿ, ವಿಜಯಲಕ್ಷ್ಮಿ ನರಗುಂದ ಹಾಗೂ ಬ್ಯಾಂಕಿನ ನಿವೃತ್ತ ಸಂಘದ ಮುಖಂಡ ಸುಭಾಸ್ ಸುಂಕದ ಇದ್ದರು.