ಸ್ಪಾವೊಂದರ ಸೀನಿಯರ್ ಮ್ಯಾನೇಜರ್ ಅಪಹರಣ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಪಾ ಮಾಲೀಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸ್ಪಾವೊಂದರ ಸೀನಿಯರ್ ಮ್ಯಾನೇಜರ್ ಅಪಹರಣ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಪಾ ಮಾಲೀಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಎಲ್ಲರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ಪಾ ಮಾಲೀಕ ಅಶೀತ್ ಕುಮಾರ್ ಜ್ಹಾ(28) ಅಪಹರಣಕ್ಕೊಳಗಾದವರು. ಸ್ಪಾ ಮಾಲೀಕ ಪ್ರಕಾಶ್ ಮಂಡಲ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ಫೆ.15 ರಂದು ಸ್ಪಾನ ಸೀನಿಯರ್ ಮ್ಯಾನೇಜರ್ ಅಶೀತ್ ಅವರು ಮ್ಯಾನೇಜರ್ ಮುನ್ನಕುಮಾರ್ ಜತೆ ರಾತ್ರಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಬೆಟ್ಟದಾಸನಪುರ, ಅರೇನಾ ಸ್ಪೋಟ್ಸ್ ರಸ್ತೆಯಲ್ಲಿ ಕಾರಿನಲ್ಲಿ ಬಂದಿದ್ದ ಮೂವರು ಆರೋಪಿಗಳು ಏಕಾಏಕಿ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದರು. ಬೈಕ್‌ನಿಂದ ಕೆಳಗೆ ಬೀಳುತ್ತಿದ್ದಂತೆ ಮಾರಕಾಸ್ತ್ರದಿಂದ ಮುನ್ನಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಅಶೀತ್‌ನನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನಾಪ್ ಮಾಡಿದ್ದರು.
ಈ ವೇಳೆ ಮುನ್ನಕುಮಾರ್ ಆರೋಪಿಗಳಿಂದ ತಪ್ಪಿಸಿಕೊಂಡು ಹೋಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಬಳಿಕ ತಡರಾತ್ರಿ ಠಾಣೆಗೆ ಬಂದು ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಆರೋಪಿಗಳಿಗೆ ಶೋಧ ನಡೆಸಿದ್ದರು. ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಸ್ಪಾ ಮಾಲೀಕನಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ
ಮರು ದಿನ ಅಪಹರಣಕಾರರು ಅಶೀತ್ ಅವರ ಮೊಬೈಲ್ ಮೂಲಕ ಸ್ಪಾ ಮಾಲೀಕ ಪ್ರಕಾಶ್ ಅವರಿಗೆ ಕರೆ ಮಾಡಿಸಿ, 2 ಲಕ್ಷ ರು. ಹಣವನ್ನು ಕೊಟ್ಟರೆ ಅಪಹಾರಣಕಾರರು ನನ್ನನ್ನು ಬಿಟ್ಟು ಕಳುಹಿಸುತ್ತಾರೆ. ಇಲ್ಲವಾದರೆ ಕೊಲೆ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿಸಿ ಕರೆ ಸ್ಥಗಿತಗೊಳಿದ್ದರು. ಈ ಬಗ್ಗೆ ಮಾಲೀಕ ಪೊಲೀಸರಿಗೆ ದೂರು ನೀಡಿದ್ದರು. ಈ ಮಾಹಿತಿ ಆಧರಿಸಿ ಪೊಲೀಸರು ಆರೋಪಿಗಳನ್ನು ಬಲೆಗೆ ಕೆಡವಲು ಮಾಸ್ಟರ್ ಪ್ಲಾನ್ ಮಾಡಿದ್ದರು.
ಆರೋಪಿಗಳು ಹೇಳಿದಂತೆ ಮಾಲೀಕ ಪ್ರಕಾಶ್ ಹಣವನ್ನು ತೆಗೆದುಕೊಂಡು ಬಿಂಗಿಪುರ ಪೆಟ್ರೋಲ್ ಬಂಕ್ ಬಳಿಯ ನೀಲಗಿರಿ ತೋಪಿಗೆ ಹೋಗಿದ್ದರು. ಈ ವೇಳೆ ಹಣ ಪಡೆಯಲು ಬಂದ ಆರೋಪಿ ಅಕ್ಷಯ್‌ನನ್ನು ಮೊದಲು ಬಂಧಿಸಿದ್ದರು. ಬಳಿಕ ಈತನ ನೀಡಿದ ಮಾಹಿತಿ ಆಧರಿಸಿ ಮಂಟಪ ಮಂಜುನಾಥ ಮತ್ತು ಪ್ರಜ್ವಲ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನ್‌ಲೈನ್ ಗೇಮಿಂಗ್ ಹಣ ಕಳೆದಿದ್ದ ಆರೋಪಿ:
ಆರೋಪಿ ಮಂಜುನಾಥ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಫೆಲಿಸಿಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅಪಾರ್ಟ್‌ಮೆಂಟ್ ನಿರ್ವಹಣೆ ಮಾಡಲು ಪಡೆದಿದ್ದ ಹಣವನ್ನು ಬ್ಯಾಂಕಿಗೆ ಕಟ್ಟದೆ ಆನ್‌ಲೈನ್ ಗೇಮಿಂಗ್ ಆಡಿ ಲಕ್ಷಾಂತರ ಕಳೆದುಕೊಂಡಿದ್ದ. ಅಪಾರ್ಟ್‌ಮೆಂಟ್‌ನವರು ಹಣಕ್ಕೆ ಒತ್ತಾಯ ಮಾಡಿದ್ದಾಗ ಅಪಹರಣದ ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳೇ ಆರೋಪಿಗಳುಆರೋಪಿಗಳಾದ ಮಂಜುನಾಥ ಮತ್ತು ಪ್ರಜ್ವಲ್ ಈ ಹಿಂದೆ ಬೇಗೂರಿನಲ್ಲಿ ನಡೆದಿದ್ದ ಸ್ಕ್ರಾಪ್ ಡೀಲರ್ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಇನ್ನು ಆರೋಪಿ ಅಕ್ಷಯ್ ಈ ಹಿಂದೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಿರಣ್ ಎಂಬಾತನ ಹತ್ಯೆ ಪ್ರಕರಣ ಆರೋಪಿಯಾಗಿರುವುದು ತನಿಖೆಯ ವೇಳೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.