ಬ್ಯಾಂಕುಗಳು ಶೈಕ್ಷಣಿಕ ಸಾಲ ನೀಡುವ ಗುರಿ ಪೂರ್ಣಗೊಳಿಸಿ

KannadaprabhaNewsNetwork |  
Published : Sep 24, 2025, 01:00 AM IST
ಪೋಟೋ, 23ಎಚ್ಎಸ್‌ಡಿ8: ನಗರದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಲಾದ 2025-26ನೇ ಸಾಲಿನ ಡಿ.ಎಲ್.ಆರ್.ಸಿ  ಹಾಗೂ ಡಿಸಿಸಿ ಎರಡನೇ ತ್ರೈಮಾಸಿಕ ಸಭೆಯಲ್ಲಿ ಸಂಸದ ಗೋವಿಂದಕಾರಜೋಳ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಲಾದ 2025-26ನೇ ಸಾಲಿನ ಡಿಎಲ್‌ಆರ್‌ಸಿ ಹಾಗೂ ಡಿಸಿಸಿ 2ನೇ ತ್ರೈಮಾಸಿಕ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಹೆಚ್ಚಿದ್ದಾರೆ. ಶಿಕ್ಷಣ ಜಿಲ್ಲೆಯ ಭವಿಷ್ಯ ಬದಲಿಸುವ ಸಾಧನವಾಗಿದ್ದು, ಉನ್ನತ ಶಿಕ್ಷಣ ಪಡೆಯಲು ಹೆಚ್ಚು ವಿದ್ಯಾರ್ಥಿಗಳಿಗೆ ಬ್ಯಾಂಕುಗಳು ಸಾಲ ನೀಡುವ ಮೂಲಕ ಶೈಕ್ಷಣಿಕ ಸಾಲ ಹಂಚಿಕೆಯ ಗುರಿ ಪೂರ್ಣಗೊಳಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಲಾದ 2025-26ನೇ ಸಾಲಿನ ಡಿಎಲ್‌ಆರ್‌ಸಿ ಹಾಗೂ ಡಿಸಿಸಿ ಎರಡನೇ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 2025-26ನೇ ಸಾಲಿಗೆ 33.71 ಕೋಟಿ ರು. ಶೈಕ್ಷಣಿಕ ಸಾಲ ನೀಡುವ ಗುರಿಯನ್ನು ಬ್ಯಾಂಕ್‍ಗಳಿಗೆ ನೀಡಲಾಗಿದೆ. ಆದರೆ ಬ್ಯಾಂಕುಗಳು ಕೇವಲ 3.21 ಕೋಟಿ ರು.ಸಾಲ ವಿತರಣೆ ಮಾಡಿವೆ. ಇದೇ ಮಾದರಿಯಲ್ಲಿ ಗೃಹಸಾಲಕ್ಕೆ ನಿಗದಿ ಪಡಿಸಿದ 163.32 ಕೋಟಿ ರು. ಪೈಕಿ ಕೇವಲ 19.98 ಕೋಟಿ ರು. ಸಾಲ ವಿತರಿಸಲಾಗಿದೆ. ಬ್ಯಾಂಕುಗಳು ಶಿಕ್ಷಣ ಹಾಗೂ ಗೃಹ ನಿರ್ಮಾಣಕ್ಕೆ ಉತ್ತೇಜನ ನೀಡುವ ಮೂಲಕ ಜಿಲ್ಲೆಯ ಪ್ರಗತಿಗೆ ಸಹಕಾರಿಯಾಗಬೇಕು. ಮುಂದಿನ ತ್ರೈಮಾಸಿಕ ಸಭೆಯ ವೇಳೆ ಗುರಿಯನ್ನು ಪೂರ್ಣಗೊಳಿಸಿ ಸಾಲ ಮಂಜೂರಾತಿ ಕುರಿತ ಸಂಪೂರ್ಣ ವಿವರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜೀವನೋಪಾಯಕ್ಕಾಗಿ ಸರ್ಕಾರ ವಿವಿಧ ನಿಗಮ ಮಂಡಳಿಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಬ್ಯಾಂಕ್‍ಗಳು ವಿನಾಕರಣ ಸಾಲ ಮಂಜೂರಾತಿ ನೀಡದೆ ವಿಳಂಬ ನೀತಿ ಅನುಸರಿಸುತ್ತವೆ. ಪಿಎಂಎಫ್ಎಂಇ ಅಡಿ 34, ವಿವಿಧ ನಿಗಮಗಳ ಸಾಲ ಸೌಲಭ್ಯದ ಅಡಿ ಒಟ್ಟು 117 ಅರ್ಜಿಗಳು ಬ್ಯಾಂಕ್‍ಗಳಲ್ಲಿ ಬಾಕಿಯಿವೆ. ಬ್ಯಾಂಕ್ ವ್ಯವಸ್ಥಾಪಕರು ವಾರದ ಒಳಗಾಗಿ ಈ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಕೃಷಿ, ಸಣ್ಣ ಕೈಗಾರಿಕೆಗಳು ಸೇರಿದಂತೆ ಇತರೆ ಆದ್ಯತಾ ವಲಯಗಳಿಗೆ ಸಾಲ ಸೌಲಭ್ಯ ಒದಗಿಸುವಂತೆ ಸಂಸದ ಗೋವಿಂದ ಎಂ ಕಾರಜೋಳ ನಿರ್ದೇಶನ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದ ಜಿಪಂ ಸಿಇಒ ಡಾ.ಆಕಾಶ್ ಬ್ಯಾಂಕುಗಳು ಜಿಲ್ಲೆಯ ನಾಗರಿಕರಿಂದ ಸಂಗ್ರಹಿಸಿದ ಠೇವಣಿಗೆ ಸಂವಾದಿಯಾಗಿ ಶೇ.60ರಷ್ಟು ಸಾಲವನ್ನು ಸ್ಥಳೀಯರಿಗೆ ನೀಡಬೇಕು. ಕೆಲ ಬ್ಯಾಂಕುಗಳು ಸಾಲ ಮಂಜೂರಾತಿ ಅನುಪಾತವನ್ನು ಪಾಲಿಸುತ್ತಿಲ್ಲ. ಇದರೊಂದಿಗೆ ಸಹಾಯ ಧನದೊಂದಿಗೆ ಸಾಲ ಮಂಜೂರು ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೂ ಸಿಬಿಲ್ ಸ್ಕೋರ್ ಮಾನದಂಡ ಪಾಲಿಸುತ್ತಿವೆ. ಬ್ಯಾಂಕುಗಳ ಈ ಪ್ರವೃತ್ತಿ ಬದಲಾಗಬೇಕು. ಈಗಾಗಲೇ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಬ್ಯಾಂಕ್‍ಗಳೊಂದಿಗೆ ಸಮನ್ವಯ ಸಾಧಿಸಲು ಬ್ಯಾಂಕ್ ಸಖಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಎನ್ಆರ್‌ಎಲ್‌ಎಂ ಅಡಿ ಸ್ವ-ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು. ವಾರದಲ್ಲಿ ಬಾಕಿ ಉಳಿದ ಎಲ್ಲಾ ಅರ್ಜಿಗಳನ್ನು ಸಾಲ ಮಂಜೂರಾತಿ ಮಾಡುವಂತೆ ನಿರ್ದೇಶಿಸಿದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಪಿ.ಎಂ.ಎಫ್.ಎಂ.ಇ ಅಡಿ ಜಿಲ್ಲೆಯಲ್ಲಿ 100 ಘಟಕಗಳಿಗೆ ಸಾಲ ಸೌಲಭ್ಯ ನೀಡಲು ಗುರಿ ನಿಗದಿ ಮಾಡಲಾಗಿದೆ. 40 ಅರ್ಜಿಗಳು ಸ್ವೀಕೃತವಾಗಿವೆ. 5 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದ್ದು, 34 ಅರ್ಜಿಗಳು ಬಾಕಿಯಿವೆ. 1 ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪಿ.ಎಂ.ಎಫ್.ಎಂ.ಇ ಯೋಜನೆಗೆ ರಾಜ್ಯ ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸಿರಿಧಾನ್ಯಗಳ ಉದ್ಯಮಕ್ಕೆ ಹೆಚ್ಚಿನ ಅವಕಾಶಗಳು ಇವೆ. ರೈತರು ಕೂಡ ಯೋಜನೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಂಕ್‍ಗಳು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.

ಬ್ಯಾಂಕುಗಳು ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಹಾಗೂ ಇತರೆ ಸರ್ಕಾರದ ಯೋಜನೆಗಳಡಿ ಸಬ್ಸಿಡಿಯೊಂದಿಗೆ ಸಾಲ ಸೌಲಭ್ಯ ನೀಡಲು ವಿಳಂಬ ಮಾಡಬಾರದು. ಈ ಅರ್ಜಿಗಳನ್ನು ಸಿಬಿಲ್ ಸ್ಕೋರ್ ಕಾರಣ ಹೇಳಿ ತಿರಸ್ಕರಿಸಬಾರದು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ.ಎಂ ಹೇಳಿದರು.

ಈ ವೇಳೆ ಆರ್‌ಬಿಐ ಪ್ರಬಂಧಕ ಅರುಣ್ ಕುಮಾರ್, ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನಂತ್.ಕೆ, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಬಂಧಕ ಜನಾರ್ಧನ್, ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು. 1,294 ಅರ್ಜಿಗಳು ಸ್ವೀಕೃತ: ಗಾಯತ್ರಿ ಮಾಹಿತಿ

2025-26ನೇ ಸಾಲಿಗೆ 6,766 ಎಸ್‌ಎಚ್‌ಜಿ ಗಳಿಗೆ ಸಾಲ ಸೌಲಭ್ಯದ ಗುರಿ ನಿಗದಿ ಪಡಿಸಲಾಗಿದೆ. 1,294 ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ 1115 ಎಸ್ಎಚ್‌ಜಿಗಳಿಗೆ ಈಗಾಗಲೇ ಸಾಲ ಸೌಲಭ್ಯ ನೀಡಲಾಗಿದೆ. 150 ಅರ್ಜಿಗಳು ಬಾಕಿದ್ದು, 29 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ ಸಭೆಗೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ