ಬಳ್ಳಾರಿ: ಜನವರಿ 1ರಂದು ಬಳ್ಳಾರಿಯಲ್ಲಿ ಜರುಗಿದ ಬ್ಯಾನರ್ ಗಲಭೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆಗೆ ಒಳಪಡಿಸಬೇಕು. ಪುತ್ಥಳಿ ಅನಾವರಣದ ಕಾರ್ಯಕ್ರಮ ಹಾಳುಗೆಡವಲು ಕೆಲವು ಸ್ಥಾಪಿತ ಹಿತಾಸಕ್ತಿಗಳು ಪೂರ್ವಯೋಜಿತವಾಗಿ ಕೃತ್ಯಗಳ ಬಗೆಗಿನ ಅನುಮಾನಗಳ ಕುರಿತಾಗಿಯೂ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬ್ಯಾನರ್ ಗಲಾಟೆಯಿಂದ ಬಳ್ಳಾರಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ಹಲವು ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ. ಅಕ್ರಮ ಮರಳು ಸಾಗಾಣಿಕೆ ದಂಧೆಯಿಂದಾಗಿ ಬಡಜನರು ಮನೆ ನಿರ್ಮಾಣ ಮಾಡಲು ಮರಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜೂಜು, ಇಸ್ಪೀಟ್ ಕ್ಲಬ್ ಗಳು, ಮಟಕಾ, ಡ್ರಗ್ಸ್, ಗಾಂಜಾ, ವೇಶ್ಯಾವಾಟಿಕೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ಎಲ್ಲ ದಂಧೆಗಳು ರಾಜಕೀಯ ನಾಯಕರ ಬಲವಿಲ್ಲದೆ ನಡೆಯಲು ಸಾಧ್ಯವಿಲ್ಲ. ಆಡಳಿತದ ಬಿಗಿ ಕ್ರಮಗಳು ಇಲ್ಲದಿರುವುದೇ ಈ ಎಲ್ಲ ದಂಧೆಗಳು ನಡೆಯಲು ಪ್ರಮುಖ ಕಾರಣವಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಗೂಂಡಾ ಸಂಸ್ಕೃತಿ ವ್ಯಾಪಕವಾಗಿ ಹೆಚ್ಚುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು. ಪಕ್ಷದ ಪ್ರಮುಖರಾದ ಯು. ಬಸವರಾಜ್, ಜೆ. ಸತ್ಯಬಾಬು, ಎಚ್. ತಿಪ್ಪಯ್ಯ, ಜೆ. ಚಂದ್ರಕುಮಾರಿ, ವಿ.ಎಸ್. ಶಿವಶಂಕರ, ಜೆ.ಎಂ. ಚೆನ್ನಬಸಯ್ಯ ಸೇರಿದಂತೆ ಪಕ್ಷದ ಸದಸ್ಯರು ಭಾಗವಹಿಸಿದ್ದರು.