ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು
ನೀರಿಗಾಗಿ ಮಕ್ಕಳು, ವಯೋವೃದ್ಧರು ಪರದಾಡುವಂತ್ತಾಗಿದೆ. ಕೊಡ ಹಿಡಿದು ಮಹಿಳೆಯರು ಅಲೆದಾಡುತ್ತಿದ್ದಾರೆ. ಗ್ರಾಮದ ಕೆರೆಗಳಿಗೆ ಹೋಗಿ ನೀರು ತರುತ್ತಿದ್ದಾರೆ. ನಿತ್ಯ ಬಳಕೆಗೆ ನೀರು ಇಲ್ಲದೆ ಜನರು ಹೈರಾಣಾಗಿದ್ದಾರೆ.
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ 38 ಗ್ರಾಮದ ಕುಡಿವ ನೀರಿನ ಪಂಪಹೌಸಿಗೆ ನಿಲೋಗಿಪುರದಿಂದ ನೀರು ಸರಬರಾಜಾಗುತ್ತಿದೆ. ನಿಲೋಗಿಪುರದಿಂದ ಕವಲೂರು ಗ್ರಾಮದ ಪಂಪಹೌಸಿಗೆ ನೀರು ಬರುತ್ತದೆ. ಕವಲೂರು ಗ್ರಾಮದಿಂದ ಬನ್ನಿಕೊಪ್ಪಕ್ಕೆ ನೀರು ಸರಬರಾಜಾಗುತ್ತದೆ. ಕವಲೂರು ಗ್ರಾಮದಲ್ಲಿರುವ ಪಂಪಹೌಸಿನ ಮೋಟಾರ್ ಕೆಟ್ಟು ಹೋಗಿವೆ. ಇದರಿಂದ ಐದಾರು ದಿನಗಳಿಂದ ಬನ್ನಿಕೊಪ್ಪ ಗ್ರಾಮಕ್ಕೆ ನೀರು ಬಂದಿಲ್ಲ.ಮೋಟಾರ್ ರಿಪೇರಿ: ನೀರಿನ ಮೋಟಾರ್ ಕೆಟ್ಟಿರುವುದರಿಂದ ಬನ್ನಿಕೊಪ್ಪ ಗ್ರಾಮಕ್ಕೆ ನೀರು ಸರಬರಾಜಾಗುತ್ತಿಲ್ಲ. ಮೋಟಾರ್ ತೊಂದರೆ ಆದ ತಕ್ಷಣ ರಿಪೇರಿ ಕಾರ್ಯ ಆದರೆ ನೀರಿನ ಅಭಾವ ಬನ್ನಿಕೊಪ್ಪ ಗ್ರಾಮಕ್ಕೆ ಆಗುವುದಿಲ್ಲ. ಆದರೆ ಮೋಟಾರ್ ರಿಪೇರಿಗೆ ದಿನಗಳೇ ಕಳೆಯುತ್ತಿರುವುದು ನೀರಿನ ಸಮಸ್ಯೆ ಗ್ರಾಮದಲ್ಲಿ ಬಿಗಡಾಯಿಸುವಂತಾಗಿದೆ.
ಬನ್ನಿಕೊಪ್ಪ ಗ್ರಾಮಕ್ಕೆ ನೀರು ಸರಬರಾಜು ಆಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗ್ರಾಪಂ ಪಿಡಿಒಗೆ ಪೋನ್ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಅಲ್ಲದೆ ಗ್ರಾಪಂಗೆ ಸಹ ಬಂದಿಲ್ಲ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಸಹ ಕೆಟ್ಟು ನಿಂತಿದೆ. ಇದರಿಂದ ಜನರಿಗೆ ನೀರಿನ ತೊಂದರೆ ಸಾಕಷ್ಟು ಆಗುತ್ತಿದೆ ಎಂದು ಬನ್ನಿಕೊಪ್ಪ ಗ್ರಾಮಸ್ಥ ರಾಜು ಮಾಳೆಕೊಪ್ಪ ತಿಳಿಸಿದ್ದಾರೆ.