ಸುವರ್ಣ ಮಹೋತ್ಸವ ಅಂಗವಾಗಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ
ನವರಸ ಕಲೆಗಳಲ್ಲಿ ಪ್ರಮುಖ ಕಲೆಯಾಗಿರುವ ಯಕ್ಷಗಾನ ವಿಶಿಷ್ಟ, ಪರಿಪೂರ್ಣವಾದ ಕಲೆಯಾಗಿದೆ ಎಂದು ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿ ಹೇಳಿದರು.
ತಾಲೂಕಿನ ಹೊನ್ನವಳ್ಳಿ ಹೊಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯ ಆವರಣದಲ್ಲಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ ಆಯೋಜಿಸಿದ್ದ ಸುವರ್ಣ ಮಹೋತ್ಸವ ಅಂಗವಾಗಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಯಕ್ಷಗಾನ ಕಲೆ ಕರಾವಳಿಯಲ್ಲಿ ಹುಟ್ಟಿದರೂ ಮಲೆನಾಡಿನಲ್ಲಿ ತನ್ನ ಜಾಲ ವಿಸ್ತರಿಸಿಕೊಂಡು ತನ್ನದೇ ಆದ ಪ್ರೇಕ್ಷಕ,ಅಭಿಮಾನಿ ವರ್ಗವನ್ನು ಹೊಂದಿದೆ.ಕಲೆಗೆ ಜಾತಿ,ಸೀಮೆ ಎಂಬುದಿಲ್ಲ.ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಆತ ಕಲೆಯಲ್ಲಿ ಮತ್ತಷ್ಟು ತೊಡಗಿ ಕಲೆಯನ್ನು ಬೆಳೆಸಬಲ್ಲ. ಸಂಘಟನೆಗಳ ಇಚ್ಚಾಶಕ್ತಿಯಿಂದ ಮತ್ತು ಕಲೆಯ ಆರಾಧಕರಿಂದ ಯಕ್ಷಗಾನ ಕಲೆ ಬೆಳೆಸಿ ವಿಸ್ತರಿಸಲು ಸಾಧ್ಯ ಎಂದರು. ಕಲಾವಿದರಿಗೆ ಎಳೆಯ ವಯಸ್ಸಿನಲ್ಲಿಯೇ ಒಳ್ಳೆಯ ತರಬೇತಿ ಕೊಟ್ಟರೆ ಕಲೆ ಪರಿಪೂರ್ಣತೆ ಕಾಣಲು ಸಾಧ್ಯ. ಕಲಾಭಿಮಾನಿಗಳು ಅಥವಾ ಕಲಾವಿದರು ತಮ್ಮ ಮಕ್ಕಳಿಗೆ ತಮ್ಮಂತೆ ಕಲಾಭಿಮಾನಿಯೋ ಕಲಾವಿದನಾಗಲು ಪ್ರೋತ್ಸಾಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಚೆಂಡೆವಾದಕ ರಾಮಕೃಷ್ಣ ಮಂದಾರ್ತಿಯವರನ್ನು ಸನ್ಮಾನಿಸಲಾಯಿತು. ಶೇಷಗಿರಿಯಪ್ಪ ಎದುರು ಮನೆ, ಶ್ರೀ ಸುಬ್ರಾಯ ಅರಳುಕೊಂಡಿಗೆ,ಜನಾರ್ದನ ಮಂಡಗಾರು, ವೆಂಕಟೇಶ ಆಚಾರ್ಯ,ರಮೇಶ್,ಸುಬ್ರಮಣ್ಯ,ನಾಗರಾಜ್,ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಚತುರ್ಜನ್ಯ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಿತು.
ಶೃಂಗೇರಿ ಹೊಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು.