ಕನ್ನಡಪ್ರಭ ವಾರ್ತೆ ಮಡಿಕೇರಿ
ಪೌರ ಕಾರ್ಮಿಕರ ಕಷ್ಟ ಸುಖಗಳನ್ನು ವಿಚಾರಿಸುತ್ತ ಅವರ ಅಹವಾಲುಗಳನ್ನು ಆಲಿಸುತ್ತಾ ಮಾತನಾಡಿದ ಶಾಸಕ ಎ.ಎಸ್. ಪೊನ್ನಣ್ಣ, ಪುರಸಭೆ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಆರೋಗ್ಯದಿಂದಿರಲು ಮತ್ತು ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಪ್ರದೇಶಗಳು ಸ್ವಚ್ಛತೆಯಿಂದ ಇರಲು ಈ ಪೌರಕಾರ್ಮಿಕರ ಕೊಡುಗೆ ಬಹುದೊಡ್ಡದಾಗಿದೆ. ಅವರುಗಳ ಕೊಡುಗೆಯನ್ನು ಸದಾ ಸ್ಮರಿಸುತ್ತಾ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಪುರಸಭೆ ವ್ಯಾಪ್ತಿಯ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಶಾಸಕರು, ಪೌರಕಾರ್ಮಿಕರ ಹಿತದೃಷ್ಟಿಯಿಂದ ತಾನು ಸರ್ಕಾರದೊಂದಿಗೆ ಚರ್ಚಿಸಿ ಹಲವಾರು ಕಾರ್ಯಕ್ರಮಗಳನ್ನು ತರಲು ಬದ್ಧನಾಗಿದ್ದು, ಪೌರ ಕಾರ್ಮಿಕರು ಸಹ ಅನಾವಶ್ಯಕ ಮಾತುಗಳಿಗೆ ಕಿವಿಗೊಡದೆ, ಪುರಸಭೆ ವ್ಯಾಪ್ತಿಯ ಸ್ವಚ್ಛತೆ ಕಾಪಾಡುವಲ್ಲಿ ಮತ್ತಷ್ಟು ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದು ಕರೆ ನೀಡಿದರು.ಪೌರಕಾರ್ಮಿಕರಿಗೆ ಭೋಜನವನ್ನು ಸ್ವತಃ ಶಾಸಕರೇ ಮುಂದೆ ನಿಂತು ಬಡಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷರು ಮತ್ತು ಕಾಂಗ್ರೆಸ್ ಸದಸ್ಯರು, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪುಣಚ್ಚ, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.