ಬಂಟರ ಸಮುದಾಯದವರು ಶ್ರಮಜೀವಿಗಳು: ಶಾಸಕ ಕೋನರಡ್ಡಿ

KannadaprabhaNewsNetwork | Updated : Feb 05 2024, 04:45 PM IST

ಸಾರಾಂಶ

ಬಂಟರ ಸಮುದಾಯ ಇಂದು ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮಕ್ಕೆ ಬೆಳೆಯುತ್ತಿದ್ದಾರೆ ಎಂದು ಶಾಸಕ ಕೋನರಡ್ಡಿ ಹೇಳಿದರು.

ಹುಬ್ಬಳ್ಳಿ: ಬಂಟರು ಶ್ರಮಜೀವಿಗಳು. ಕಷ್ಟದಲ್ಲಿರುವ ಜನರನ್ನು ಮೇಲೆತ್ತುವ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಭಾನುವಾರ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಂಟರ ಸಮುದಾಯ ಇಂದು ಸಣ್ಣ ಉದ್ಯಮದಿಂದ ದೊಡ್ಡ ಉದ್ಯಮಕ್ಕೆ ಬೆಳೆಯುತ್ತಿದ್ದಾರೆ. ಶ್ರಮ ವಹಿಸಿ ಉದ್ಯಮವನ್ನು ಆರಂಭಿಸಿ ಯಶ ಕಾಣುವವರು ಎಂದರು.

ಕೊಡುವ ಗುಣ ಎಲ್ಲರಲ್ಲೂ ಬರಬೇಕು. ಅಂದಾಗ ಒಂದು ಸಮಾಜ ಮುಂದೆ ಬರುತ್ತದೆ ಹಾಗೂ ಸಮಾಜ ಬೆಳೆಯುತ್ತದೆ. ಸಂಘಟನೆ ಇದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. 

ಕಷ್ಟಪಟ್ಟಾಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಆ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮುಂದೆ ಬಂದವರು ಬಂಟ ಸಮುದಾಯದವರು. ಆರ್.ಎನ್. ಶೆಟ್ಟಿ ಅವರ ಬಳಿಕವೂ ಅವರಂತೆ ಸಂಘ ಚಟುವಟಿಕೆ ಮುಂದುವರಿಸಿಕೊಂಡು ಹೋಗುತ್ತಿದೆ. ನಿಮ್ಮ ಎಲ್ಲ ಕಾರ್ಯಗಳಿಗೂ ನನ್ನ ಸಹಕಾರವಿದೆ ಎಂದರು.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ನನ್ನ ಊರಿನ ಜನ, ನನ್ನ ಪಕ್ಷ ನನ್ನನ್ನೂ ಶಾಸಕರನ್ನಾಗಿ ಮಾಡಿದ್ದಾರೆ ಹೊರತು ನಾನು ಶಾಸಕನಾಗಿಲ್ಲ. ನಮ್ಮ ಊರಿನ, ಭಾಷೆ ಬಗ್ಗೆ ಸಾಕಷ್ಟು ಅಭಿಮಾನವನ್ನು ಬಂಟರು ಹೊಂದಿದವರಾಗಿದ್ದಾರೆ. 

ಸಮಾಜ ಬಾಂಧವರು ತಮ್ಮ ಮನೆಯಲ್ಲಿ ಹಿರಿಯರನ್ನು ಬಿಟ್ಟು ಉದ್ಯಮಕ್ಕಾಗಿ ಬೇರೆ ಬೇರೆ ಊರಿಗೆ ಹೋಗಿದ್ದಾರೆ. ಅವರೆಲ್ಲ ಮರಳಿ ಬರಬೇಕು. 

ತಮ್ಮ ತಮ್ಮ ಊರಿನಲ್ಲಿ ಉದ್ಯಮ, ಕಂಪನಿ ಆರಂಭಿಸಿ ಇತರರಿಗೆ ಮಾದರಿಯಾಗಬೇಕಿದೆ. ಎಷ್ಟೇ ದೂರ ಹೋದರೂ ತಮ್ಮ ಊರಿನ ಸಂಬಂಧ ಬಿಡಬಾರದು ಎಂದು ಸಲಹೆ ನೀಡಿದರು.

ಉದ್ಯಮಿ ಯು.ಬಿ. ಶೆಟ್ಟಿ ಮಾತನಾಡಿ, ಸಹನೆ ಎಂಬುದು ಬಂಟರ ಒಳಗಿರುವ ದೊಡ್ಡ ಗುಣ. ಎಷ್ಟೇ ಕಷ್ಟ ಬಂದರೂ ಸಹನೆಯಿಂದ ಎಲ್ಲವನ್ನು ಎದುರಿಸುವವರು. ಉದ್ಯೋಗದಲ್ಲಿ, ಜೀವನದಲ್ಲಿ ವ್ಯತ್ಯಾಸವಾದರೆ ಸಹನೆ ಕಳೆದುಕೊಳ್ಳಬಾರದು ಎಂದರು.

ಹು-ಧಾ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿದರು. ಕೀರ್ತಿಶೇಷ ಕೆ. ಶಂಕರ ಶೆಟ್ಟಿಯವರ ಸ್ಮರಣಾರ್ಥ ಅವರ ಸುಪುತ್ರ ಪ್ರಸನ್ನ ಶೆಟ್ಟಿ ಕೊಡಮಾಡುವ ವಿದ್ಯಾರ್ಥಿ ವೇತನ, 2023-24ನೇ ಸಾಲಿನ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಹು-ಧಾ ಬಂಟರ ಸಂಘದ ಉಪಾಧ್ಯಕ್ಷ ಶಾಂತಾರಾಮ ಶೆಟ್ಟಿ, ಯು.ಬಿ. ಶೆಟ್ಟಿ, ಪ್ರಸನ್ನ ಶೆಟ್ಟಿ, ಜಯರಾಮ ಶೆಟ್ಟಿ, ದೀಪಕ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರಶಾಂತ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಅಧ್ಯಕ್ಷ ವಿಠ್ಠಲ್ ಶೆಟ್ಟಿ, ಮಹೇಶ ಶೆಟ್ಟಿ, ರೂಪಾ ಶೆಟ್ಟಿ ಸೇರಿದಂತೆ ಹಲವರಿದ್ದರು.

Share this article