ಧಾರವಾಡ:
ಹಿಂದೂ ಪಂಚಾಂಗದ ಐದನೇ ಮಾಸವಾದ ಶ್ರಾವಣಕ್ಕೆ ಧಾರವಾಡಕ್ಕೆ ವಿಶೇಷ ಅನುಬಂಧವಿದ್ದು, ಹಿರಿಯ ಕವಿ ದ.ರಾ. ಬೇಂದ್ರೆ ಅವರು ಅದನ್ನು ತಮ್ಮ ಕವನಗಳಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದಾರೆ. ಶ್ರಾವಣ ಮಾಸದ ಚೊಚ್ಚಲ ಸೋಮವಾರದ ಭಕ್ತಿ ಅನುಭವಿಸಲು ಧಾರವಾಡದ ಆಧ್ಯಾತ್ಮಿಕ ಮತ್ತು ಪ್ರಕೃತಿ ಪ್ರೇಮಿಗಳ ಗುಂಪೊಂದು ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಸೋಮೇಶ್ವರ ದೇವಸ್ಥಾನದ ವರೆಗೆ ಬೆಳಗಿನ ನಡಿಗೆ ಕೈಗೊಂಡಿತು.ಬೇಂದ್ರೆಯವರ ‘ಬಂತಣ್ಣ ಸಣ್ಣ ಸೋಮವಾರ, ಕಾಣಬೇಕಣ್ಣ ಸೋಮೇಶ್ವರ...’ ಕವಿತೆಯಲ್ಲಿ ಸಾಧನಕೇರಿಯಿಂದ ಸೋಮೇಶ್ವರ ದೇವಸ್ಥಾನದ ವರೆಗಿನ ಸುಮಾರು 8 ಕಿಮೀ ದೂರದ ದೃಶ್ಯಗಳ ವಿವರಣೆಯಿದೆ. ಈ ಕವಿತೆಯಿಂದ ಪ್ರೇರಣೆಗೊಂಡು ಕಳೆದ ನಾಲ್ಕು ವರ್ಷಗಳಿಂದ ಗೆಳೆಯ ಡಿ.ವಿ. ಕಮ್ಮಾರ ಅವರ ಸಲಹೆಯಂತೆ ಶ್ರಾವಣದ ಮೊದಲ ಸೋಮವಾರ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಪಾದಯಾತ್ರೆ ಸಂಘಟಕ ರಾಜಕುಮಾರ ಮಡಿವಾಳರ ಪತ್ರಿಕೆಗೆ ತಿಳಿಸಿದರು. ಆರಂಭದಲ್ಲಿ ನಾಲ್ಕೈದು ಜನರಿಗೆ ಸೀಮಿತವಾಗಿದ್ದ ಈ ಪಾದಯಾತ್ರೆಯು 4ನೇ ವರ್ಷಕ್ಕೆ 30ರ ಆಸುಪಾಸಿನಲ್ಲಿದ್ದು, ಭಜನೆ, ಶಿವನ ಸ್ಮರಣೆ ಮಾಡುತ್ತಾ ಎಂಟು ಕಿಮೀ ನಡಿಗೆ ಮನಸ್ಸಿಗೆ ಮುದ, ಸಮಾಧಾನ ನೀಡುತ್ತದೆ ಎಂದರು.
ಬೆಳಗ್ಗೆ ಸರಿಯಾಗಿ 6.30ಕ್ಕೆ ಉಳವಿ ಚನ್ನಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ಮಾಳಮಡ್ಡಿ, ವೆಂಕಟೇಶ್ವರ ದೇವಸ್ಥಾನ, ತೇಜಸ್ವಿನಗರ ಸೇತುವೆ ಮೂಲಕ ಸಾಗಿ 8ಕ್ಕೆ ಸೋಮೇಶ್ವರ ದೇವಸ್ಥಾನದಲ್ಲಿ ಮುಕ್ತಾಯವಾಯಿತು. ಭಾಗವತರು ಭಜನಾ ತಾಳಗಳನ್ನು ನುಡಿಸುವುದರೊಂದಿಗೆ ಓಂ ನಮಃ ಶಿವಾಯ ಮತ್ತು ಶಿವಾಯ ನಮಃ ಓಂ ಎಂಬ ಮಂತ್ರವನ್ನು ಪಠಿಸುತ್ತಿದ್ದರು. ಗುಂಪಿನಲ್ಲಿ ಅತ್ಯಂತ ಜೂನಿಯರ್ ಆಗಿದ್ದ 10 ವರ್ಷದ ಸಮರ್ಥ ಹಿರೇಮಠ ಹಿರಿಯರ ಹಾದಿಯಲ್ಲಿ ಭಜನೆ ಮಾಡುತ್ತಾ ಸಾಗಿದ್ದು ವಿಶೇಷವಾಗಿತ್ತು.ಶೈಕ್ಷಣಿಕ ಉದ್ಯಮಿ ವಿನಾಯಕ ಜೋಶಿ ಅವರು ಅನೇಕ ಹಿರಿಯ ನಾಗರಿಕರನ್ನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು, ಮತ್ತೊಬ್ಬ ಶೈಕ್ಷಣಿಕ ಉದ್ಯಮಿ ಸತೀಶ ಜಾಧವ್ ಅವರು ಹಿಂದಿರುಗುವಾಗ ಉಪಹಾರದ ವ್ಯವಸ್ಥೆ ಮಾಡಿದರು. ಅನೇಕ ಉದ್ಯಮಿಗಳು, ಶಿಕ್ಷಕರು, ಪತ್ರಕರ್ತರು, ನಿವೃತ್ತ ಅಧಿಕಾರಿಗಳು, ಹಿರಿಯ ನಾಗರಿಕರಾದ ರಾಮಶಾಸ್ತ್ರಿಮಠ, ಆನಂದ ಕುಲಕರ್ಣಿ, ಕಲಾವಿದ ಮಂಜುನಾಥ ಹಿರೇಮಠ, ವಿಜಯ ದೊಡ್ಡಮನಿ, ಸುಧೀಂದ್ರ ದೇಶಪಾಂಡೆ, ನಾಗೇಶ ಬಡಿಗೇರ, ದೇವಪ್ಪ ಅಬ್ಬಿಗೇರ, ಅರವಿಂದ ದೇಶಮುಖ, ಮಾಜಿ ಸೈನಿಕ ಶಂಕರ, ರಾಜೇಂದ್ರಮಠ ಸೇರಿದಂತೆ ಹಲವರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.