ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ದಸರಾ ಉದ್ಘಾಟನೆ ಆಯ್ಕೆ ವಿಚಾರದಲ್ಲಿ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ಉಂಟು ಮಾಡಿ ಮುಸ್ಲಿಂ ಮಹಿಳೆಯಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.ಅವರು ಪಟ್ಟಣದ 40 ಅಡಿ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ ಬೈಕ್ ಜಾಥ ಕಾರ್ಯಕ್ರಮದಲ್ಲಿ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿರುವುದು ಹಿಂದೂ ಧರ್ಮ ದೇವತೆ ಹಿಂದೂ ಧರ್ಮಕ್ಕೆ ಸೇರಿದ್ದು. ದಸರಾ ಕೂಡಾ ಒಂದು ಹಿಂದೂ ಧಾರ್ಮಿಕ ಸಂಸ್ಕೃತಿಯ ಆಚರಣೆ ಆಗಿದೆ. ಈ ನಿಟ್ಟಿನಲ್ಲಿ ಹಿಂದೂ ಸಂಪ್ರದಾಯದ ವ್ಯಕ್ತಿಗಳನ್ನೇ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದರೆ ಸರಿ ಇರುತ್ತಿತ್ತು.
ಆದರೆ ರಾಜ್ಯ ಸರ್ಕಾರ ರಾಜಕೀಯ ಮಾಡುತ್ತಿದ್ದು, ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಮೇಲು ಕೂಡ ಎಡಪಂತಿಯರು ದೇಶಾದ್ಯಂತ ಸುಳ್ಳು ಸುದ್ದಿ ಹಬ್ಬಿಸಲು ಬುರುಡೆ ಪ್ರಕರಣವನ್ನು ಮುಂಚೂಣಿಗೆ ತಂದರು. ಆದರೆ, ಸತ್ಯತೆ ಹೊರಬಂದ ನಂತರ ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗಡೆಯವರ ಪಾತ್ರ ಏನು ಇಲ್ಲ ಎಂಬುದು ಸಾಬೀತಾಗಿದೆ. ರಾಜ್ಯದಲ್ಲಿ ಹಿಂದುಗಳ ಮೇಲೆ ಆಗುತ್ತಿರುವ ಅನ್ಯಾಯ ಖಂಡನೀಯ.ಈ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಟ್ಟಿಗೆ ಸೇರಿ ಹಿಂದೂಗಳ ಮೇಲೆ ರಾಜ್ಯದಲ್ಲಿ ಅನ್ಯಾಯವಾದರೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಾಗುವುದು. ಮದ್ದೂರಿನಲ್ಲಿ ಗಣಪತಿ ಉತ್ಸವದ ಸಂದರ್ಭದಲ್ಲಿ ಆದಂತಹ ಪ್ರಕರಣಕ್ಕೆ ರಾಜ್ಯ ಸರ್ಕಾರ ನೇರ ಹೊಣೆಯಾಗಲಿದೆ ಹಿಂದೂಗಳ ಮೇಲೆ ಕಲ್ಲುತೂರಾಟ ಬೆಂಕಿ ಹಚ್ಚಿ ಅವರ ಧಾರ್ಮಿಕ ಭಾವನೆಗೆ ಕಿಡಿ ಹಚ್ಚುವ ಕೆಲಸವನ್ನ ಬಿಡಬೇಕು ಎಂದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್ ನಿಂಬೇಹಳ್ಳಿ ಮಾತನಾಡಿ, ಶಾಂತಿ ಸಾಮರಸ್ಯದ ನಾಡಾಗಿದ್ದ ರಾಜ್ಯವನ್ನು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರನ್ನು ಓಲೈಸುವ ದೃಷ್ಟಿಯಿಂದ ತಾಯಿ ಕನ್ನಡ ಭುವನೇಶ್ವರಿಯಲ್ಲಿ ನಂಬಿಕೆ ಇಲ್ಲದಿರುವ ಬಾನು ಮುಷ್ತಾಕ್ ಅವರನ್ನು ನಾಡದೇವತೆಯಾಗಿರುವ ಶ್ರೀ ಚಾಮುಂಡೇಶ್ವರಿಯ ಉದ್ಘಾಟನೆಗೆ ಆಹ್ವಾನ ಮಾಡಿರುವುದು ಖಂಡನೀಯ. ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆಯಲ್ಲಿ ಕಲ್ಲು ಎಸೆದಿರುವುದು ಕ್ಷಮಿಸಲಾರದ ಘಟನೆ.
ಶ್ರೀ ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಜೆಸಿಬಿ ಅನ್ನು ನುಗ್ಗಿಸಿ ಎಂದವರ ಮೇಲೆ ಕೇಸ್ ಹಾಕಿ ಬಂದಿಸದೆ ಧರ್ಮಸ್ಥಳ ದೇವಸ್ಥಾನಕ್ಕೆ ಕಲ್ಲು ಒಡೆಯಿರಿ ಎಂದವರ ಮೇಲೆ ಕೇಸ್ ಹಾಕಿ ಬಂಧಿಸದೆ ಹಿಂದು ಧಾರ್ಮಿಕ ಭಾವನೆ ಮೇಲೆ ಧಕ್ಕೆ ತಂದಿರುವರನ್ನು ಬಂಧಿಸದೆ ಪ್ರಶ್ನೆ ಮಾಡಿದವರ ಹಿಂದೂ ಮುಖಂಡರ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಿ ಅವರ ಮೇಲೆ ಕೇಸ್ ದಾಖಲು ಮಾಡಿ ಬಂಧಿಸಿರುವುದು ಖಂಡನೀಯ. ಕೂಡಲೇ ರಾಜ್ಯ ಗೃಹ ಮಂತ್ರಿಗಳು ಎಚ್ಚೆತ್ತುಕೊಂಡು ಸರಿಪಡಿಸದೇ ಇದ್ದಲ್ಲಿ ಇಡೀ ರಾಜ್ಯದಲ್ಲಿ ಜನತೆಯನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಈ ಮೂಲಕ ಕೊಡುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಆರ್‌ಎಸ್‌ಎಸ್ ಮುಖಂಡ ಗಜಾನನ ಮನೋಹರ್, ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ, ನುಗ್ಗೇಹಳ್ಳಿ ಹಿರೇಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಬ್ಬರಿ ಮಂಡಿ ಶಂಕರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಹಿರಿಬಿಳ್ತಿ ಮಾತನಾಡಿದರು.ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಸಂಚಾಲಕ ಮೀಸೆಮಂಜಣ್ಣ, ತಾಲೂಕು ಬಿಜೆಪಿ ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಎಂ.ಪಿ. ಪ್ರಶಾಂತ್, ಮುಖಂಡರಾದ ನಂದೀಶ್, ರಘುರಾಜೇಗೌಡ, ಬಾಸ್ಕರಚಾರ್, ವಿದ್ಯಾಪ್ರಸಾದ್, ಗಿರೀಶ್ ತುಬಿನಕೆರೆ, ದೀಕ್ಷಿತ್ ಜಿ., ಮನು, ಪ್ರಸನ್ನ, ದುಶ್ಯಂತ್, ಯೋಗೇಶ್, ಉಮೇಶ್, ಕುಸುಮ, ಶೋಭಾ, ಲತಾ, ಸಂಜಯ್, ಕುಮಾರ್, ರವಿ, ಪ್ರಕಾಶ್ ಜಿ , ಚಂದ್ರು ಮತ್ತಿತರಿದ್ದರು.