ಶ್ರೀ ದೇವಿ - ಸಸಿಹಿತ್ಲು ಭಗವತಿಯರ ಭೇಟಿ । ಬಾಲಿವುಡ್ ನಟ ಸುನಿಲ್ ಶೆಟ್ಟಿ ಭಾಗಿ
ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಬ್ರಹ್ಮ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಶುಕ್ರವಾರ ರಾತ್ರಿ ಶ್ರೀ ದೇವರ ಉತ್ಸವ ಬಲಿ, ಪಲ್ಲಕಿ ಉತ್ಸವ, ಬಳಿಕ ದೇವಿ ಮತ್ತು ಸಸಿಹಿತ್ಲು ಭಗವತಿಯರ ಭೇಟಿಯಾಗಿ ಬ್ರಹ್ಮರಥೋತ್ಸವ ನಡೆದು, ಚಂದ್ರ ಶ್ಯಾನುಭೋಗರ ಕುದ್ರುವಿನಲ್ಲಿ ಜಳಕವಾಗಿ ಬಳಿಕ ದೇವಳದಲ್ಲಿ ಜಳಕದ ಬಲಿ ನಂತರ ಧ್ವಜಾವರೋಹಣ ನಡೆಯಿತು.ಈ ಸಂದರ್ಭ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅತ್ತೂರು ರಾಘವೇಂದ್ರ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ದೇವಳದ ಆನುವಂಶಿಕ ಮೊಕ್ತೇಸರ ಹಾಗೂ ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು, ಕಾರ್ಯ ನಿರ್ವಹಣಾಧಿಕಾರಿ ಶ್ವೇತ ಪಳ್ಳಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ನಾಗೇಶ್ ಬಪ್ಪನಾಡು, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ರಥೋತ್ಸವ ಸಂದರ್ಭ ಶನಿವಾರ ಬೆಳಗ್ಗಿನ ಜಾವ 1.40ರಿಂದ 2 ಗಂಟೆ ವೇಳೆ ರಥ ಪ್ರದಕ್ಷಿಣೆ ನಡೆಯುತ್ತಿದ್ದ ವೇಳೆ ರಥದ ಮೇಲಿನ ಭಾಗ ಸಂಪೂರ್ಣ ಕುಸಿದು ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ಅವಘಡದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.ಘಟನೆ ನಡೆಯುವ ಸಂದರ್ಭ ತಂತ್ರಿಗಳು, ಅರ್ಚಕರು ರಥದಲ್ಲಿಯೇ ಕುಳಿತಿದ್ದರು. ಕೆಳಗಡೆ ಸಾವಿರಾರು ಮಂದಿ ಭಕ್ತರು ರಥ ಎಳೆಯುವುದರಲ್ಲಿ ತಲ್ಲೀನರಾಗಿದ್ದರು. ರಥವನ್ನು ನಿಗ್ರಹಿಸುವ ದಂಡ ತುಂಡಾದ ಪರಿಣಾಮ ರಥದ ಮೇಲ್ಭಾಗ ಸಂಪೂರ್ಣ ಧರೆಗೆ ಉರುಳಿದೆ. ನಂತರ ರಥದ ಪ್ರದಕ್ಷಿಣೆಯನ್ನು ಚಂದ್ರ ಮಂಡಲ ರಥದಲ್ಲಿ ಮುಂದುವರಿಸಲಾಯಿತು.ಕೋಟ್
। ಮೋಹನದಾಸ ಸುರತ್ಕಲ್, ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ