ವಕೀಲರ ಸಂಘ ಸದಸ್ಯತ್ವ ರದ್ದು; ಕಾನೂನು ಹೋರಾಟ

KannadaprabhaNewsNetwork |  
Published : Feb 05, 2026, 01:30 AM IST
4ಕೆಡಿವಿಜಿ2-ದಾವಣಗೆರೆಯ ಹಿರಿಯ ವಕೀಲ ಗುಮ್ಮನೂರು ಕೆ.ಎಂ.ಮಲ್ಲಿಕಾರ್ಜುನಪ್ಪ. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲಾ ವಕೀಲರ ಸಂಘದಲ್ಲಿ ತಮ್ಮ ಸದಸ್ಯತ್ವ ರದ್ದುಪಡಿಸಿ ಕೈಗೊಂಡ ಕ್ರಮದ ನಿರ್ಣಯ ಕಾನೂನು ಬಾಹಿರ. ಅಡ್ವೋಕೇಟ್ ಆಕ್ಟ್‌ಗೆ ವಿರುದ್ಧವಾಗಿದೆ. ತಮ್ಮ ಸದಸ್ಯತ್ವ ರದ್ದು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಹೇಳಿದ್ದಾರೆ.

- ನಾನೇಕೆ ತಪ್ಪಾಯಿತೆಂದು ಕೇಳಿಕೊಳ್ಳಲಿ: ವಕೀಲ ಮಲ್ಲಿಕಾರ್ಜುನಪ್ಪ ಗುಮ್ಮನೂರು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲಾ ವಕೀಲರ ಸಂಘದಲ್ಲಿ ತಮ್ಮ ಸದಸ್ಯತ್ವ ರದ್ದುಪಡಿಸಿ ಕೈಗೊಂಡ ಕ್ರಮದ ನಿರ್ಣಯ ಕಾನೂನು ಬಾಹಿರ. ಅಡ್ವೋಕೇಟ್ ಆಕ್ಟ್‌ಗೆ ವಿರುದ್ಧವಾಗಿದೆ. ತಮ್ಮ ಸದಸ್ಯತ್ವ ರದ್ದು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.3ರಂದು ಹೊಸ ವರ್ಷದ ಸಮಾರಂಭದಲ್ಲಿ ವಕೀಲರು, ನ್ಯಾಯಾಧೀಶರ ಸಮಕ್ಷಮ ಮಾತನಾಡುತ್ತಿದ್ದೆ. ಈ ವೇಳೆ ವಕೀಲರಿಗೆ ಆರೋಗ್ಯ ಮತ್ತು ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಬಗ್ಗೆ ಆಡಿದ ಮಾತಿಗೆ ವಕೀಲರಾದ ಟಿ.ಆರ್. ಗುರುಬಸವರಾಜ, ಎಲ್. ಶ್ಯಾಮ್‌, ಡಿ.ಆರ್. ಪ್ರಭಾಕರ್ ಅಡ್ಡಿಪಡಿಸಿದರು. ಅಲ್ಲದೇ, ಜಾತಿ ನಿಂದನೆ, ಅವಾಚ್ಯ ಶಬ್ಧಗಳಲ್ಲಿ ನಿಂದನೆ, ಪ್ರಾಣ ಬೆದರಿಕೆ ಹಾಕಿದ್ದರಿಂದ ದೂರು ನೀಡಿದ್ದಾಗಿ ಹೇಳಿದರು.

ಯಾವುದೇ ಕ್ರಮ ಜರುಗಿಸಿಲ್ಲ:

ನ್ಯಾಯಾಧೀಶರು, ನ್ಯಾಯವಾದಿಗಳ ಸಮಕ್ಷಮ ಘಟನೆ ನಡೆದಿದೆ. ಈ ಬಗ್ಗೆ ಡಿಸಿಆರ್‌ಇ ಜಿಲ್ಲಾ ವರಿಷ್ಠಾಧಿಕಾರಿಗಳು, ನಾಗರೀಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಹಾಗೂ ಪರಿಶಿಷ್ಟ ಜಾತಿ- ಪಂಗಡಗಳ ನಿರ್ದೇಶನಾಲಯ, ರಾಜ್ಯ, ರಾಷ್ಟ್ರ ಹಾಗೂ ಮಾನವ ಹಕ್ಕುಗಳ ಆಯೋಗ, ರಾಜ್ಯ, ರಾಷ್ಟ್ರ ಹಾಗೂ ದಾವಣಗೆರೆ ಜಿಲ್ಲಾ ಸತ್ರ ನ್ಯಾಯಾಧೀಶರಿಗೆ ಆಡಳಿತಾತ್ಮಕ ನ್ಯಾಯಮೂರ್ತಿಗಳು, ಎಸ್‌ಪಿ, ಪೂರ್ವ ವಲಯ ಐಜಿಪಿ ಅವರಿಗೆ ದೂರು ನೀಡಿದ್ದೆ. ಆದರೆ, ಈವರೆಗೆ ಯಾವುದೇ ಕ್ರಮ ಆಗಿಲ್ಲ ಎಂದು ದೂರಿದರು.

ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ಕಾನೂನುಬಾಹಿರವೆಂದು ದೂರು ನೀಡಿದ್ದೆ. ಆಗ ನಾನೊಬ್ಬನೇ ದೂರು ಕೊಟ್ಟಿರಲಿಲ್ಲ. ಪರಾಜಿತ ಮತ್ತೊಬ್ಬ ಅಭ್ಯರ್ಥಿಯೂ ದೂರು ನೀಡಿದ್ದರು. ಅನಂತರ ಈ ಬಗ್ಗೆ ಕೆಳ ನ್ಯಾಯಾಲಯದಲ್ಲೂ ದೂರು ದಾಖಲಾಗಿತ್ತು. 2 ಸಲ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದ ನಾನು ಮತ್ತೆ ಮುಂದೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ, ಅನುಕಂಪದಿಂದ ಗೆಲ್ಲುತ್ತೇನೆಂಬ ಕಾರಣಕ್ಕೆ ಕೆಲವರು ಸಂಘದ ಸದಸ್ಯತ್ವದಿಂದ ನನ್ನ ಹೆಸರನ್ನು ರದ್ದುಪಡಿಸಿದ್ದಾರೆ. ಈ ಬಗ್ಗೆಯೂ ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಮಲ್ಲಿಕಾರ್ಜುನಪ್ಪ ಹೇಳಿದರು.

ಈ ಹಿಂದೆ ಸಂಘದ ಚುನಾವಣೆ ವಿಚಾರವಾಗಿ ಪ್ರಾಧಿಕಾರಕ್ಕೆ ನಾನು ಕೊಟ್ಟ ದೂರು ಹಾಗೂ ಸಂಬಂಧಿಸಿದ ನ್ಯಾಯಾಲಯಗಳಲ್ಲಿ, ಸಂಬಂಧಿಸಿದ ಪೊಲೀಸ್ ಇಲಾಖೆ ಹಾಗೂ ನ್ಯಾಯಾಲಯದಲ್ಲಿ ಸಲ್ಲಿಸಿರುವ ದಾವಾ ಈ ಎಲ್ಲ ಕಾರಣಕ್ಕೆ ಸಂಘದ ಸದಸ್ಯತ್ವದಿಂದ ನನ್ನ ಹೆಸರನ್ನು ರದ್ದುಪಡಿಸಿದ್ದಾರೆ. ಸಂಘದ ಅಧ್ಯಕ್ಷ ಟಿ.ಆರ್. ಗುರುಬಸವರಾಜ ಸೇರಿದಂತೆ ಕೆಲವರು ನನ್ನನ್ನು ಸಂಪರ್ಕಿಸಿ, ನಾನು ಮಾತನಾಡಿದ್ದು ತಪ್ಪೆಂದು ಒಂದು ಮಾತು ಹೇಳುವಂತೆ ಸಲಹೆ ನೀಡಿದರು. ಆದರೆ, ತಪ್ಪನ್ನೇ ಮಾಡದಿರುವ ನಾನೇಕೆ ನನ್ನ ತಪ್ಪಾಯಿತೆಂದು ಕೇಳಿಕೊಳ್ಳಲಿ ಎಂದು ಪ್ರಶ್ನಿಸಿದರು.

ಇದೇ ಕಾರಣಕ್ಕೆ ಸಂಘದ ಬೈಲಾದ ಪ್ರಕಾರ ಅತ್ಯಂತ ಹಿರಿಯ ವಕೀಲರು ಶಿಸ್ತು ಸಮಿತಿಯಲ್ಲಿರಬೇಕು. ಆದರೆ, ಸಂಘದ ಸ್ಥಾನ ಆಕಾಂಕ್ಷಿ ವಕೀಲರೊಬ್ಬರ ಸಹೋದರ ಶಿಸ್ತು ಸಮಿತಿಯಲ್ಲಿದ್ದು, 1200 ವಕೀಲರಿರುವ ದಾವಣಗೆರೆಯಲ್ಲಿ ಬೇರೆ ಯಾವುದೇ ಹಿರಿಯ ವಕೀಲರೇ ಸಿಗಲಿಲ್ಲವೇ ಎಂದು ಕಿಡಿಕಾರಿದರು.

ವಕೀಲರ ಸಂಘದ ಸದಸ್ಯತ್ವ ರದ್ದುಪಡಿಸಿ, ಕೆಲವರು ನಿರ್ಣಯ ಕೈಗೊಂಡ ಬಗ್ಗೆ ನನ್ನ ಕಕ್ಷಿದಾರರು, ಸಾರ್ವಜನಿಕರು ಆತಂಕಪಡಬೇಕಾಗಿಲ್ಲ. ನ್ಯಾಯ ಕೊಡಿಸಲು ಯಾವುದೇ ತೊಂದರೆಯೂ ಇಲ್ಲ. ನನ್ನ ಕಕ್ಷಿದಾರರ ಪರವಾಗಿ ವಾದ ಮಂಡನೆ ಮಾಡುತ್ತೇನೆ ಎಂದು ಕೆ.ಎಂ.ಮಲ್ಲಿಕಾರ್ಜುನಪ್ಪ ಪುನರುಚ್ಛರಿಸಿದರು.

- - -

-4ಕೆಡಿವಿಜಿ2: ಕೆ.ಎಂ.ಮಲ್ಲಿಕಾರ್ಜುನಪ್ಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?