ಬೆಚ್ಚಿ ಬೀಳಿಸಿದ ಬಾಣಂತಿಯರ ಸಾವು

KannadaprabhaNewsNetwork |  
Published : Nov 17, 2024, 01:20 AM IST
ಬಳ್ಳಾರಿಯ ಬಿಮ್ಸ್‌ ಆಸ್ಪತ್ರೆಯ ಬಾಣಂತಿಯರ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು.  | Kannada Prabha

ಸಾರಾಂಶ

ಬಾಣಂತಿಯರ ಸಾವು ಮೆಡಿಕಲ್ ರಿಯಾಕ್ಷನ್‌ ಹಾಗೂ ವೈದ್ಯಕೀಯ ನಿರ್ಲಕ್ಷ್ಯದಿಂದಾದ ಅವಘಡ ಎಂಬ ಗುಮಾನಿ ಮೂಡಿದೆ.

ಬಳ್ಳಾರಿ: ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಾದ ಬಾಣಂತಿಯರ ಸಾವು ಪ್ರಕರಣ ಬೆಚ್ಚಿ ಬೀಳಿಸಿದ್ದು, ಸರಣಿ ಸಾವಿನ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಾಣಂತಿಯರ ಸಾವು ಮೆಡಿಕಲ್ ರಿಯಾಕ್ಷನ್‌ ಹಾಗೂ ವೈದ್ಯಕೀಯ ನಿರ್ಲಕ್ಷ್ಯದಿಂದಾದ ಅವಘಡ ಎಂಬ ಗುಮಾನಿ ಮೂಡಿದೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಆಸ್ಪತ್ರೆಗೆ ಪೂರೈಕೆ ಮಾಡಿದ ಐವಿ ಫ್ಯೂಯಿಡ್ ಹಾಗೂ ಎನ್‌ಎಸ್‌ಎಲ್‌ ಗ್ಲುಕೋಸ್‌ ಬಳಕೆಯೇ ಬಾಣಂತಿಯರ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಸರ್ಕಾರ ಪೂರೈಕೆ ಮಾಡುವ ಐವಿ ಪ್ಯೂಯಿಡ್ ಹಾಗೂ ಎನ್‌ಎಸ್‌ಎಲ್ ಗ್ಲುಕೋಸ್ ಗುಣಮಟ್ಟದಿಂದ ಕೂಡಿಲ್ಲ ಎಂಬ ಕಾರಣಕ್ಕಾಗಿಯೇ ಈ ಗ್ಲುಕೋಸ್ ಪೂರೈಕೆ ಕಂಪನಿಯನ್ನು ಈ ಹಿಂದೆ ಬ್ಲ್ಯಾಕ್ ಲಿಸ್ಟ್‌ಗೆ ಇಡಲಾಗಿತ್ತು. ಆದರೆ, ಇದೇ ಕಂಪನಿಯಿಂದ ಖರೀದಿಸಲಾದ ಗ್ಲುಕೋಸ್ ಬಳಕೆಯಿಂದಾಗಿಯೇ ಬಾಣಂತಿಯರ ಆರೋಗ್ಯದಲ್ಲಿ ಸಮಸ್ಯೆ ಉಲ್ಬಣಿಸಿದೆ ಎಂಬ ಮಾತುಗಳು ವೈದ್ಯಕೀಯ ವಲಯದಲ್ಲಿಯೇ ಕೇಳಿ ಬರುತ್ತಿವೆ. ಜಿಲ್ಲಾಸ್ಪತ್ರೆಯಲ್ಲಾದ ಸಾವಿನ ಪ್ರಕರಣದ ತನಿಖೆಗೆ ಸರ್ಕಾರ ತನಿಖಾ ತಂಡವನ್ನು ರಚಿಸಿದ್ದು, ನಾನಾ ಆಯಾಮಗಳಲ್ಲಿ ತನಿಖಾ ನಡೆಸಿ ತೆರಳಿಲಿದೆ. ಪ್ರಕರಣದ ಪೂರ್ಣ ತನಿಖೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಬಾಣಂತಿಯರ ಸಾವಿನ ಅಸಲಿ ವಿಷಯ ಬೆಳಕಿಗೆ ಬರಲಿದೆ.

ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿತ್ತು ಜಿಲ್ಲಾಸ್ಪತ್ರೆ:

ನಗರದ ಸರ್ಕಾರಿ ಜಿಲ್ಲಾಸ್ಪತ್ರೆ ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಿದೆ. ಆಸ್ಪತ್ರೆಯಲ್ಲಿನ ಸ್ವಚ್ಛತೆ, ವೈದ್ಯಕೀಯ ಸೇವೆಗಾಗಿಯೇ ಜಿಲ್ಲಾಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿಯೂ ಸಂದಿದೆ. ಹೆರಿಗೆ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಗಮನ ಸೆಳೆದಿದೆ. ಇಲ್ಲಿನ ಗುಣಮಟ್ಟ ಚಿಕಿತ್ಸೆ ಲಭ್ಯತೆಯಿಂದಾಗಿಯೇ ಐಎಎಸ್, ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಅನೇಕರು ಇಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆ ಸೇರಿದಂತೆ ನೆರೆಯ ಗಡಿಭಾಗದ ಆಂಧ್ರಪ್ರದೇಶದ ಸಾವಿರಾರು ಜನರು ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಾರೆ. ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಪ್ರತಿನಿತ್ಯ ಸರಾಸರಿ 20ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಹಾಗೂ ಸಾಮಾನ್ಯ ಹೆರಿಗೆಗಳು ಸುಸೂತ್ರವಾಗಿ ನಡೆಯುತ್ತವೆ. ನಿತ್ಯ 1300ಕ್ಕೂ ಹೆಚ್ಚು ಹೊರರೋಗಿಗಳು ಇಲ್ಲಿ ವೈದ್ಯಕೀಯಸೇವೆ ಪಡೆಯುತ್ತಾರೆ. ಆದರೆ, ನವೆಂಬರ್ 9ರಿಂದ 12ರ ವರೆಗೆ ನಡೆದ ಶಸ್ತ್ರಚಿಕಿತ್ಸೆ ವೇಳೆಯಲ್ಲಾದ ಐವರು ಬಾಣಂತಿಯರ ಆರೋಗ್ಯ ಸ್ಥಿತಿ ಗಂಭೀರ ಪ್ರಕರಣ ಹಾಗೂ ಮೂವರು ಸಾವುಗಳು ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆ.

ಗರ್ಭಿಣಿಗೆ ಸೀಜರಿನ್ ಮೂಲಕ ಹೆರಿಗೆಯಾದ ಬಳಿಕ ಆಪರೇಷನ್ ಥೇಟರ್‌ನಲ್ಲಿ ಇನ್‌ಫೆಕ್ಷನ್ ಆಗಿರುವ ಸಾಧ್ಯತೆಯಿದೆ. ಜಿಲ್ಲಾಸ್ಪತ್ರೆಯಲ್ಲಿ ಒಟಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಬಾಣಂತಿಯರು ದಾಖಲಾಗಿದ್ದ ಒಟಿ ಕೊಠಡಿಯಿಂದ ಮತ್ತೊಂದು ಕೊಠಡಿಗೆ ಶಿಫ್ಟ್‌ ಮಾಡಿರುವುದು ಹಾಗೂ ಕೊಠಡಿಯಲ್ಲಿ ನಿರ್ದಿಷ್ಟ ವೈದ್ಯಕೀಯ ಸೌಕರ್ಯಗಳು ಇರಲಿಲ್ಲ ಎಂಬ ಗುಮಾನಿಯೂ ಇದೆ. ಬಿಮ್ಸ್ ಆಸ್ಪತ್ರೆಗೆ ದಾಖಲಾದ 7 ಜನರ ಪೈಕಿ ಮೂವರು ಆರೋಗ್ಯವಾಗಿದ್ದು, ಸುಮಯಾ ಎಂಬುವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಖಚಿತಪಡಿಸಿವೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ರಾಜ್ಯ ಸರ್ಕಾರ ಮೂವರು ವೈದ್ಯರ ತನಿಖಾ ತಂಡವನ್ನು ರಚನೆ ಮಾಡಿತ್ತು. ತನಿಖೆಯೂ ಪೂರ್ಣಗೊಂಡಿದ್ದು ತನಿಖಾ ತಂಡ ಸರ್ಕಾರದ ಅಧೀನ ಕಾರ್ಯದರ್ಶಿಗೆ ವರದಿ ಸಲ್ಲಿಸಿದೆ. ಇನ್ನೆರಡು ದಿನದಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ 7 ಬಾಣಂತಿಯರ ಪೈಕಿ ಮೂವರು ಮೃತಪಟ್ಟಿದ್ದಾರೆ. ಉಳಿದವರ ಆರೋಗ್ಯ ಸುಧಾರಣೆಯಾಗಿದೆ. ಸಾವು ಸಂಭವಿಸಿರುವ ಕುರಿತು ತನಿಖಾ ವರದಿಯಿಂದಷ್ಟೇ ಗೊತ್ತಾಗಬೇಕಾಗಿದೆ. ಈಗಾಗಲೇ ಜಿಲ್ಲಾಸ್ಪತ್ರೆ ಹಾಗೂ ಬಿಮ್ಸ್‌ಗೆ ತೆರಳಿ ಪರಿಶೀಲಿಸಿರುವೆ. ತನಿಖೆ ವರದಿ ಬಂದ ಬಳಿಕ ಮುಂದೇನು ಮಾಡಬೇಕು ಎಂಬುದರ ಕುರಿತು ಆಲೋಚಿಸಿ, ಕ್ರಮ ವಹಿಸುತ್ತೇನೆ ಎನ್ನುತ್ತಾರೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ