ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೇಸತ್ತಿದ್ದ ಇಂಡಿ ಮತಕ್ಷೇತ್ರದ ಗ್ರಾಮಗಳ ಜನರು ಇದೀಗ ಸಂತಸಗೊಂಡಿದ್ದಾರೆ. ರೈತರು ಕೂಡ ಈಗ ಸಂತಸದಲ್ಲಿದ್ದಾರೆ. ತಾಲೂಕಿನಲ್ಲಿ ಈಗಾಗಲೇ 13 ವಿದ್ಯುತ್ ವಿತರಣಾ ಕೇಂದ್ರಗಳು ಕಾಯಾರಂಭ ಮಾಡಿದ್ದು, ಇದರಿಂದ ಬಹುತೇಕ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಕಳೆದ 2013ಕ್ಕಿಂತ ಮುಂಚೆ ತಾಲೂಕಿನ ರೋಡಗಿ, ಮಿರಗಿ, ಖೇಡಗಿ, ಲಾಳಸಂಗಿ, ಶಿವಪೂರ, ಹಿರೇಮಸಳಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ದೀಪಗಳು ಚಿಮಣಿ ದೀಪದಂತೆ ಉರಿಯುತ್ತಿದ್ದವು. ವಿದ್ಯುತ್ ಕೊರತೆಯಿಂದ ರೈತರು ರಾತ್ರಿ ತ್ರಿಫೇಸ್ ವಿದ್ಯುತ್‌ಗಾಗಿ ಕಾಯುತ್ತಿದ್ದರು. ಇಂಡಿ ಮತಕ್ಷೇತ್ರಕ್ಕೆ 2013ರಿಂದ ಶಾಸಕರಾಗಿ ಆಯ್ಕೆಯಾದ ಯಶವಂತರಾಯಗೌಡ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ವಿದ್ಯುತ್ ಕೊರತೆ ನೀಗಿಸಲು ಕೈಗೊಂಡ ಕ್ರಮಗಳಿಂದಾಗಿ ಇಂದು ಜಿಲ್ಲೆಯ ಯಾವುದೇ ಮತಕ್ಷೇತ್ರದಲ್ಲಿ ಇಲ್ಲದಷ್ಟು ವಿದ್ಯುತ್ ವಿತರಣಾ ಕೇಂದ್ರಗಳು ಇಂಡಿ ತಾಲೂಕಿನಲ್ಲಿ ಕಾರ್ಯಾರಂಭ ಮಾಡಿವೆ. ಇಂಡಿ ಮತಕ್ಷೇತ್ರದ ಯಾವುದೇ ಗ್ರಾಮದಲ್ಲಿ ಕಡಿಮೆ ವೋಲ್ಟೇಜ್ ಬರುವ ಯಾವ ಗ್ರಾಮವೂ ಸಿಗುವುದಿಲ್ಲ. ಇಲ್ಲಿನ ಹೆಸ್ಕಾಂ ಎಇಇ ಸಂಗಮನಾಥ ಮೇಡೆಗಾರ ಅವರ ಪರಿಶ್ರಮದಿಂದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಎಲ್ಲ ಭಾಗಕ್ಕೂ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿದೆ. ವಿದ್ಯುತ್ ಕೊರತೆ ಕುರಿತು ರೈತರಿಂದ ಕರೆ ಬಂದರೆ ಕೂಡಲೇ ಸ್ಪಂದಿಸುತ್ತಿರುವುದರಿಂದ ರೈತರಿಗೆ ಸಮರ್ಪಕವಾಗಿ ವಿದ್ಯುತ್ ದೊರೆಯುತ್ತಿದೆ.ಕಳೆದ, 2013ರಲ್ಲಿ ಯಶವಂತರಾಯಗೌಡ ಪಾಟೀಲ ಅವರು ಚುನಾವಣಾ ಪ್ರಚಾರಕ್ಕೆ ಗ್ರಾಮಗಳಿಗೆ ಹೋದಾಗ ಅಲ್ಲಿನ ಸಾರ್ವಜನಿಕರು, ರೈತರ ಬೇಡಿಕೆ ಒಂದೇಯಾಗಿತ್ತು. ಮತ ನೀಡುತ್ತೇವೆ, ನಮಗೆ ಹೆಚ್ಚು ವೋಲ್ಟೇಜ್ ವಿದ್ಯುತ್ ಬರುವ ಹಾಗೆ ಮಾಡಿ ಎಂದು ಅಳಲು ತೋಡಿಕೊಂಡಿದ್ದರು. ಮತದಾರರಿಗೆ ಕೊಟ್ಟ ಭರವಸೆಯನ್ನು ಈಡೇರಿಸಬೇಕೆಂಬ ಛಲದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಹಿರಿಯ ಅಧಿಕಾರಿಗಳ ಸಹಾಯದಿಂದ ಇಂದು ಇಂಡಿ ಮತಕ್ಷೇತ್ರದಲ್ಲಿ 13 ವಿದ್ಯುತ್ ವಿತರಣಾ ಕೇಂದ್ರಗಳು ಕಾರ್ಯಾರಂಭ ಮಾಡಿವೆ. ಇನ್ನೂ 5 ವಿದ್ಯುತ್ ವಿತರಣಾ ಕೇಂದ್ರಗಳ ಮಂಜೂರಿಗೆ ಪ್ರಸ್ತಾವ ಸಲ್ಲಿಸಿದ್ದು, ಮಂಜೂರು ಆಗುವ ಹಂತದಲ್ಲಿವೆ.
ವಿದ್ಯುತ್ ಉತ್ಪಾದನೆ, ಸಾಗಣೆ ಮತ್ತು ವಿತರಣೆಯಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗಿರುವ ಶಾಸಕರು ಹಾಗೂ ಹೆಸ್ಕಾಂ ಅಧಿಕಾರಿಗಳು ಅದರಲ್ಲಿ ಯಶಸ್ಸು ಕಂಡಿದ್ದಾರೆ. ತಾಲೂಕಿನಾದ್ಯಂತ ಹಲವಾರು ವರ್ಷಗಳಿಂದ ವಿದ್ಯುತ್ ಇದ್ದರೂ, ಗುಣಮಟ್ಟದ ವಿದ್ಯುತ್ ಸಮಸ್ಯೆಯಿಂದ ಕೃಷಿಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದರು. ಈಗ ಈ ಕನಸು ನನಸಾಗಿದೆ.ಈ ಮೊದಲು ತಾಲೂಕಿನ ಬಹುತೇಕ ಗ್ರಾಮಗಳಿಗೆ ಇಂಡಿ ನಗರದಲ್ಲಿರುವ 220 ಕೆವಿಎ ವಿದ್ಯುತ್ ವಿತರಣಾ ಕೇಂದ್ರದಿಂದಲೇ ವಿದ್ಯುತ್ ಸರಬರಾಜು ಆಗುತ್ತಿತ್ತು. ಯಶವಂತರಾಯಗೌಡ ಪಾಟೀಲ ಅವರು ಶಾಸಕರಾದ ಮೇಲೆ ಇಂಡಿ, ಹಿರೇಬೇವನೂರ, ಲಚ್ಯಾಣ, ಹಿರೇಮಸಳಿ, ಅಥರ್ಗಾ, ರೋಡಗಿ, ಝಳಕಿ, ನಾದ (ಸಾತಲಗಾಂವ ಕ್ರಾಸ್) ಗ್ರಾಮಗಳಲ್ಲಿ 110 ಕೆವಿಎ ವಿದ್ಯುತ್ ವಿತರಣಾ ಕೇಂದ್ರಗಳು ಹಾಗೂ ತಾಂಬಾ, ತಡವಲಗಾ, ನಾದ, ಹೊರ್ತಿ ಗ್ರಾಮಗಳಲ್ಲಿ 33 ಕೆವಿಎ ವಿದ್ಯುತ್ ವಿತರಣಾ ಕೇಂದ್ರಗಳನ್ನು ಮಂಜೂರು ಮಾಡಿಸಿದೆ. ಅವು ಕಾರ್ಯಾರಂಭ ಮಾಡಿವೆ.
ಇನ್ನೂ ನಿಂಬಾಳ, ಬೈರುಣಗಿ ಗ್ರಾಮದಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ಕೆಲಸ ಪ್ರಗತಿಯಲ್ಲಿವೆ. ಶಿರಗೂರ ಇನಾಮ, ಹಡಲಸಂಗ, ತಾಂಬಾ, ಅಗಸನಾಳ ಗ್ರಾಮಗಳಲ್ಲಿ 110 ವಿದ್ಯುತ್ ವಿತರಣಾ ಕೇಂದ್ರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದರಲ್ಲಿ ಕೆಲವೊಂದು ಗ್ರಾಮದಲ್ಲಿನ ವಿದ್ಯುತ್ ವಿತರಣಾ ಕೆಂದ್ರ ಟೆಂಡರ್ ಹಂತದಲ್ಲಿದ್ದರೆ, ಕೆಲವೊಂದು ಮಂಜೂರು ಹಂತದಲ್ಲಿವೆ. ಹೀಗಾಗಿ ತಾಲೂಕಿನ ಜನರು ಹಾಗೂ ರೈತರು ಸಂತಸದಲ್ಲಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗಳು ಜಾರಿಗೆ ಬಂದಿದ್ದು, ಯೋಜನೆಗಳ ಅನುಷ್ಠಾನಕ್ಕೆ ವಿದ್ಯುತ್ ಅನುಕೂಲವಾಗಲಿದೆ.----------
ಕೋಟ್...ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ಪರಿಶ್ರಮದಿಂದ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ವಿತರಣಾ ಕೇಂದ್ರಗಳು ಮಂಜೂರು ಆಗಿದ್ದು, ಇದರಿಂದ ಯಾವುದೇ ಗ್ರಾಮದಲ್ಲಿ ವಿದ್ಯುತ್ ಕೊರತೆ ಇಲ್ಲ.
- ಸಂಗಮನಾಥ ಮೇಡೆಗಾರ, ಹೆಸ್ಕಾಂ ಎಇಇ ಇಂಡಿ