ಎಚ್.ಕೆ.ಅಶ್ವಥ್ ಅಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಎಸ್.ಡಿ.ಜಯರಾಂ ವೃತ್ತ (ನಂದಾ ವೃತ್ತ) ರೈಲ್ವೆ ಮೇಲ್ಸೆತುವೆ ರಸ್ತೆಯ ಆಧುನೀಕರಣ ನಾಲ್ಕು ತಿಂಗಳಿಂದ ಸ್ಥಗಿತಗೊಂಡಿದೆ. ಹಾಲಿ ಈ ರಸ್ತೆ ಸಂಪೂರ್ಣ ಧೂಳಿನಿಂದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳು, ದ್ವಿಚಕ್ರವಾಹನ ಸವಾರರಿಗೆ ನರಕಯಾತನೆ ಉಂಟುಮಾಡುತ್ತಿದೆ.
ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಒಂದು ಕೋಟಿ ರು. ವೆಚ್ಚದಲ್ಲಿ ರಸ್ತೆಯ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು, ಐದು ತಿಂಗಳ ಹಿಂದೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಎಸ್.ಡಿ.ಜಯರಾಂ ವೃತ್ತದಿಂದ ಕಾರೇಮನೆ ಗೇಟ್‌ವರೆಗೆ ಅರ್ಧ ಕಿ.ಮೀ. ರಸ್ತೆಯ ಆಧುನೀಕರಣ ನಡೆಸಲಾಗುತ್ತಿದೆ.ಅರ್ಧಕ್ಕೇ ಕಾಮಗಾರಿ ಸ್ಥಗಿತ:
ರಸ್ತೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ರಸ್ತೆಯನ್ನು ಅಗೆದು ಜಲ್ಲಿ ಬಿಚಾವಣೆ ಮಾಡಿ ಅದರ ಮೇಲೆ ಡಸ್ಟ್ ಹಾಕಿ ಹೋದವನು ಈವರೆಗೆ ಆ ರಸ್ತೆ ಕಡೆ ತಿರುಗಿಯೂ ನೋಡಿಲ್ಲ. ಇದರಿಂದ ವಾಹನಗಳು ಓಡಾಡುವ ಸಮಯದಲ್ಲಿ ಮೇಲೇಳುವ ಧೂಳು ಈ ರಸ್ತೆಯಲ್ಲಿ ಓಡಾಡುವವರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿರುವುದಲ್ಲದೇ, ಲಾರಿ, ಬಸ್‌ಗಳು, ಟ್ರ್ಯಾಕ್ಟರ್‌ಗಳು ಸಾಗುವ ವೇಳೆ ಹಿಂಬದಿಯಿಂದ ದ್ವಿಚಕ್ರ ವಾಹನ ಸವಾರರು ಹೋಗಲಾರದಷ್ಟು ಧೂಳು ಆವರಿಸಿಕೊಳ್ಳುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವವರು ಗುತ್ತಿಗೆದಾರನಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಹಣ ಬಿಡುಗಡೆಯಾಗಿಲ್ಲ:
ರಸ್ತೆ ಕಾಮಗಾರಿಗೆ ನಿಗದಿಪಡಿಸಿರುವ ಒಂದು ಕೋಟಿ ರು. ಹಣದಲ್ಲಿ ಅರ್ಧ ಹಣ ಮಾತ್ರ ಬಿಡುಗಡೆಯಾಗಿದ್ದು, ಉಳಿಕೆ ಹಣ ಬಿಡುಗಡೆ ಆಗದಿರುವುದರಿಂದ ಗುತ್ತಿಗೆದಾರ ಕಾಮಗಾರಿ ಮುಗಿಸದೆ ಅರ್ಧಕ್ಕೇ ಬಿಟ್ಟು ಹೋಗಿದ್ದಾನೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಲ್ಲಿಯವರೆಗೆ ಧೂಳುಮಯ ರಸ್ತೆಗೆ ನೀರನ್ನು ಹಾಕುವ ಕೆಲಸ ಮಾಡಲಾಗುತ್ತಿದ್ದರೂ ಅದೂ ಕೂಡ ಸರಿಯಾಗಿ ನಡೆಯದಿರುವುದರಿಂದ ನಿತ್ಯ ಈ ರಸ್ತೆಯಲ್ಲಿ ಓಡಾಡುವವರು ಧೂಳನ್ನು ಸೇವಿಸುತ್ತಾ ಸಾಗುವುದು ಅನಿವಾರ್ಯವಾಗಿದೆ.ದಿನಕ್ಕೆ ಮೂರು ಬಾರಿ ನೀರು ಹಾಕುತ್ತಿದ್ದರೂ ನೀರು ಹಾಕಿದ ಅರ್ಧಗಂಟೆಯಲ್ಲೇ ಧೂಳು ಮತ್ತೆ ಮೇಲೇಳಲಾರಂಭಿಸುತ್ತದೆ. ಮೋಡ ಕವಿದ ವಾತಾವರಣವಿದ್ದರೆ ಮಳೆ ಬರಬಹುದೆಂದು ಭಾವಿಸಿ ನೀರನ್ನೇ ಹಾಕುವುದಿಲ್ಲ. ಇದರಿಂದ ಧೂಳುಮಯ ರಸ್ತೆಯಲ್ಲಿ ಸಾಗುವುದು ಪ್ರಯಾಣಿಕರಿಗೆ ದೊಡ್ಡ ಸವಾಲಾಗಿದೆ.
ಮಳೆಯ ನೆಪ:ರಸ್ತೆ ಆಧುನೀಕರಣ ಅರ್ಧಕ್ಕೇ ಸ್ಥಗಿತಗೊಂಡಿರುವುದಕ್ಕೆ ಗುತ್ತಿಗೆದಾರ ಮಳೆಯ ನೆಪ ಹೇಳುತ್ತಿದ್ದಾನೆಂದು ಹೇಳಲಾಗುತ್ತಿದೆ. ಮಳೆಗಾಲ ಮುಗಿದ ಬಳಿಕ ಕಾಮಗಾರಿ ನಡೆಸುವುದಾಗಿ ಸದ್ಯದ ಪರಿಸ್ಥಿತಿಯಿಂದ ಪಾರಾಗಲು ಯತ್ನಿಸುತ್ತಿದ್ದಾನೆಂದು ರಸ್ತೆ ಅಕ್ಕ-ಪಕ್ಕದ ನಿವಾಸಿಗಳು ದೂರುತ್ತಿದ್ದಾರೆ. ಮಳೆ ಕಾಮಗಾರಿಗೆ ಅಡ್ಡಿಪಡಿಸಿದ್ದರೆ ಮಳೆಗಾಲ ಮುಗಿದ ನಂತರವೇ ಕಾಮಗಾರಿ ಆರಂಭಿಸಬೇಕಿತ್ತು. ರಸ್ತೆ ಅಗೆದು ಜಲ್ಲಿ ಬಿಚಾವಣೆ ಏಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ನಾಲಬಂದವಾಡಿ, ಡವರಿ ನಿವಾಸಿಗಳ ಗೋಳು:ಈ ರಸ್ತೆ ಹಾದುಹೋಗಿರುವ ಮಾರ್ಗದಲ್ಲಿ ನಾಲಬಂದವಾಡಿ, ಡವರಿ ನಿವಾಸಿಗಳು ವಾಸಿಸುತ್ತಿದ್ದು, ರಸ್ತೆಯಲ್ಲಿ ಮೇಲೇಳುವ ಧೂಳು ನೇರವಾಗಿ ಮನೆಯೊಳಗೆ ಸೇರುತ್ತಿದೆ. ಕುಡಿಯುವ ನೀರು, ಆಹಾರ ಪದಾರ್ಥಗಳಿಗೆ ಧೂಳು ಸೇರುತ್ತಿರುವುದರಿಂದ ಅಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಈ ಕಡೆಯಿಂದ ಚಿಕ್ಕಮಂಡ್ಯ, ಕಾರೇಮನೆಗೇಟ್, ಪೇಟೆಬೀದಿ, ಮೈಷುಗರ್ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳು, ಆ ಕಡೆಯಿಂದ ಜಿಲ್ಲಾಸ್ಪತ್ರೆ, ಕೆ.ಎಂ.ದೊಡ್ಡಿ, ಮಳವಳ್ಳಿ, ಮದ್ದೂರು ಕಡೆಗೆ ಸಾಗುವ ವಾಹನಗಳೆಲ್ಲವೂ ಈ ರಸ್ತೆ ಮೂಲಕವೇ ಹಾದುಹೋಗುತ್ತಿವೆ. ಎಡಬಿಡದ ಸಂಚಾರದಿಂದ ಧೂಳನ್ನು ಸಹಿಸಿಕೊಂಡು ಈ ಪ್ರದೇಶದ ಜನರು ಜೀವನ ನಡೆಸುವಂತಾಗಿದೆ.ನಗರಸಭೆ ಅಧ್ಯಕ್ಷರ ವಾರ್ಡ್ ರಸ್ತೆಯೇ ಅವ್ಯವಸ್ಥೆ:
ನಗರಸಭೆ ಅಧ್ಯಕ್ಷರಾಗಿರುವ ಎಂ.ಸಿ.ಪ್ರಕಾಶ್ (ನಾಗೇಶ್) ಅವರ ವಾರ್ಡ್‌ಗೆ ಈ ರಸ್ತೆ ಸೇರಿದ್ದರೂ ನಿಗದಿತ ಸಮಯದಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದಿರುವ ಬಗ್ಗೆ ಸಾರ್ವಜನಿಕರು ಟೀಕಿಸುತ್ತಿದ್ದಾರೆ. ರಸ್ತೆಯಿಂದ ಮೇಲೇಳುತ್ತಿರುವ ಧೂಳು ನಿವಾಸಿಗಳ ನೆಮ್ಮದಿಯನ್ನು ಕಸಿದುಕೊಂಡಿದೆ. ನಗರಸಭೆ ಅಧ್ಯಕ್ಷರಾಗಿದ್ದರೂ ರಸ್ತೆ ಕಾಮಗಾರಿಯನ್ನು ಸಕಾಲದಲ್ಲಿ ಮುಗಿಸಿ ಸಂಚಾರಕ್ಕೆ ಅನುವು ಮಾಡಿಕೊಡದಿರುವುದಕ್ಕೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಲಬಂದವಾಡಿ ಸ್ಲಂ ನಿವಾಸಿಗಳು ಅಳಲು ವ್ಯಕ್ತಪಡಿಸುತ್ತಾ, ಧೂಳಿನಿಂದ ಕುಡಿಯುವ ನೀರನ್ನು ಡ್ರಮ್‌ಗಳಲ್ಲಿ ಸಂಗ್ರಹಿಸಿ ಬಟ್ಟೆಯಿಂದ ಮುಚ್ಚಿಡುವಂತಾಗಿದೆ. ಮನೆಯ ತುಂಬೆಲ್ಲಾ ಧೂಳು ತುಂಬಿಕೊಳ್ಳುತ್ತಿರುವುದರಿಂದ ದಿನಕ್ಕೆರಡು ಬಾರಿ ಮನೆಯನ್ನು ಶುಚಿಗೊಳಿಸುತ್ತಿದ್ದೇವೆ. ಮಕ್ಕಳಿಗೆ ಎರಡು ಬಾರಿ ಸ್ನಾನ ಮಾಡಿಸುತ್ತಿದ್ದು, ಧೂಳಿನಿಂದ ಹಲವರಿಗೆ ಕೆಮ್ಮು, ನೆಗಡಿ, ಅಲರ್ಜಿ ಎದುರಾಗಿದೆ. ಜನರು ಅನುಭವಿಸುತ್ತಿರುವ ಸಂಕಟ, ಸಂಕಷ್ಟ, ಸಮಸ್ಯೆಗಳು ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಅರ್ಧಕ್ಕೇ ಸ್ಥಗಿತಗೊಂಡಿರುವ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಈ ಭಾಗದ ಜನರಿಗೆ, ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನೆಮ್ಮದಿ ದೊರಕಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಧೂಳಿನ ರಸ್ತೆಯಿಂದ ಮುಕ್ತಿ ಸಿಗುವ ದಿನಗಳಿಗಾಗಿ ಕಾಯುತ್ತಿದ್ದೇವೆ. ಅರ್ಧಂಬರ್ಧ ರಸ್ತೆಯಿಂದ ಮನೆಯೊಳಗೆ ಧೂಳು ತುಂಬಿಕೊಳ್ಳುತ್ತಿದೆ. ಕುಡಿವ ನೀರನ್ನು ಸದಾ ಮುಚ್ಚಿಡಬೇಕು. ಎರಡು ಬಾರಿ ಮನೆ ಸ್ವಚ್ಛಗೊಳಿಸಬೇಕು. ತಿನ್ನುವ ಪದಾರ್ಥಗಳನ್ನೂ ಧೂಳು ಮುತ್ತಿಕೊಳ್ಳುತ್ತಿದೆ. ಆದಷ್ಟು ಬೇಗ ರಸ್ತೆ ಡಾಂಬರೀಕರಣ ಮಾಡಿ ಪುಣ್ಯಕಟ್ಕಳ್ರಪ್ಪ.
- ಮಾಲಮ್ಮ, ಗೃಹಿಣಿ ನಾಲಬಂದವಾಡಿ ಸ್ಲಂಧೂಳುಮಯ ರಸ್ತೆಯಿಂದ ಮಗುವಿನ ಮೈಯಲ್ಲಿ ಕಡಿತ ಶುರವಾಗಿ ಅಲರ್ಜಿಯಾಗಿದೆ. ದಿನಕ್ಕೆ ಎರಡು ಬಾರಿ ಮಕ್ಕಳಿಗೆ ಸ್ನಾನ ಮಾಡಿಸಲಾಗುತ್ತಿದೆ. ಡಾಂಬರೀಕರಣ ಮಾಡುವುದಾಗಿ ರಸ್ತೆಯನ್ನು ಅಗೆದು ಹಾಳುಮಾಡಿಟ್ಟಿದ್ದಾರೆ. ಮಳೆಬಿದ್ದಿರುವುದರಿಂದ ಸದ್ಯ ಧೂಳೇಳುತ್ತಿಲ್ಲ. ಇಲ್ಲದಿದ್ದರೆ ನೀರು ಹಾಕಿದ ಅರ್ಧಗಂಟೆಯಲ್ಲೇ ಧೂಳು ಮೇಲೇಳಲಾರಂಭಿಸುತ್ತದೆ.- ನಾಗಮಣಿ, ಸ್ಥಳೀಯ ನಿವಾಸಿಗುತ್ತಿಗೆದಾರನನ್ನು ಕರೆಸಿ ಮಾತುಕತೆ ನಡೆಸಿದ್ದೇವೆ. ಸೋಮವಾರ ಡಾಂಬರೀಕರಣದ ಕೆಲಸ ಆರಂಭಿಸುವುದಾಗಿ ಹೇಳಿದ್ದಾನೆ. ಮಳೆಯೂ ಇದ್ದ ಕಾರಣ ಡಾಂಬರೀಕರಣಕ್ಕೆ ತೊಂದರೆಯಾಗಿತ್ತು. ಆದಷ್ಟು ಬೇಗ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.
- ಕೆ.ಎಂ.ಪ್ರಕಾಶ್ (ನಾಗೇಶ), ಅಧ್ಯಕ್ಷರು, ನಗರಸಭೆ