ಹರಪನಹಳ್ಳಿ: ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ಮುಕ್ತ ವಾತಾವರಣ ನಿರ್ಮಿಸಬೇಕು ಎಂದು ಹಂಪಿ ಕನ್ನಡ ವಿವಿಯ ಮಹಿಳಾ ಅದ್ಯಯನ ಕೇಂದ್ರದ ಮಾಜಿ ನಿರ್ದೇಶಕಿ ಡಾ.ಎಂ.ಜಿ. ಶೋಭಾದೇವಿ ಹೇಳಿದ್ದಾರೆ.ಅವರು ಪಟ್ಟಣದ ಟಿಎಂಎಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಲೈಂಗಿಕ ಕಿರುಕುಳ ತಡೆ ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಶಿಕ್ಷಣಾರ್ಥಿಗಳು ಲೈಂಗಿಕ ಕಿರುಕುಳ ದಿಂದ ದೂರವಿದ್ದು, ತಮ್ಮ ಕಾಲೇಜಿನ ವಾತಾವರಣವನ್ನು ಲೈಂಗಿಕ ಕಿರುಕುಳ ಮುಕ್ತವನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.
ಶಿಕ್ಷಣ ಮಹಾ ವಿದ್ಯಾಲಯದ ಡೀನ್ ಟಿ.ಎಂ.ರಾಜಶೇಖರ ಮಾತನಾಡಿ ಪ್ರತಿಯೊಂದು ಶಾಲಾ ಕಾಲೇಜುಗಳು ಲೈಂಗಿಕ ದೌರ್ಜನ್ಯ ತಡೆ ಸಮಿತಿಯನ್ನು ಹೊಂದಿದ್ದು, ಆ ಸಮಿತಿಯು ಶಾಲಾ ಕಾಲೇಜುಗಳಲ್ಲಿ ಆಗಬಹುದಾದ ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದನ್ನು ಸಂಬಂಧ ಪಟ್ಟವರ ಗಮನಕ್ಕೆ ಕೂಡಲೇ ತರಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಡಾ.ಜಿ.ಎಂ.ವಿಜಯಲಕ್ಷ್ಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಲೈಂಗಿಕ ದೌರ್ಜನ್ಯ ತಡೆ ಕಾರ್ಯಕ್ರಮದ ಉದ್ದೇಶ ಮಹತ್ವ ಹಾಗೂ ಲೈಂಗಿಕ ಕಿರುಕುಳ ತಡೆ ಸಮಿತಿ ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ ತಿಳಿಸಿದರು.
ಲೈಂಗಿಕ ಕಿರುಕುಳ ತಡೆ ಸಮಿತಿಯ ಸಂಯೋಜಕ ಕೆ.ಎಂ.ಲತಾ, ಶಿಕ್ಷಣ ಮಹಾ ವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.