ದಕ್ಷಿಣ ಭಾರತೀಯರು ಕಚ್ಚಾಡಿದರೆ ಶೀಘ್ರ ಹಿಂದಿಮಯ: ಡಾ. ಬಿಳಿಮಲೆ

KannadaprabhaNewsNetwork | Published : Nov 17, 2024 1:19 AM

ಸಾರಾಂಶ

ಕೇರಳ ರಾಜ್ಯವು ಅಲ್ಲಿನ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸದೆ ಇರುವುದು ಅಕ್ಷಮ್ಯ ಎಂದ ಅವರು, ಇದು ನಾಚಿಕೆಗೇಡಿನ ಸಂಗತಿ. ಅಲ್ಪಸಂಖ್ಯಾತ ಕನ್ನಡಿಗರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಕ್ರಮವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬಹುಭಾಷಿಕ ಹಾಗೂ ಬಹು ಸಂಸ್ಕೃತಿಗಳ ಸಮುದಾಯದವರಾದ ದಕ್ಷಿಣ ಭಾರತೀಯರು ಪರಸ್ಪರ ಕಚ್ಚಾಡುವುದನ್ನು ಮುಂದುವರೆಸಿದರೆ ದೇಶ ಶೀಘ್ರ ಹಿಂದಿಮಯ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೇರಳ ಮತ್ತು ಗೋವಾ ರಾಜ್ಯದ 149 ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಭಿನ್ನ ಭಾಷಿಕರ ನಡುವೆ ವೈಮನಸ್ಸು ಮೂಡಿಸುವ ಕೆಲಸವನ್ನು ತಮ್ಮ ಉಳಿವಿಗಾಗಿ ರಾಜಕಾರಣಿಗಳು ಮುಂದುವರಿಸುತ್ತಲೇ ಇದ್ದಾರೆ. ಇದು ಭಾಷೆಗಳ ಕಟ್ಟುವಿಕೆಗೆ ಮಾರಕ. ದಕ್ಷಿಣ ಭಾರತೀಯ ರಾಜ್ಯಗಳ ಭಾಷೆಗಳು ಹಾಗೂ ಹಿಂದಿ ಭಾಷೆಯ ಬೆಳವಣಿಗೆಯ ಇಂದಿನ ಗತಿಯನ್ನು ತುಲನೆ ಮಾಡಿದರೆ, ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದ ಭಾಷೆಗಳು ಅವನತಿಯ ಕಡೆ ಮುಖ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಸಂವಿಧಾನವು ಭಾಷಿಕವಾಗಿ ದೇಶದ ಜನಕ್ಕೆ ಹಲವಾರು ಹಕ್ಕುಗಳನ್ನು ಕೊಟ್ಟಿದೆ. ರಾಜ್ಯ ಸರ್ಕಾರಗಳು ಗಡಿ ಭಾಗಗಳಲ್ಲಿ ವಾಸಿಸುವ ಭಾಷಾ ಅಲ್ಪಸಂಖ್ಯಾತರ ಹಿತ ಕಾಯಲು ಪ್ರತ್ಯೇಕ ಭಾಷಾ ನಿರ್ದೇಶಕರನ್ನು ನೇಮಿಸಬೇಕಿದ್ದು, ಹಲವು ರಾಜ್ಯಗಳು ಈ ಕುರಿತಂತೆ ಉತ್ಸುಕವಾಗಿಲ್ಲ. ಸರ್ಕಾರಗಳು ತಮ್ಮ ನಾಡಿನ ಅಲ್ಪಸಂಖ್ಯಾತ ಭಾಷೆಗಳ ಕುರಿತಂತೆ ಗೌರವ ಹೊಂದಬೇಕಾದ್ದು ಪ್ರಾಥಮಿಕ ಜವಾಬ್ದಾರಿ. ಕರ್ನಾಟಕದ ಎಲ್ಲ ನೆರೆ ರಾಜ್ಯಗಳ ಸರ್ಕಾರಗಳಿಗೆ ಸಂವಿಧಾನದತ್ತ ಅಧಿಕಾರದಂತೆ ಭಾಷಾ ನಿರ್ದೇಶಕರನ್ನು ನೇಮಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಲಿದೆ ಎಂದು ಡಾ.ಬಿಳಿಮಲೆ ತಿಳಿಸಿದರು.

ಕೇರಳ ರಾಜ್ಯವು ಅಲ್ಲಿನ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸದೆ ಇರುವುದು ಅಕ್ಷಮ್ಯ ಎಂದ ಅವರು, ಇದು ನಾಚಿಕೆಗೇಡಿನ ಸಂಗತಿ. ಅಲ್ಪಸಂಖ್ಯಾತ ಕನ್ನಡಿಗರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವ ಕ್ರಮವಾಗಿದೆ ಎಂದರು.ನಾವು ಕೇರಳದ ಕನ್ನಡಿಗರು- ಮಂಜೇಶ್ವರ ಶಾಸಕ:

ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ.ಆಶ್ರಫ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಕಾಸರಗೋಡು ಪ್ರದೇಶವು 1956ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ದುರದೃಷ್ಟವಶಾತ್ ಕೇರಳದ ಭಾಗವಾಯಿತು. ಆದರೆ ಅಲ್ಲಿನ ಕನ್ನಡಿಗರು ಕನ್ನಡ ಭಾಷೆಯನ್ನು ಮರೆಯದೆ ತಲೆತಲಾಂತರಗಳಿಂದ ಅದನ್ನು ಪೋಷಿಸಿಕೊಂಡು ಬರುತ್ತಿರುವುದು ಅವರ ಕನ್ನಡ ಪ್ರೇಮವನ್ನು ಅಭಿವ್ಯಕ್ತಿಸುತ್ತದೆ. ನಾವು ಮಲಯಾಳಿಗಳೆಂದು ಗುರುತಿಸಿಕೊಳ್ಳುವುದಕ್ಕಿಂತ ಕೇರಳದ ಕನ್ನಡಿಗರೆಂದು ಗುರುತಿಸಿಕೊಳ್ಳಲು ನಮಗೆ ಹೆಮ್ಮೆ ಇದೆ ಎಂದು ಹೇಳಿದರು.

ಕರ್ನಾಟಕ ಸರ್ಕಾರದ ಈ ರೀತಿಯ ಸ್ಪಂದನಾಶೀಲ ಕಾರ್ಯಕ್ರಮಗಳು ಗಡಿನಾಡಿನ ಕನ್ನಡಿಗರಲ್ಲಿ ಹೊಸ ವಿಶ್ವಾಸವನ್ನು ಮೂಡಿಸುತ್ತವೆ ಎಂದ ಎ.ಕೆ.ಎಂ.ಆಶ್ರಫ್, ಪ್ರಾಧಿಕಾರದ ಈ ಪ್ರಯತ್ನ ಶ್ಲಾಘನೀಯ ಎಂದರು.

ಸಾಹಿತಿ ಡಾ.ಜ್ಯೋತಿ ಚೆಳ್ಯಾರು ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಸ್ವಾಗತಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಇಕ್ಬಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ರೆಹಮಾನ್, ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೀನ್ ಲವೀನಾ ಮೊಂತೆರೊ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್, ಯಾಕೂಬ್ ಖಾದರ್ ಗುಲ್ವಾಡಿ ಮತ್ತಿತರರು ಇದ್ದರು.

Share this article