ಬಸವರಾಜ ಹಿರೇಮಠಶಿಗ್ಗಾಂವಿ: 22 ಸದಸ್ಯರನ್ನು ಹೊಂದಿರುವ ತಾಲೂಕಿನ ಹುಲಗೂರ ಗ್ರಾಮ ಪಂಚಾಯಿತಿಗೆ ಬೃಹತ್ ಗ್ರಾಪಂ ಎನ್ನುವ ಹೆಗ್ಗಳಿಕೆ ಇದೆ. ಅಲ್ಲದೇ ಅಂದಾಜು 13 ಸಾವಿರ ಜನಸಂಖ್ಯೆ ಹೊಂದಿರುವ ದೊಡ್ಡ ಹಳ್ಳಿಯಾಗಿದೆ. ಆದರೆ ಇಷ್ಟೊಂದು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸ್ವಚ್ಛತೆ ಮಾತ್ರ ಮರೀಚಿಕೆಯಾಗಿದೆ.
ಗ್ರಾಮದ ಹೊರವಲಯದಲ್ಲಿರುವ ಬಸನಾಳ ರಸ್ತೆ ಉದ್ದಕ್ಕೂ ಕಸದ ರಾಶಿಯೇ ಪರಸ್ಥಳದವರನ್ನು ಸ್ವಾಗತಿಸುತ್ತಿದೆ. ರಸ್ತೆಬದಿ ನಾಯಿ, ಹಂದಿಗಳ ಕಳೇಬರಗಳನ್ನು ತಂದು ಹಾಕಲಾಗುತ್ತದೆ. ಈ ರಸ್ತೆಯಲ್ಲಿ ಸುಮಾರು 1 ಕಿಮೀ ವ್ಯಾಪ್ತಿಯಲ್ಲಿ ಕಸದ ರಾಶಿಗಳೇ ಎಲ್ಲೆಡೆ ಕಾಣುತ್ತಿವೆ.ಸ್ಥಳೀಯ ನಿವಾಸಿಗಳು, ಹೋಟೆಲ್‌ನವರು, ಬಾರ್‌ನವರು, ತರಕಾರಿ ವ್ಯಾಪಾರಿಗಳು ಹಾಗೂ ಕ್ಷೌರಿಕ ಅಂಗಡಿಗಳ ತ್ಯಾಜ್ಯವನ್ನು ರಸ್ತೆ ಕ್ಕದಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ.
ಇದರಿಂದ ಈ ಪ್ರದೇಶದಲ್ಲಿ ಓಡಾಡುವವರು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಇದೇ ಮಾರ್ಗದಲ್ಲಿರುವ ಮೌನೇಶ್ವರ ಮಠಕ್ಕೆ, ಹಜರತ್ ಸೈಯ್ಯದ ಹಜರತ್ ಶಾಹ ಖಾದ್ರಿ ದರ್ಗಾಕ್ಕೆ ಹೋಗುವ ಭಕ್ತರಿಗೂ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ.ಈ ಭಾಗದಲ್ಲಿ ಕಸ ಸುರಿಯಬೇಡಿ ಎಂದು ಗ್ರಾಪಂನವರು ಡಂಗೂರ ಸಾರಿಸಿದರೂ ಜನ ಮಾತ್ರ ಕಿವಿಗೊಡುತ್ತಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.
ಗ್ರಾಪಂ ನಿರ್ಲಕ್ಷ್ಯ: ತ್ಯಾಜ್ಯ ಸಮರ್ಪಕ ವಿಲೇವಾರಿ ಮಾಡುವಲ್ಲಿ ಗ್ರಾಪಂ ವಿಫಲವಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ. ಸಾರ್ವಜನಿಕರು ಮನಸೋ ಇಚ್ಛೆ ತ್ಯಾಜ್ಯ ಬೀಸಾಡದಂತೆ ಕ್ರಮ ಕೈಗೊಳ್ಳುವುದು ಗ್ರಾಪಂನ ಕರ್ತವ್ಯ. ಆದರೂ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಗ್ರಾಪಂ ಮುಂದಾಗುತ್ತಿಲ್ಲ. ಹೀಗಾಗಿ ತ್ಯಾಜ್ಯದ ಸಮಸ್ಯೆಯೇ ಗ್ರಾಮದಲ್ಲಿ ಬೃಹದಾಕಾರವಾಗಿ ಕಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಸಕ್ಕೆ ಜಾಗದ ಸಮಸ್ಯೆ: ಬಸನಾಳ ರಸ್ತೆಯಲ್ಲಿ ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆಯನ್ನು ಸಾಕಷ್ಟು ಬಾರಿ ಮಾಡಿಸಲಾಗಿದೆ. ಅಲ್ಲದೆ ತ್ಯಾಜ್ಯವನ್ನು ಹಾಕಲು ನಿರ್ದಿಷ್ಟವಾದ ಜಾಗ ಇಲ್ಲ. ತ್ಯಾಜ್ಯ ವಿಲೇವಾರಿಗೆ ಗ್ರಾಪಂನಲ್ಲಿ ಟ್ರ್ಯಾಕ್ಟರ್ ಇದೆ. ಆ ಕಸವನ್ನು ಹಾಕಲು ಒಂದೆಡೆ ವಿಲೇವಾರಿ ಮಾಡಲು ೨ ಎಕರೆ ಜಾಗದ ಅವಶ್ಯಕತೆ ಇದೆ. ಈ ಕುರಿತು ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ಅವರಿಗೂ ಮನವಿ ಮಾಡಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಜಾವೇದ್ ಸವಣೂರ ತಿಳಿಸಿದರು.ರಸ್ತೆಬದಿ ಕಸ ಬಿಸಾಡದಂತೆ ಸಾಕಷ್ಟು ಬಾರಿ ಗ್ರಾಪಂ ವತಿಯಿಂದ ಡಂಗೂರದ ಮೂಲಕ ಜಾಗೃತಿ ಮೂಡಿಸಲಾಗಿದೆ. ಆದರೂ ಹಲವರು ಕಸ ಎಸೆಯುವುದನ್ನು ಬಿಡುತ್ತಿಲ್ಲ. ಈ ಪ್ರದೇಶವನ್ನು ಈಗಾಗಲೇ ಎರಡು ಬಾರಿ ತ್ಯಾಜ್ಯ ವಿಲೇವಾರಿ ಮಾಡಿ ಸ್ವಚ್ಛ ಮಾಡಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕರು ಕಸ ಎಸೆಯದಂತೆ ಗ್ರಾಪಂ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ಆರ್.ಎಂ. ಓಲೇಕಾರ ತಿಳಿಸಿದರು.