ಕೊಪ್ಪಳ: ಜನ, ಜಾನುವಾರುಗಳಿಗಾಗಿ ಇರುವ ಬಸಾಪುರ ಕೆರೆ ಯಾವುದೇ ಕಾರಣಕ್ಕೂ ಖಾಸಗಿ ಸ್ವತ್ತಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ನಗರ ಪಕ್ಕದ ಬಸಾಪುರ ಕೆರೆ ಭೇಟಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳೊಂದಿಗೆ ನಾನು ಹೋದಾಗ ಬಲ್ಡೋಟ ಸೆಕ್ಯೂರಿಟಿ ಸಿಬ್ಬಂದಿ ಅಡ್ಡಗಟ್ಟಿದ್ದಾರೆ. ಅಲ್ಲದೆ 112 ನಂಬರಿಗೆ ಕರೆ ಮಾಡಿ ಪೊಲೀಸರನ್ನು ಕರೆಸಿ ಕೆರೆಯಿಂದ ಹೊರ ಹಾಕಿ ಅವಮಾನಿಸಲು ಪ್ರಯತ್ನ ಮಾಡಿದ್ದು ಖಂಡನೀಯ ಎಂದು ಅಸಮಾಧಾನ ಹೊರಹಾಕಿದರು. ಇಲ್ಲಿನ ಜಿಲ್ಲಾಡಳಿತ ಕಾನೂನು, ಕೋರ್ಟ್ ಆದೇಶ ಉಲ್ಲಂಘಿಸಿರುವ ಕಂಪನಿ ಪರ ನಿಲ್ಲಬಾರದು. ಕಾರ್ಖಾನೆಯ ವಶಕ್ಕೆ ಕೆರೆ ಒಪ್ಪಿಸಿದ ಕ್ರಮ ಬಹಿರಂಗ ಕಾನೂನು ಮತ್ತು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಇದೊಂದು ಎಗ್ಗಿಲ್ಲದ ಅಧಿಕಾರ ದುರುಪಯೋಗದ ಪರಮಾವಧಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆಯನ್ನು ರೈತರ ಜಾನುವಾರು ನೀರು ಕುಡಿಯಲು ಶೀಘ್ರವಾಗಿ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.217 ನೇ ದಿನದ ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಹೋರಾಟದ ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಜೆ. ಮಲ್ಲಿಕಾರ್ಜುನ ಸಿರಿಗೇರಿ, ಪ್ರಕಾಶಕ ಡಿ.ಎಂ. ಬಡಿಗೇರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ರವಿ ಕಾಂತನವರ, ಶಿವಾನಂದಯ್ಯ ಬೀಳಗಿಮಠ, ರಾಜಶೇಖರ ಏಳುಬಾವಿ, ಇಂಜಿನಿಯರ್ ವಿನಯ ಸಜ್ಜನ, ಉಮೇಶ ಗಣಪಾ ಕುಣಿಕೇರಿ, ಬಸವರಾಜ ಪೂಜಾರ ಕಾಸನಕಂಡಿ, ಮಖಬುಲ್ ರಾಯಚೂರು, ಮಹಾದೇವಪ್ಪ ಮಾವಿನಮಡು, ಹಳ್ಳೆರಾವ್ ಎಂ.ಜೋಶಿ, ಶರಣು ಶೆಟ್ಟರ್, ವಿನೋದ ಕಿನ್ನಾಳ, ಕನಕರಾಯ ಕೆ.ಬಿ, ಹನುಮಂತರಾವ್, ರುದ್ರಪ್ಪ ಭಂಡಾರಿ, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ, ಅಭಿಜಿತ್ ಅಂಡಗಿ, ಲಕ್ಷ್ಮವ್ವ ಆಡಿನ, ಸುಮಾ ಕಮ್ಮಾರ, ಶಶಿಕಲಾ ಹೊಸಮನಿ, ಕನಕಮ್ಮ ಹೊಸಮನಿ, ಗಂಗಮ್ಮ ಕುರುಗೋಡು, ರತ್ನಮ್ಮ ದೊಡ್ಡಮನಿ ಪಾಲ್ಗೊಂಡರು.