ಬಸವ ಎಲ್ಲ ಸಮಾಜ ಸುಧಾರಕರಿಗೂ ಆದರ್ಶ ವ್ಯಕ್ತಿ: ಬಾ.ನಂ.ಲೋಕೇಶ್

KannadaprabhaNewsNetwork | Updated : May 10 2024, 11:47 PM IST

ಸಾರಾಂಶ

ಗಾಂಧೀಜಿ, ಅಂಬೇಡ್ಕರ್, ಕನಕದಾಸರು ಸೇರಿ ಎಲ್ಲರನ್ನೂ ಸಮಾಜ ಸುಧಾರಕರು ಎಂದು ಕರೆಯುತ್ತೇವೆ. ಇವರೆಲ್ಲರಿಗೂ ಮೂಲ ಬುನಾದಿ ಹಾಕಿಕೊಟ್ಟವರೇ ಬಸವಣ್ಣನವರು.

ಕನ್ನಡಪ್ರಭ ವಾರ್ತೆ ಹಾಸನ

ಕನಕದಾಸರು, ಗಾಂಧೀಜಿ, ಅಂಬೇಡ್ಕರ್ ಸೇರಿ ಎಲ್ಲಾ ಸಮಾಜ ಸುಧಾರಕರಿಗೆ ಆದರ್ಶ ವ್ಯಕ್ತಿಯಾದ ಮಹಾನುಭಾವ ಜಗಜ್ಯೋತಿ ಬಸವಣ್ಣನವರು ಎಂದು ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ನಾಡಶ್ರೀ ಬಾ.ನಂ.ಲೋಕೇಶ್ ತಿಳಿಸಿದರು.

ನಗರದ ಶ್ರೀ ಜವೇನಹಳ್ಳಿ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಬಸವ ಜಯಂತಿ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬಸವಶ್ರೀ ರಾಷ್ಟ್ರ ಪ್ರಶಸ್ತಿ ಪ್ರಧಾನ, ವಚನ ಗೀತ ಗಾಯನ, ವಚನ ನೃತ್ಯ ವೈಭವ, ಕವಿಗೋಷ್ಠಿ, ವಿಚಾರಗೋಷ್ಠಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಹೆಸರು ಹೇಳಿದರೇ ಮೈ ರೋಮಾಂಚನವಾಗುತ್ತದೆ. ನಮ್ಮಲ್ಲಿ ಹರಿಯುವ ರಕ್ತ ಶುದ್ಧಿ ಆಗುತ್ತದೆ. ಬಸವಣ್ಣನವರು ೧೨ನೇ ಶತಮಾನದಲ್ಲಿ ಸರ್ವರನ್ನೂ ಸಮವಾಗಿ ನೋಡುವಂತಹ ದೃಷ್ಟಿಯನ್ನು ಇಡೀ ಸಮಾಜಕ್ಕೆ ಕೊಟ್ಟರು. ಗಾಂಧೀಜಿ, ಅಂಬೇಡ್ಕರ್, ಕನಕದಾಸರು ಸೇರಿ ಎಲ್ಲರನ್ನೂ ಸಮಾಜ ಸುಧಾರಕರು ಎಂದು ಕರೆಯುತ್ತೇವೆ. ಇವರೆಲ್ಲರಿಗೂ ಮೂಲ ಬುನಾದಿ ಹಾಕಿಕೊಟ್ಟವರೇ ಬಸವಣ್ಣನವರು ಎಂದು ಹೇಳಿದರು. ಶ್ರೀ ಜವೇನಹಳ್ಳಿ ಮಠದ ಮಠಾಧೀಶ ಶ್ರೀ ಸಂಗಮೇಶ್ವರ ಸ್ವಾಮೀಜಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಂ.ಜಿ.ಆರ್, ಅರಸು ಅವರಿಗೆ ಬಸವಶ್ರೀ ರಾಷ್ಟ್ರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ವಚನ ನೃತ್ಯ ವೈಭವದಲ್ಲಿ ಎಸ್. ಮೈತ್ರಿ, ದಿವ್ಯಶ್ರೀ, ಮನ್ವಿತಾಮೂರ್ತಿ, ಇಂಪು, ದಿಲೀಪ್, ಛಾಯ, ದೀಕ್ಷಾ ಭಾಗವಹಿಸಿದ್ದರು. ಬೋರೇಗೌಡ, ರೇಣುಕಾ ದಿವಾಕರ್ ಕವಿಗೋಷ್ಠಿ ನಡೆಸಿಕೊಟ್ಟರು. ಸಾಹಿತಿಗಳು ವಚನ ಪಟಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಬಸವ ಕೇಂದ್ರದ ಯು.ಎಸ್. ಬಸವರಾಜು, ಕೌಸ್ತಭ ಪ್ರಕಾಶನ ಸಂಪಾದಕಿ, ಚುಟುಕು ಸಿರಿ ಡಾ. ರತ್ನ ಹಾಲಪ್ಪಗೌಡ, ಅರಕಲಗೂಡು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುಂದರೇಶ್ ಉಡುವಾರೆ, ಹೊಳೆನರಸೀಪುರ ತಾಲೂಕು ಅಧ್ಯಕ್ಷೆ ಪ್ರೇಮ ಮಂಜುನಾಥ್, ಸಮಾಜಸೇವಕಿ ಕಾಂಚಾನ ಮಾಲಾ, ಅಖಿಲ ಭಾರತ ವೀರಶೈವ ಮಹಾಮಂಡಲದ ಯುವ ಘಟಕದ ಅಧ್ಯಕ್ಷ ಅವಿನಾಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭ ಮಹೇಶ್, ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್, ಧನ್ಯಕುಮಾರ್ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಗಿರೀಜಾ ನಿರ್ವಾಣಿ ನಡೆಸಿದರು, ಪುಷ್ಪ ಪ್ರಾರ್ಥಿಸಿದರು, ವಂದನಾರ್ಪಣೆಯನ್ನು ಮಂಜುನಾಥ್ ನಿರ್ವಹಿಸಿದರು. ಸಕಲೇಶಪುರ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್ ಜೆ. ರಾಜು ನಿರ್ವಹಣೆ ಮಾಡಿದರು.

Share this article