ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಬಸವ ಜಯಂತಿ ಆಚರಣೆ!

KannadaprabhaNewsNetwork |  
Published : Apr 25, 2026, 02:00 AM IST
ಮೆರವಣಿಗೆ ಸಿದ್ಧವಾಗಿರುವ ಬಸವೇಶ್ವರ ಮೂರ್ತಿ | Kannada Prabha

ಸಾರಾಂಶ

ಜಗತ್ತಿಗೆ ಸಮಾನತೆ, ಐಕ್ಯತೆ ಸಾರಿದ, ವಿಶ್ವಗುರು ಬಸವಣ್ಣನ ಜಯಂತಿ ಆಚರಣೆಗೆ ನಗರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಅದರೊಂದಿಗೆ ಬಣ ರಾಜಕಾರಣ ಶುರುವಾಗಿದೆ.

ಹುಬ್ಬಳ್ಳಿ:

ಜಗತ್ತಿಗೆ ಸಮಾನತೆ, ಐಕ್ಯತೆ ಸಾರಿದ, ವಿಶ್ವಗುರು ಬಸವಣ್ಣನ ಜಯಂತಿ ಆಚರಣೆಗೆ ನಗರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ಅದರೊಂದಿಗೆ ಬಣ ರಾಜಕಾರಣ ಶುರುವಾಗಿದೆ. ನಗರದಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಆಚರಿಸಬೇಕಿದ್ದ ಬಸವ ಜಯಂತಿಗೆ 2ನೇ ಬಾರಿ ಆಚರಣೆಗೆ ವೇದಿಕೆ ಸಜ್ಜಾಗುತ್ತಿದೆ.

ಕಳೆದ ವಾರವಷ್ಟೇ ವೀರಶೈವ ಸಂಘಟನಾ ಸಮಿತಿ ಮೂರುಸಾವಿರ ಮಠದಲ್ಲಿ ಬಸವ ಜಯಂತಿ ಆಚರಿಸಿತ್ತು. ಆದರೆ, ಸಮಾಜದ ಹಿರಿಯರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡದೆ ಕೆಲ ಮುಖಂಡರಿಗೆ ಸೀಮಿತವಾಗಿತ್ತು. ಸೆಂಟ್ರಲ್‌ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅವರ ಆಣತಿಯಂತೆ ಎಲ್ಲ ಕಾರ್ಯಕ್ರಮ ನಡೆದಿದೆ. ಸಾಕಷ್ಟು ಲೋಪದೋಷಗಳಾಗಿವೆ ಎಂಬ ಆರೋಪ ಕೇಳಿ ಬಂದಿದೆ.

ಯಡಿಯೂರಪ್ಪಗೆ ಪುರಸ್ಕಾರ:

ನಗರದಲ್ಲಿ ಬಿಜೆಪಿಯ ಇನ್ನೊಂದು ಬಣದ ಮಲ್ಲಿಕಾರ್ಜುನ ಸಾವಕಾರ ಮತ್ತಿತರರು ಸೇರಿ ಅದೇ ಮೂರುಸಾವಿರ ಮಠದಲ್ಲಿ ಮೇ 3ರಂದು ಮತ್ತೊಮ್ಮೆ ಬಸವ ಜಯಂತಿ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಮತ್ತು ಅವರು ಇದು ಪಕ್ಷಾತೀತ ಕಾರ್ಯಕ್ರಮ ಆಗಲಿದೆ ಎಂದು ಹೇಳಿಕೊಂಡಿದ್ದಾರೆ.

ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಇದೇ ಕಾರ್ಯಕ್ರಮದಲ್ಲಿ ಬಸವ ಪುರಸ್ಕಾರ ನೀಡಲಾಗುತ್ತಿದೆ. ಈಗಲೂ ಬಸವೇಶ್ವರರ ಭಾವಚಿತ್ರದ ಬೃಹತ್‌ ಮೆರವಣಿಗೆ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ಬಿಗ್‌ ಬಾಸ್‌ ಸ್ಪರ್ಧಿ ಕಾವ್ಯಾ ಶೈವ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಬೃಹತ್‌ ಗಾತ್ರದ ಬಸವೇಶ್ವರ ಮೂರ್ತಿ ತಯಾರಿಸಲಾಗಿದೆ.

ಜಯಂತಿ ಮುಂದೂಡಿ:

ಬಸವ ಜಯಂತಿ ಹೆಸರಲ್ಲಿ ಬಣ ರಾಜಕೀಯಕ್ಕೆ ನಾಂದಿ ಹಾಡಿರುವ ಹಿನ್ನೆಲೆಯಲ್ಲಿ ಬಸವ ಜಯಂತಿ ಬೇಡ ಬಸವ ಪುರಸ್ಕಾರ ಬೇಕಾದರೆ ಮಾಡಲಿ. ಈಗಲೇ ಮಾಡಿದರೆ ಸಮಾಜದಲ್ಲಿ ತಪ್ಪು ಸಂದೇಶ ರವಾನೆ ಆಗುತ್ತದೆ. ಹೀಗಾಗಿ ಕೆಲಕಾಲ ಕಾರ್ಯಕ್ರಮ ಮುಂದೂಡಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಲಿಂಗಾಯತ ಸಮಾಜದ ಕೆಲ ಮುಖಂಡರು ಈ ಸಂಘಟಕರಿಗೆ ಹೇಳಿದ್ದಾರೆ. ಆದರೆ, ಈಗ ಉಂಟಾಗಿರುವ ಬಣ ರಾಜಕೀಯ ಮುಂದಿನ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಸಮಾಜದ ಹಿರಿಯರು ಯಾವ ರೀತಿ ಈ ಸಮಸ್ಯೆ ನಿವಾರಿಸುತ್ತಾರೆಂಬುದು ಸದ್ಯದ ಕುತೂಹಲವಾಗಿದ್ದು ಮೇ 3ರಂದು ಕಾರ್ಯಕ್ರಮ ನಡೆಯುತ್ತದೆಯೋ ಅಥವಾ ಮುಂದೂಡಲಾಗುತ್ತದೆಯೋ ಎಂಬುದನ್ನು ಕಾಯ್ದು ನೋಡಬೇಕಷ್ಟೇ!. ಕಳೆದ ವಾರ ನಡೆಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಕೆಲವೊಂದಿಷ್ಟು ಲೋಪದೋಷಗಳಾಗಿದ್ದರಿಂದ ಅಸಮಾಧಾನ ಉಂಟಾಗಿದೆ. ಹೀಗಾಗಿ ಹುಡುಗರೆಲ್ಲರೂ ಸೇರಿಕೊಂಡು ಪಕ್ಷಾತೀತವಾಗಿ ಬಸವ ಪುರಸ್ಕಾರ ಕಾರ್ಯಕ್ರಮ ಹಾಗೂ ಬಸವ ಜಯಂತಿ ನಡೆಸಲು ನಿರ್ಧರಿಸಿದ್ದಾರೆ.

ಮಲ್ಲಿಕಾರ್ಜುನ ಸಾವಕಾರ, ಲಿಂಗಾಯತ ಮುಖಂಡರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ
ದಶಕದ ಬಳಿಕ ಹುಬ್ಬಳ್ಳಿಯಲ್ಲಿ ಇನ್‌ಕಾಮೆಕ್ಸ್‌!